ಟಿ20 ವಿಶ್ವಕಪ್‌ನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಪಾಕ್ ನಾಯಕ; ಬೇಡದ ದಾಖಲೆಗೆ ಕೊರಳೊಡ್ಡಿದ ಬಾಬರ್..!
T20 World Cup 2022: ಇಡೀ ಟೂರ್ನಿಯಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಗೆ ಪಾಕಿಸ್ತಾನ ನಾಯಕ ಬಾಬರ್ ಪಾತ್ರರಾಗಿದ್ದಾರೆ.
13 ವರ್ಷಗಳ ನಂತರ ಎರಡನೇ ಬಾರಿಗೆ ವಿಶ್ವಕಪ್ ಗೆಲ್ಲುವ ಪಾಕಿಸ್ತಾನದ ಕನಸು ಕನಸಾಗಿಯೇ ಉಳಿದಿದೆ. ಬಾಬರ್ ಅಜಮ್ (Babar Azam) ನಾಯಕತ್ವದ ಪಾಕಿಸ್ತಾನಿ ತಂಡ ಟಿ20 ವಿಶ್ವಕಪ್ (T20 World Cup 2022) ಗೆಲ್ಲುವ ಅವಕಾಶವನ್ನು ತಾನು ಮಾಡಿದ ತಪ್ಪುಗಳಿಂದಲೇ ಕಳೆದುಕೊಂಡಿತು. ನವೆಂಬರ್ 13 ರ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪಂದ್ಯದ ಜೊತೆಗೆ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇಡೀ ಪಂದ್ಯಾವಳಿಯಂತೆ, ಈ ಫೈನಲ್‌ನಲ್ಲೂ ಪಾಕಿಸ್ತಾನದ ಬೌಲರ್‌ಗಳು ತಮ್ಮ ಪರಾಕ್ರಮ ತೋರಿಸಿದರು. ಆದರೆ ತಂಡದ ಬ್ಯಾಟಿಂಗ್ ವಿಭಾಗ ಮಾಡಿದ ತಪ್ಪಿನಿಂದ ಪಾಕಿಸ್ತಾನದ ಕೈಯಿಂದ ಚಾಂಪಿಯನ್ ಪಟ್ಟ ಕೈಜಾರಿತು. ಇದರಲ್ಲಿ ಪ್ರಮುಖವಾಗಿ ನಾಯಕ ಬಾಬರ್ ಅಜಮ್ ಮಾಡಿದ ಆಮೆಗತಿಯ ಬ್ಯಾಟಿಂಗ್ ತಂಡದ ಇತರ ಆಟಗಾರರು ಒತ್ತಡಕ್ಕೆ ಸಿಲುಕಿಸುವಂತೆ ಮಾಡಿತು. ಇಡೀ ಟೂರ್ನಿಯಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಪಾಕ್ ನಾಯಕ ತನ್ನ ಹೆಸರಿನಲ್ಲಿ ಬೇಡದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 137 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಪಾಕಿಸ್ತಾನದ ಬೌಲರ್‌ಗಳು ತಂಡವನ್ನು ಗೆಲುವಿನ ದಡ ಸೇರಿಸಲು ಅತ್ಯುತ್ತಮ ಪ್ರಯತ್ನ ಮಾಡಿದರು. ಆದರೆ ಬೆನ್ ಸ್ಟೋಕ್ಸ್ ಅವರ ಅತ್ಯುತ್ತಮ ಇನ್ನಿಂಗ್ಸ್ ಆಧಾರದ ಮೇಲೆ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಫಾರ್ಮ್‌ನಿಂದ ನಲುಗಿದ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಫೈನಲ್‌ನಲ್ಲಿ 32 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಇದಕ್ಕಾಗಿ ಅವರು ಬರೋಬ್ಬರಿ 28 ಎಸೆತಗಳನ್ನು ಎದುರಿಸಬೇಕಾಯಿತು.
ಬಾಬರ್ ಹೆಸರಿಗೆ ಬೇಡದ ದಾಖಲೆ
ಇಡೀ ಟೂರ್ನಿಯಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಬ್ಯಾಟ್ಸ್‌ಮನ್ ಎಂಬ ಕುಖ್ಯಾತಿಗೆ ಪಾಕಿಸ್ತಾನ ನಾಯಕ ಬಾಬರ್ ಪಾತ್ರರಾಗಿದ್ದಾರೆ. ಬಾಬರ್ ಅಜಮ್ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದು ಇದೇ ಮೊದಲಲ್ಲ ಏಷ್ಯಾಕಪ್ನಲ್ಲೂ ಬಾಬರ್ ಬ್ಯಾಟ್ ಸದ್ದು ಮಾಡಿರಲಿಲ್ಲ. ಈ ವಿಶ್ವಕಪ್‌ನ ಪವರ್‌ಪ್ಲೇಯಲ್ಲಿ (1-6 ಓವರ್‌ಗಳು) ಬ್ಯಾಟಿಂಗ್‌ಗೆ ಬಂದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅತ್ಯಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ ಬ್ಯಾಟ್ಸ್ಮನ್ಗಳಲ್ಲಿ ಬಾಬರ್ ಮೊದಲಿಗರಾಗಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಪಂದ್ಯಾವಳಿಯ ಸೂಪರ್-12 ಸುತ್ತಿನಿಂದ ಫೈನಲ್‌ವರೆಗೆ, ಪವರ್‌ಪ್ಲೇನಲ್ಲಿ ಬಾಬರ್ ಕೇವಲ 80 ರ ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಕಳಪೆ ಆಟ; ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ಮುಂದಾದ ಆಸೀಸ್ ಆರಂಭಿಕ..!
ಬಾಬರ್ ಹೊರತುಪಡಿಸಿ, ಈ ಟೂರ್ನಿಯಲ್ಲಿ ಆಮೆಗತಿಯ ಬ್ಯಾಟಿಂಗ್ ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಿಂಬಾಬ್ವೆ ನಾಯಕ ಕ್ರೇಗ್ ಇರ್ವಿನ್ ಕೂಡ ಸೇರಿದ್ದು, ಅವರು ಕೂಡ 80 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಗುಂಪಿನಲ್ಲಿ ಟೀಂ ಇಂಡಿಯಾ ಆರಂಭಿಕರಿಬ್ಬರು ಸೇರ್ಪಡೆಗೊಂಡಿದ್ದು, ಅವರ ಕತೆಯೂ ಭಿನ್ನವಾಗಿಲ್ಲ. ಪವರ್‌ಪ್ಲೇಯಲ್ಲಿ ಕೆಎಲ್ ರಾಹುಲ್ 89.47 ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 94.74 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
ಸತತ ಎರಡನೇ ಟೂರ್ನಿಯಲ್ಲಿ ಬಾಬರ್ ಕಳಪೆ ಬ್ಯಾಟಿಂಗ್
2022ರ ಏಷ್ಯಾಕಪ್ನಿಂದ ಬಾಬರ್ ಅಜಮ್ ಅವರ ಕಳಪೆ ಫಾರ್ಮ್ ಪ್ರಾರಂಭವಾಯಿತು. ಆ ಟೂರ್ನಿಯಲ್ಲೂ ಪಾಕ್ ನಾಯಕ ಕಂಪ್ಲೀಟ್ ಫ್ಲಾಪ್ ಆಗಿದ್ದರು. ಹಾಗೆಯೇ ಈ ಬಾರಿ ವಿಶ್ವಕಪ್‌ನಲ್ಲೂ ಅವರ ಬ್ಯಾಟ್ ಮೌನವಾಗಿತ್ತು. ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಮಾತ್ರ ಬಾಬರ್ ಅರ್ಧಶತಕ ಗಳಿಸಿದ್ದರು. ಈ ಟೂರ್ನಿಯಲ್ಲಿ ಒಟ್ಟು 6 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಬಾಬರ್ 17.71 ಸರಾಸರಿಯೊಂದಿಗೆ ಕೇವಲ 124 ರನ್ ಗಳಿಸಿದರು. ಇದರಲ್ಲಿ ಅವರ ಸ್ಟ್ರೈಕ್ ರೇಟ್ ಕೇವಲ 93 ಆಗಿತ್ತು. ಅಲ್ಲದೆ ಇಡೀ ಪಂದ್ಯಾವಳಿಯಲ್ಲಿ ಬಾಬರ್ 13 ಬೌಂಡರಿಗಳನ್ನು ಬಾರಿಸಿದರೆ, ಅವರ ಬ್ಯಾಟ್ನಿಂದ ಒಂದೇ ಒಂದು ಸಿಕ್ಸರ್ ಹೊರಬರಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Mon, 14 November 22