ಟಿ20 ಕ್ರಿಕೆಟ್‌ನಲ್ಲಿ ಕಳಪೆ ಆಟ; ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಮುಂದಾದ ಆಸೀಸ್ ಆರಂಭಿಕ..!
David Warner: ವಾರ್ನರ್ ಟಿ20 ವಿಶ್ವಕಪ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ 11 ರ ಸರಾಸರಿಯಲ್ಲಿ ಕೇವಲ 44 ರನ್ ಮಾತ್ರ ಗಳಿಸಿದರು. ಅಲ್ಲದೆ ತಮ್ಮ ತವರು ಮೈದಾನದಲ್ಲೇ ಒಂದೇ ಒಂದು ಅರ್ಧ ಶತಕವನ್ನು ಸಹ ಬಾರಿಸಲಿಲ್ಲ.
ಟಿ20 ಕ್ರಿಕೆಟ್‌ಗೆ ಹೊಸ ಚಾಂಪಿಯನ್ ಸಿಕ್ಕಿದೆ. ಸೋಮವಾರ ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2022) ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಎರಡನೇ ಬಾರಿಗೆ ಟಿ20 ಚಾಂಪಿಯನ್ ಆದ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ, ಈ ಟೂರ್ನಮೆಂಟ್ ಮುಗಿಯುತ್ತಿದ್ದಂತೆ ಅನುಭವಿ ಕ್ರಿಕೆಟಿಗರೊಬ್ಬರು ಟೆಸ್ಟ್ ಕ್ರಿಕೆಟ್ ತ್ಯಜಿಸುವುದಾಗಿ ಘೋಷಿಸಿದ್ದಾರೆ. 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಹೇಳಿಕೊಂಡಿದ್ದಾರೆ.
ಡೇವಿಡ್ ವಾರ್ನರ್ ಸಂದರ್ಶನವೊಂದರಲ್ಲಿ ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್ ತೊರೆಯುವ ಸುಳಿವು ನೀಡಿದ್ದಾರೆ. ವಾರ್ನರ್ ಅವರು 2024 ರ ಟಿ20 ವಿಶ್ವಕಪ್ ಆಡಲು ಪ್ರಯತ್ನಿಸುವುದಾಗಿ ಹೇಳಿದ್ದು, ಹೀಗಾಗಿ ಪ್ರತಿಷ್ಠಿತ ಆಶಸ್ ಸರಣಿಯ ನಂತರ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆಗಳಿವೆ.
ವಾರ್ನರ್ ಟೆಸ್ಟ್‌ಗೆ ವಿದಾಯ ಹೇಳುತ್ತಾರಾ?
ಸಂದರ್ಶನವೊಂದರಲ್ಲಿ ಮಾತನಾಡಿದ ಡೇವಿಡ್ ವಾರ್ನರ್,’ಟೆಸ್ಟ್ ಕ್ರಿಕೆಟ್ ನಾನು ಮೊದಲು ತೊರೆಯುವ ಸ್ವರೂಪವಾಗಿರುತ್ತದೆ. ಮುಂದಿನ ಆವೃತ್ತಿಯ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ಬಹುಶಃ ಮುಂದಿನ 12 ತಿಂಗಳುಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ನನ್ನ ಕೊನೆಯ ಸಮಯವಾಗಿರುತ್ತದೆ ಎಂದು ವಾರ್ನರ್ ಹೇಳಿದ್ದಾರೆ. ಡೇವಿಡ್ ವಾರ್ನರ್ ಅವರ ಟೆಸ್ಟ್ ದಾಖಲೆ ಅದ್ಭುತವಾಗಿದ್ದು, ಅವರು 176 ಇನ್ನಿಂಗ್ಸ್‌ಗಳಲ್ಲಿ 7817 ರನ್ ಗಳಿಸಿದ್ದಾರೆ. 46.52 ಸರಾಸರಿಯಲ್ಲಿ ರನ್ ಕಲೆಹಾಕಿರುವ ವಾರ್ನರ್ ಅವರ ಬ್ಯಾಟ್‌ನಿಂದ 34 ಅರ್ಧ ಶತಕ ಹಾಗೂ 24 ಶತಕಗಳು ಹೊರಬಂದಿವೆ. ಜೂನ್ 16, 2023 ರಿಂದ ನಡೆಯಲಿರುವ ಆಶಸ್ ಸರಣಿಯು ಡೇವಿಡ್ ವಾರ್ನರ್ ಅವರ ಕೊನೆಯ ಟೆಸ್ಟ್ ಸರಣಿಯಾಗುವ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ: T20 World Cup 2022: ಈ ವಿಶ್ವಕಪ್‌ನಲ್ಲಿ ಸಿಕ್ಸರ್ಗಳ ಮಳೆಗರೆದ ಟಾಪ್ 5 ಬ್ಯಾಟರ್ಗಳಿವರು
ಟಿ20 ವಿಶ್ವಕಪ್‌ನಲ್ಲಿ ವಾರ್ನರ್ ವಿಫಲ
ಟಿ20 ವಿಶ್ವಕಪ್‌ನಲ್ಲಿ ವಾರ್ನರ್ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ವಾರ್ನರ್, ಪ್ರಸ್ತುತ ಯುಗದ ಅತ್ಯುತ್ತಮ ಟಿ20 ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ ವಾರ್ನರ್, ಟಿ20 ವಿಶ್ವಕಪ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ 11 ರ ಸರಾಸರಿಯಲ್ಲಿ ಕೇವಲ 44 ರನ್ ಮಾತ್ರ ಗಳಿಸಿದರು. ಅಲ್ಲದೆ ತಮ್ಮ ತವರು ಮೈದಾನದಲ್ಲೇ ಒಂದೇ ಒಂದು ಅರ್ಧ ಶತಕವನ್ನು ಸಹ ಬಾರಿಸಲಿಲ್ಲ. ಹಾಗೆಯೇ ಆತಿಥೇಯರಿಗೆ ವಿಲನ್ ಆದ ವರುಣ ರಾಯ ಕಾಂಗರೂಗಳ ಸೆಮಿಫೈನಲ್ ಆಸೆಗೆ ಎಳ್ಳು ನೀರು ಬಿಟ್ಟ.
ಆಸ್ಟ್ರೇಲಿಯಾ ಹೊರತು ಪಡಿಸಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೂಪರ್ 12 ಸುತ್ತಿನಿಂದ ಸೆಮಿಫೈನಲ್‌ಗೆ ಪ್ರವೇಶಿಸಿದವು. ಇದರ ನಂತರ, ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್‌ನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದವು. ಅಂತಿಮವಾಗಿ ಇಂಗ್ಲೆಂಡ್ ಪಾಕಿಸ್ತಾವನ್ನು ಸೋಲಿಸುವ ಮೂಲಕ ಟಿ20 ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಫೈನಲ್‌ನಲ್ಲಿ ಬೆನ್ ಸ್ಟೋಕ್ಸ್ ಅಜೇಯ ಅರ್ಧಶತಕ ಬಾರಿಸುವ ಮೂಲಕ ಇಂಗ್ಲೆಂಡ್‌ಗೆ ಜಯ ತಂದುಕೊಟ್ಟರು. ಅದೇ ಸಮಯದಲ್ಲಿ ಸ್ಯಾಮ್ ಕರನ್ ಕೇವಲ 12 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಮತ್ತು ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Mon, 14 November 22