
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam attack) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಮೃತಪಟ್ಟಿದ್ದಾರೆ. ಈ ದುಷ್ಕೃತ್ಯ ಹಿನ್ನಲೆಯಲ್ಲಿ ಭಾರತವು ಪಾಕಿಸ್ತಾನ್ (India vs Pakistan) ನಡುವಣ ಎಲ್ಲಾ ರೀತಿಯ ಸಂಬಂಧಗಳನ್ನು ಕಡಿದುಕೊಂಡಿದೆ. ಇದರ ನಡುವೆ ಉಭಯ ದೇಶಗಳ ನಡುವಣ ಕ್ರಿಕೆಟ್ ಪಂದ್ಯಕ್ಕೂ ಬ್ರೇಕ್ ಬೀಳಬೇಕೆಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ, ಪಹಲ್ಗಾಮ್‌ನಲ್ಲಿ ಪಾಕಿಸ್ತಾನದವರು ದಾಳಿ ಮಾಡಿದ್ದಾರೆ ಎಂಬುದಕ್ಕೆ ಏನು ಪುರಾವೆ ಇದೆ ಎಂದು ಕೇಳಿದ್ದಾರೆ ಪಾಕ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi).
ಚಿಟ್ ಚಾಟ್ವೊಂದರಲ್ಲಿ ಶಾಹಿದ್ ಅಫ್ರಿದಿ ಅವರಿಗೆ ಭಾರತದ ಮೇಲಿನ ಉಗ್ರರ ದಾಳಿ ಹಾಗೂ ಭಾರತ ಮತ್ತು ಪಾಕಿಸ್ತಾನ್ ನಡುವಣ ಕ್ರಿಕೆಟ್ ಬಗ್ಗೆ ಪ್ರಶ್ನಿಸಲಾಗಿತ್ತು. ಪಾಕಿಸ್ತಾನದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅಫ್ರಿದಿ, “ನನಗೆ ಕ್ರಿಕೆಟ್ ಮತ್ತು ಕ್ರೀಡಾ ರಾಜತಾಂತ್ರಿಕತೆಯಲ್ಲಿ ಆಳವಾದ ನಂಬಿಕೆ ಇದೆ. ಇದರಲ್ಲಿ ಯಾವುದೇ ರಾಜಕೀಯ ಇರಬಾರದು.
ನಾವು ನೆರೆಯ ರಾಷ್ಟ್ರಗಳಾಗಿದ್ದರೆ, ನಾವು ಪರಸ್ಪರ ಕಾಳಜಿ ವಹಿಸಬೇಕು. ಆದರೆ ಈ ಘಟನೆ ಇದೀಗ ನಡೆದಿದೆ. ಇದಾಗ್ಯೂ ನೀವು ನೇರವಾಗಿ ಪಾಕಿಸ್ತಾನದ ಹೆಸರನ್ನು ಹೆಸರಿಸಿದ್ದೀರಿ. ಹೀಗೆ ಪಾಕಿಸ್ತಾನ್ ಈ ಕೃತ್ಯ ಎಸೆಗಿದ್ದಾರೆ ಎನ್ನಲು ಕನಿಷ್ಠ ಪುರಾವೆಗಳೊಂದಿಗೆ ಬನ್ನಿ. ಅದನ್ನು ಜಗತ್ತಿಗೆ ಮುಂದಿಡಿ. ಪುರಾವೆಗಳಿಲ್ಲದೆ ಪಾಕಿಸ್ತಾನವನ್ನು ದೂರಬೇಡಿ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಆದಾಗ್ಯೂ, ಘಟನೆಯ ಬಗ್ಗೆ ಅಫ್ರಿದಿ ವಿಷಾದ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕರನ್ನು ಯಾವುದೇ ಧರ್ಮದವರು ಬೆಂಬಲಿಸುವುದಿಲ್ಲ. ಪಾಕಿಸ್ತಾನದಲ್ಲೂ ಇಂತಹ ಕೃತ್ಯಗಳು ನಡೆಯುತ್ತಿದೆ. ಈ ಘಟನೆಯ ಹೊರತಾಗಿಯೂ, ಎರಡೂ ದೇಶಗಳ ನಡುವಿನ ಸಂಬಂಧಗಳು ಸುಧಾರಿಸಬೇಕು ಎಂದು ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಭಾರತವು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತ ಕೂಡ ಪಾಕಿಸ್ತಾನದೊಂದಿಗಿನ ಗಡಿಯನ್ನು ಮುಚ್ಚಿದೆ. ಅಲ್ಲದೆ, ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ನಾಗರಿಕರನ್ನು ವಾಪಸ್ ಕಳುಹಿಸಲಾಗಿದೆ. ಪಾಕಿಸ್ತಾನಿ ರಾಜತಾಂತ್ರಿಕರ ವೀಸಾಗಳನ್ನು ಸಹ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: IPL 2025: ಅಣ್ಣಾ ಬಿಟ್ ಬಿಡಣ್ಣ… RCB ತಂಡದಲ್ಲಿ ಎಲ್ಲವೂ ಸರಿಯಿಲ್ವಾ?
ಇದರ ಜೊತೆಗೆ ಪಾಕಿಸ್ತಾನದೊಂದಿಗೆ ನೀರು ಹಂಚಿಕೊಳ್ಳುವ ಸಿಂಧೂ ನದಿ ಜಲ ಒಪ್ಪಂದವನ್ನು ಸಹ ಕೊನೆಗೊಳಿಸಲಾಗಿದೆ. ಇದರ ನಡುವೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಕ್ರಿಕೆಟ್ ಪಂದ್ಯಕ್ಕೂ ಬ್ರೇಕ್ ಹಾಕಬೇಕೆಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಮುಂಬರುವ ಐಸಿಸಿ ಟೂರ್ನಿಗಳಲ್ಲಿ ಭಾರತ ಮತ್ತು ಪಾಕ್ ನಡುವೆ ಲೀಗ್ ಹಂತದ ಪಂದ್ಯಗಳು ನಡೆಯದಿದ್ದರೆ ಅಚ್ಚರಿಪಡಬೇಕಿಲ್ಲ.
Published On - 9:04 am, Sun, 27 April 25