20 ಓವರ್​ಗಳವರೆಗೆ ಬ್ಯಾಟ್ ಬೀಸಿ ಕೇವಲ 33 ರನ್ ಕಲೆಹಾಕಿದ ಆರಂಭಿಕ ದಾಂಡಿಗ..!

PSL 2025 Karachi Kings vs Quetta Gladiators: ಪಾಕಿಸ್ತಾನ್ ಸೂಪರ್ ಲೀಗ್​ನ 8ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರಾಚಿ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 175 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ತಂಡವು 119 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ.

20 ಓವರ್​ಗಳವರೆಗೆ ಬ್ಯಾಟ್ ಬೀಸಿ ಕೇವಲ 33 ರನ್ ಕಲೆಹಾಕಿದ ಆರಂಭಿಕ ದಾಂಡಿಗ..!
Saud Shakeel

Updated on: Apr 19, 2025 | 11:54 AM

PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಎಲ್ಲವೂ ಸಾಧ್ಯ. ಇದಕ್ಕೆ ತಾಜಾ ಉದಾಹರಣೆ ಆರಂಭಿಕನಾಗಿ ಕಣಕ್ಕಿಳಿದು 20 ಓವರ್​ಗಳವರೆಗೆ ಬ್ಯಾಟ್ ಮಾಡಿ 33 ರನ್​ಗಳಿಸಿರುವುದು. ಇಂತಹದೊಂದು ಇನಿಂಗ್ಸ್​ ಪಿಎಸ್​ಎಲ್​ನ 8ನೇ ಪಂದ್ಯದಲ್ಲಿ ಕಂಡು ಬಂದಿದೆ. ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕರಾಚಿ ಕಿಂಗ್ಸ್ (KK) ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್ (QG) ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರಾಚಿ ಕಿಂಗ್ಸ್ ಪರ ಟಿಮ್ ಸೈಫರ್ಟ್​ 27 ರನ್ ಬಾರಿಸಿದರೆ, ಡೇವಿಡ್ ವಾರ್ನರ್ 31 ರನ್​ಗಳಿಸಿದರು. ಆ ಬಳಿಕ ಬಂದ ಜೇಮ್ಸ್ ವಿನ್ಸ್ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದರು.

47 ಎಸೆತಗಳನ್ನು ಎದುರಿಸಿದ ಜೇಮ್ಸ್ ವಿನ್ಸ್ ಒಂದು ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 70 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಕರಾಚಿ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

20 ಓವರ್​ಗಳಲ್ಲಿ 33 ರನ್ಸ್​:

176 ರನ್​ಗಳ ಗುರಿ ಬೆನ್ನತ್ತಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದದ್ದು ನಾಯಕ ಸೌದ್ ಶಕೀಲ್ ಹಾಗೂ ಫಿನ್ ಅಲೆನ್. ಕೇವಲ 6 ರನ್​ಗಳಿಸಿ ಅಲೆನ್ ಔಟಾದರೆ, ಇದರ ಬೆನ್ನಲ್ಲೇ ಹಸನ್ ನವಾಝ್ ವಿಕೆಟ್ ಒಪ್ಪಿಸಿದರು. ಇನ್ನು ಕುಸಾಲ್ ಮೆಂಡಿಸ್ (12) ಹಾಗೂ ಖ್ವಾಜಾ ನಫೆ (1), ರೈಲಿ ರೊಸ್ಸೊವ್ (1) ಬಂದ ವೇಗದಲ್ಲೇ ಹಿಂತಿರುಗಿದರು.

ಪರಿಣಾಮ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ಕೇವಲ 47 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಆದರೆ ಅತ್ತ ಆರಂಭಿಕನಾಗಿ ಕಣಕ್ಕಿಳಿದ ಸೌದ್ ಶಕೀಲ್ ಮಾತ್ರ ರಕ್ಷಣಾತ್ಮಕ ಆಟದೊಂದಿಗೆ ಇನಿಂಗ್ಸ್ ಮುಂದುವರೆಸಿದರು.

ಇದರ ನಡುವೆ ಬ್ಯಾಟ್ ಬೀಸಿದ ಮೊಹಮ್ಮದ್ ಅಮೀರ್ 16 ಎಸೆತಗಳಲ್ಲಿ 30 ರನ್ ಬಾರಿಸಿದರು. ಇದಾಗ್ಯೂ ಸೌದ್ ಶಕೀಲ್ ಮಾತ್ರ ಬಿರುಸಿನ ಬ್ಯಾಟಿಂಗ್​ ಮುಂದಾಗಲೇ ಇಲ್ಲ. ಅಲ್ಲದೆ 20 ಓವರ್​ಗಳ ತನಕ ಕ್ರೀಸ್ ಕಚ್ಚಿ ನಿಂತ ಸೌದ್ ಶಕೀಲ್ ಅಂತಿಮವಾಗಿ ಕಲೆಹಾಕಿದ್ದು ಕೇವಲ 33 ರನ್​ಗಳು ಮಾತ್ರ. ಅದು 40 ಎಸೆತಗಳನ್ನು ಎದುರಿಸಿ.

ಮೊದಲ ಓವರ್​ನಿಂದ ಕೊನೆಯವರೆಗೆ ಕ್ರೀಸ್​ನಲ್ಲಿದ್ದ ಸೌದ್ ಶಕೀಲ್ ಬ್ಯಾಟ್​ನಿಂದ ಮೂಡಿಬಂದ ಒಟ್ಟು ಫೋರ್​ಗಳ ಸಂಖ್ಯೆ ಕೇವಲ 3 ಎಂದರೆ ನಂಬಲೇಬೇಕು. ಅಂತಹದೊಂದು ಅಜೇಯ ಇನಿಂಗ್ಸ್ ಆಡಿ ಇದೀಗ ಸೌದ್ ಶಕೀಲ್ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: IPL 2025: ಮೊದಲಾರ್ಧ ಮುಕ್ತಾಯ: RCB ಪ್ಲೇಆಫ್​ಗೇರಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು?

ಇನ್ನು ಸೌದ್ ಶಕೀಲ್ ಅವರ ಈ ಅಜೇಯ 33 ರನ್​ಗಳೊಂದಿಗೆ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 9 ವಿಕೆಟ್ ನಷ್ಟದೊಂದಿಗೆ 20 ಓವರ್​ಗಳಲ್ಲಿ 119 ರನ್​ಗಳಿಸಿ 56 ರನ್​ಗಳಿಂದ ಸೋಲೊಪ್ಪಿಕೊಂಡಿದೆ.