AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!

IPL 2026 RCB vs RR: ಐಪಿಎಲ್​ನ 16ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ ಬರೋಬ್ಬರಿ 201 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ರಾಜಸ್ಥಾನ್ ರಾಯಲ್ಸ್ 18 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಮೊಬೈಲ್ ಫೋನ್ ಬಳಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ: ತನಿಖೆಗೆ ಬಿಸಿಸಿಐ ಸೂಚನೆ..!
Rajastan Royals
ಝಾಹಿರ್ ಯೂಸುಫ್
|

Updated on: Apr 13, 2026 | 2:07 PM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ರಾಜಸ್ಥಾನ್ ರಾಯಲ್ಸ್ (RR) ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕದ (ACU) ತನಿಖೆಗೆ ಗುರಿಯಾಗಿದ್ದಾರೆ. ಪಂದ್ಯದ ವೇಳೆ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಈ ವಿವಾದಕ್ಕೆ ಕಾರಣವಾಗಿದೆ.

ವಿವಾದದ ಹಿನ್ನೆಲೆ ಏನು?

ಏಪ್ರಿಲ್ 10 ರಂದು ಗುವಾಹಟಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಡಗೌಟ್‌ನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಪಕ್ಕದಲ್ಲಿ ಕುಳಿತಿದ್ದ ರೋಮಿ ಭಿಂದರ್ ಅವರು ಮೊಬೈಲ್ ಫೋನ್ ಬಳಸುತ್ತಿರುವುದು ಟೆಲಿವಿಷನ್ ಪರದೆಯ ಮೇಲೆ ಸ್ಪಷ್ಟವಾಗಿ ಗೋಚರಿಸಿತ್ತು.

ಐಪಿಎಲ್ ನಿಯಮಗಳ ಪ್ರಕಾರ, ‘ಪ್ಲೇಯರ್ಸ್ ಅಂಡ್ ಮ್ಯಾಚ್ ಆಫೀಶಿಯಲ್ಸ್ ಏರಿಯಾ’ (PMOA) ಅಡಿಯಲ್ಲಿ ಡಗೌಟ್‌ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಬಿಸಿಸಿಐ ಕ್ರಮವೇನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ವೀಡಿಯೊ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರ ವಿರೋಧಿ ಘಟಕದ (ACU) ತನಿಖಾ ವರದಿಯ ಆಧಾರದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಯಾವ ಕ್ರಮ ಕೈಗೊಳ್ಳಬಹುದು?

  • ಪಂದ್ಯದ ನಿಷೇಧ: ಮುಂದಿನ ಕೆಲವು ಪಂದ್ಯಗಳಿಗೆ ಡಗೌಟ್‌ಗೆ ಪ್ರವೇಶ ನಿಷೇಧಿಸಬಹುದು.
  • ಭಾರೀ ದಂಡ: ದೊಡ್ಡ ಮೊತ್ತದ ದಂಡ ವಿಧಿಸುವ ಸಾಧ್ಯತೆಯಿದೆ.
  • ಎಚ್ಚರಿಕೆ: ಮೊದಲ ಬಾರಿಯ ತಪ್ಪೆಂದು ಪರಿಗಣಿಸಿ ಕಠಿಣ ಎಚ್ಚರಿಕೆ ನೀಡಬಹುದು.

ವೈದ್ಯಕೀಯ ಕಾರಣ ಮುಂದಿಟ್ಟ ರೋಮಿ:

ಇನ್ನೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಮೊಬೈಲ್ ಬಳಸಿದ್ದು ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಅವರು ಶ್ವಾಸಕೋಶದ ಸಮಸ್ಯೆಯಿಂದ (Collapsed lungs) ಚೇತರಿಸಿಕೊಂಡಿದ್ದು, ಅವರಿಗೆ ಮೆಟ್ಟಿಲು ಹತ್ತುವುದು ಅಥವಾ ಹೆಚ್ಚು ಓಡಾಟ ಮಾಡುವುದು ಕಷ್ಟಕರವಾಗಿದೆ.

ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್ ನಡುವೆ ಪದೇ ಪದೇ ಓಡಾಡಲು ಸಾಧ್ಯವಾಗದ ಕಾರಣ ಅವರು ತಮ್ಮ ಬಳಿಯೇ ಫೋನ್ ಇಟ್ಟುಕೊಂಡಿದ್ದರು ಎಂಬ ವಾದ ಕೇಳಿಬರುತ್ತಿದೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ RCB

ಸದ್ಯ ರಾಜಸ್ಥಾನ್ ರಾಯಲ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ, ಈ ಪಂದ್ಯದಲ್ಲಿ ರೋಮಿ ಭಿಂದರ್ ತಂಡದೊಂದಿಗೆ ಇರುತ್ತಾರೆಯೇ ಅಥವಾ ಇಲ್ಲವೇ ಎಂಬುದು ಎಸಿಯು ವರದಿಯ ಮೇಲೆ ಅವಲಂಬಿತವಾಗಿದೆ. ಕ್ರಿಕೆಟ್‌ನ ಪಾವಿತ್ರ್ಯತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಬಿಸಿಸಿಐ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಥವಾ ಖಡಕ್ ಎಚ್ಚರಿಕೆ ನೀಡುವ ಸಾಧ್ಯತೆ ಹೆಚ್ಚಿದೆ.

Follow Us