Rajat Patidar: ಒಂದು ಪರೀಕ್ಷೆ ನಡೆಸಬೇಕಿತ್ತು, ಅದಕ್ಕಾಗಿ ಆತನನ್ನು ಕಣಕ್ಕಿಳಿಸಿದೆವು!

IPL 2026 RCB vs GT: ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಅತ್ತ ಸೋತಿರುವ ಗುಜರಾತ್ ಟೈಟಾನ್ಸ್ ತಂಡವು ದ್ವಿತೀಯ ಕ್ವಾಲಿಫೈಯರ್ ಪಂದ್ಯ ಆಡಲಿದೆ.

Rajat Patidar: ಒಂದು ಪರೀಕ್ಷೆ ನಡೆಸಬೇಕಿತ್ತು, ಅದಕ್ಕಾಗಿ ಆತನನ್ನು ಕಣಕ್ಕಿಳಿಸಿದೆವು!
Rajat Patidar

Updated on: May 27, 2026 | 8:38 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಆರ್​ಸಿಬಿ ತಂಡ ಫೈನಲ್​ಗೇರಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಕಲೆಹಾಕಿದ್ದು ಬರೋಬ್ಬರಿ 254 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್​ಗಳಲ್ಲಿ 162 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್​ಸಿಬಿ 92 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಇದು ನಮಗೆ ಸೂಪರ್ ಪಂದ್ಯವಾಗಿತ್ತು. ವಿಶೇಷವಾಗಿ ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸಿದ ರೀತಿ, ಎಲ್ಲರೂ ಉದ್ದೇಶಪೂರ್ವಕವಾಗಿ ಆಡಿದ ರೀತಿ, ನಮಗೆ ಪ್ಲಸ್ ಪಾಯಿಂಟ್ ಆಯಿತು.

ಆಕ್ರಮಣಕಾರಿ ಮನಸ್ಥಿತಿ:

ನಾವು ಗುಜರಾತ್ ಟೈಟಾನ್ಸ್ ಬೌಲರ್​ಗಳ ವಿರುದ್ಧ ಆರ್ಭಟಿಸಲೇಬೇಕು ಎಂಬ ಯಾವುದೇ ಯೋಜನೆ ಇರಲಿಲ್ಲ. ಆದರೆ ನಾವು ಅವರ ವಿರುದ್ಧ ಅಬ್ಬರಿಸುತ್ತೇವೆ ಎಂಬ ಬಾಂಡಿ ಲಾಂಗ್ವೇಜ್ ತೋರಿಸಬೇಕು ಎಂಬುದನ್ನು ಮೀಟಿಂಗ್​ನಲ್ಲಿ ಚರ್ಚಿಸಿದ್ದವು. ಈ ಮೂಲಕ ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದೆವು. ಅದರಂತೆ ಇದೀಗ ಆಕ್ರಮಣಕಾರಿ ಆಟ ಆಡಿದ್ದೇವೆ ಎಂದು ರಜತ್ ಪಾಟಿದಾರ್ ತಿಳಿಸಿದ್ದಾರೆ.

ಮೈದಾನದ ಬಗ್ಗೆ ಯೋಚಿಸುವುದಿಲ್ಲ!

ಇದೇ ವೇಳೆ ತಮ್ಮ ಆರ್ಭಟದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ಆರಂಭದಲ್ಲಿ, ಪಿಚ್ ಹೇಗೆ ವರ್ತಿಸುತ್ತಿದೆ ಮತ್ತು ಚೆಂಡು ಹೇಗೆ ಬರುತ್ತಿದೆ ಎಂಬುದನ್ನು ನೋಡಲು ನಾನು ಕೆಲವು ಎಸೆತಗಳು, ಅಂದರೆ 8-10 ಎಸೆತಗಳನ್ನು ಆಡುತ್ತೇನೆ. ಅದರ ನಂತರ, ನಾ ಹೇಗೆ ಆಡಬೇಕು ಎಂಬುದರ ಬಗ್ಗೆ ಯೋಜಿಸುತ್ತೇನೆ. ಅಂದರೆ ನಾನು ಯಾವ ಮೈದಾನ ಎಂಬುದರ ಬಗ್ಗೆ ಜಾಸ್ತಿ ಯೋಚಿಸುವುದಿಲ್ಲ. ನಾನು ಆಡುವಾಗ ಪಿಚ್ ಹೇಗಿದೆ ಎಂಬುದನ್ನು ಆಧರಿಸಿ ಬ್ಯಾಟ್ ಬೀಸುತ್ತೇನೆ. ಈ ಮೂಲಕ ಬೌಲರ್​ಗಳನ್ನು ಒತ್ತಡಕ್ಕೆ ಒಳಪಡಿಸುವುದನ್ನು ಇಷ್ಟಪಡುಸತ್ತೇನೆ ಎಂದು ಪಾಟಿದಾರ್ ತಿಳಿಸಿದ್ದಾರೆ.

ನಿಜ ಹೇಳಬೇಕೆಂದರೆ, ಧರ್ಮಶಾಲಾದ ಪಿಚ್​ನಲ್ಲಿ ಸಿಕ್ಸ್​ ಬಾರಿಸುವುದು ಅಂದುಕೊಂಡಂತೆ ಸುಲಭವಾಗಿಲ್ಲ. ಬೌನ್ಸಿ ಪಿಚ್ ಆಗಿದ್ದರಿಂದ ಎಚ್ಚರಿಕೆ ವಹಿಸಬೇಕಿತ್ತು. ಉತ್ತಮ ಬೌನ್ಸ್ ಇತ್ತು ಮತ್ತು ಬೌಲರ್‌ಗಳು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದ ರೀತಿ, ಸ್ಟಂಪ್‌ಗಳ ಮೇಲೆ ಹೆಚ್ಚಿನ ಚೆಂಡುಗಳನ್ನು ಎಸೆದ ರೀತಿಯಿಂದಾಗಿ ಸಿಕ್ಸ್ ಬಾರಿಸುವುದು ಕಷ್ಟವಾಗಿತ್ತು ಎಂದಿದ್ದಾರೆ.

ಟಾಪ್-3 ಪ್ಲ್ಯಾನ್:

ಇನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಬೇಕಿದ್ದರೆ ಟಾಪ್-3 ಬ್ಯಾಟರ್​ಗಳನ್ನು ಬೇಗನೆ ಔಟ್ ಮಾಡುವುದು, ಅಂದರೆ ಪವರ್​ಪ್ಲೇನಲ್ಲೇ ಶುಭ್​ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಅವರ ವಿಕೆಟ್ ಪಡೆಯುವುದು ನಮ್ಮ ಯೋಜನೆಯಾಗಿತ್ತು. ಅದು ವರ್ಕ್ ಆಯಿತು. ಈ ಮೂವರ ವಿಕೆಟ್ ಸಿಗುತ್ತಿದ್ದಂತೆ ನಮ್ಮ ಗೆಲುವು ಖಚಿತವಾಯಿತು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಇಂಪ್ಯಾಕ್ಟ್ ಟೆಸ್ಟ್:

ಇದೇ ವೇಳೆ ರೊಮಾರಿಯೊ ಶೆಫರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿದ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್,  ನಾವು ಫೈನಲ್‌ಗೆ ಹೋದರೆ, ರೊಮಾರಿಯೊ ಶೆಫರ್ಡ್​ ಮಧ್ಯದ ಓವರ್‌ಗಳಲ್ಲಿ ಹೇಗೆ ಬೌಲ್ ಮಾಡುತ್ತಾರೆ ಎಂಬುದನ್ನು ಪರೀಕ್ಷಿಸಬೇಕಿತ್ತು. ಹೀಗಾಗಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿ ಓವರ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: CSK ದಾಖಲೆಯನ್ನೇ ಧೂಳೀಪಟ ಮಾಡಿದ RCB

ಒಟ್ಟಾರೆಯಾಗಿ ಹೇಳುವುದಾದರೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ ರೂಪಿಸಿದ ಎಲ್ಲಾ ಪ್ಲ್ಯಾನ್​​ಗಳು ವರ್ಕ್​ ಆಗಿದೆ. ಈ ಯಶಸ್ವಿ ಯೋಜನೆಗಳೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೇ 31 ರಂದು ನಡೆಯಲಿರುವ ಫೈನಲ್​ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ ಎದುರಾಳಿಯಾಗಲಿರುವವರು ಯಾರು ಎಂಬುದೇ ಈಗ ಕುತೂಹಲ.

 

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us