ದಕ್ಷಿಣ ವಲಯ ತಂಡ ಪ್ರಕಟ: ನಾಲ್ವರು ಕನ್ನಡಿಗರು ಆಯ್ಕೆ
Duleep Trophy 2026: ದುಲೀಪ್ ಟ್ರೋಫಿ ಎಂಬುದು ದೇಶೀಯ ವಲಯ ಟೆಸ್ಟ್ ಟೂರ್ನಿ. 1961-62 ರಲ್ಲಿ ಶುರುವಾದ ಈ ಟೂರ್ನಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ 6 ತಂಡಗಳು, ಅಂದರೆ ಕೇಂದ್ರ ವಲಯ, ದಕ್ಷಿಣ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ಉತ್ತರ ವಲಯ ಮತ್ತು ಈಶಾನ್ಯ ವಲಯ ತಂಡಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

ದೇಶೀಯ ಟೆಸ್ಟ್ ಟೂರ್ನಿ ದುಲೀಪ್ ಟ್ರೋಫಿಗಾಗಿ ದಕ್ಷಿಣ ವಲಯ (ಸೌತ್ ಝೋನ್) ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರುಗಳ ಈ ತಂಡವನ್ನು ತಿಲಕ್ ವರ್ಮಾ ಮುನ್ನಡೆಸಲಿದ್ದು, ಅನುಭವಿ ಆಟಗಾರ ರಿಕ್ಕಿ ಭುಯಿ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಅವರೆಂದರೆ…
- ಕರುಣ್ ನಾಯರ್
- ಶ್ರೇಯಸ್ ಗೋಪಾಲ್
- ಸ್ಮರಣ್ ರವಿಚಂದ್ರನ್
- ವಿದ್ವತ್ ಕಾವೇರಪ್ಪ
ಬಲಿಷ್ಠ ಬ್ಯಾಟಿಂಗ್ ಲೈನಪ್:
ದಕ್ಷಿಣ ವಲಯದ 14 ಸದಸ್ಯರ ಬಲಿಷ್ಠ ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರ ಅತ್ಯುತ್ತಮ ಸಮತೋಲನವಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿರುವ ಹಿರಿಯ ಆಟಗಾರ ಕರುಣ್ ನಾಯರ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ವಿಕೆಟ್ ಕೀಪರ್ ಆಗಿ ಎನ್. ಜಗದೀಶನ್ ಸ್ಥಾನ ಪಡೆದಿದ್ದು, ಶೇಕ್ ರಶೀದ್, ಅಭಿನವ್ ತೇಜ್ರಾನಾ, ಕೆ. ಹಿಮತೇಜ ಮತ್ತು ಸ್ಮರಣ್ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಲಿದ್ದಾರೆ.
ಆಲ್‌ರೌಂಡರ್ ಮತ್ತು ಬೌಲಿಂಗ್ ವಿಭಾಗ:
ಖ್ಯಾತ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರೊಂದಿಗೆ ಟಿ. ತ್ಯಾಗರಾಜನ್ ಮತ್ತು ಕೆ. ಸಾಯಿ ತೇಜ ಆಲ್‌ರೌಂಡರ್ ರೂಪದಲ್ಲಿ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇನ್ನು ವೇಗದ ಬೌಲಿಂಗ್ ಜವಾಬ್ದಾರಿಯನ್ನು ಪ್ರಥಮ ದರ್ಜೆ ಕ್ರಿಕೆಟ್‌ನ ಯಶಸ್ವಿ ಬೌಲರ್ ವಿದ್ವತ್ ಕಾವೇರಪ್ಪ, ಟಿ. ವಿಜಯ್ ಮತ್ತು ಅಮನ್ ಖಾನ್ ಹೆಗಲಿಗೇರಿಸಿಕೊಂಡಿದ್ದಾರೆ.
ಸೌತ್ ಝೋನ್ ಸೆಮಿಫೈನಲ್ಗೆ!
ಕಳೆದ ಆವೃತ್ತಿಯಲ್ಲಿ ರನ್ನರ್-ಅಪ್ ಆಗಿದ್ದ ಕಾರಣ, ದಕ್ಷಿಣ ವಲಯ ತಂಡವು ಈ ಬಾರಿ ನೇರವಾಗಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದಿದೆ. ಆಗಸ್ಟ್ 23 ರಿಂದ ಟೂರ್ನಿ ಆರಂಭವಾದರೂ, ದಕ್ಷಿಣ ವಲಯ ತಂಡವು ತನ್ನ ಮೊದಲ ಸೆಮಿಫೈನಲ್ ಪಂದ್ಯವನ್ನು ಆಗಸ್ಟ್ 30 ರಂದು ಆಡಲಿದೆ.
ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದು ಬರುವ ಉತ್ತರ ವಲಯ (ನಾರ್ತ್ ಝೋನ್) ಅಥವಾ ಪಶ್ಚಿಮ ವಲಯ (ವೆಸ್ಟ್ ಝೋನ್) ತಂಡವನ್ನು ತಿಲಕ್ ವರ್ಮಾ ಪಡೆ ಎದುರಿಸಲಿದೆ.
ಇದನ್ನೂ ಓದಿ: CWG 2026: ಭಾರತೀಯ ಬಾಕ್ಸರ್ಗಳ ಪಂಚ್ಗೆ 7 ಚಿನ್ನದ ಪದಕ!
ದಕ್ಷಿಣ ವಲಯ ತಂಡ: ತಿಲಕ್ ವರ್ಮಾ (ನಾಯಕ), ರಿಕ್ಕಿ ಭುಯಿ (ಉಪನಾಯಕ), ಅಭಿನವ್ ತೇಜ್ರಾನಾ, ಶೇಕ್ ರಶೀದ್, ಕೆ. ಹಿಮತೇಜ, ಸ್ಮರಣ್ ರವಿಚಂದ್ರನ್, ಎನ್. ಜಗದೀಶನ್ (ವಿಕೆಟ್ ಕೀಪರ್), ಕರುಣ್ ನಾಯರ್, ಟಿ. ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಕೆ. ಸಾಯಿ ತೇಜ, ಟಿ. ವಿಜಯ್, ವಿದ್ವತ್ ಕಾವೇರಪ್ಪ, ಅಮನ್ ಖಾನ್.




