
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್‌ಗಳಲ್ಲಿ 250 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ 19.4 ಓವರ್‌ಗಳಲ್ಲಿ 207 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡವು 43 ರನ್ಗಳ ಜಯ ಸಾಧಿಸಿತು.
ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ತಂಡ ಸಾಂಘಿಕ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
“ಆರಂಭದಲ್ಲಿ ಪಿಚ್ ಸ್ವಲ್ಪ ನಿಧಾನಗತಿಯಲ್ಲಿತ್ತು. ಆದರೆ ವಿರಾಟ್ ಭಾಯ್ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಅವರ ಬ್ಯಾಟಿಂಗ್ ಅದ್ಭುತವಾಗಿತ್ತು,” ಎಂದು ರಜತ್ ಶ್ಲಾಘಿಸಿದರು.
ಇನ್ನು 13ನೇ ಓವರ್ ನಂತರ ಪಂದ್ಯದ ವೇಗವನ್ನು ಹೆಚ್ಚಿಸಿದ ಬಗ್ಗೆ ಕೇಳಿದಾಗ, ಬೌಲರ್‌ಗಳ ಮೇಲೆ ಒತ್ತಡ ಹೇರುವುದು ತಮ್ಮ ಗುರಿಯಾಗಿತ್ತು. ಅದರಂತೆ ನಾನು ಹಾಗೂ ಟಿಮ್ ಡೇವಿಡ್ ಬಿರುಸಿನ ಬ್ಯಾಟಿಂಗ್ ಮಾಡಿದೆವು ಎಂದರು.
ವಿಶೇಷವಾಗಿ ಟಿಮ್ ಡೇವಿಡ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಾಟಿದಾರ್, “ಟಿಮ್ ಡೇವಿಡ್ ವಿಶ್ವದ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರು. ಅವರು ಹೊಡೆದ 106 ಮೀಟರ್‌ಗಳ ಬೃಹತ್ ಸಿಕ್ಸರ್ ಅನ್ನು ನಾನು ನಾನ್-ಸ್ಟ್ರೈಕರ್ ತುದಿಯಿಂದ ಎಂಜಾಯ್ ಮಾಡಿದೆ. ಅವರು ಕಳೆದ ವರ್ಷವೂ ಉತ್ತಮವಾಗಿ ಆಡಿದ್ದರು, ಅವರ ಸ್ಥಿರತೆ ತಂಡಕ್ಕೆ ದೊಡ್ಡ ಬಲ,” ಎಂದರು.
ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡುತ್ತಾ, ಜೇಕಬ್ ಡಫಿ ಅವರ ಔಟ್‌ಸ್ವಿಂಗರ್‌ಗಳು ಮತ್ತು ಅವರು ಪಡೆದ 3 ವಿಕೆಟ್‌ಗಳು ತಂಡವನ್ನು ಗೆಲುವಿನ ಹತ್ತಿರ ತಂದವು.
ಡೆತ್ ಓವರ್‌ಗಳಲ್ಲಿ ಭುವಿ (ಭುವನೇಶ್ವರ್ ಕುಮಾರ್) ಮತ್ತು ಅಭಿನಂದನ್ ಎಸೆದ ಯಾರ್ಕರ್ಸ್‌ಗಳು ನೋಡಲು ಅದ್ಭುತವಾಗಿದ್ದವು.
ಅದರಲ್ಲೂ ನಾನು ಒತ್ತಡಕ್ಕೆ ಒಳಗಾದರೆ ಯಾವಾಗಲೂ ಕೃನಾಲ್ ಪಾಂಡ್ಯರತ್ತ ನೋಡುತ್ತೇನೆ. ತಂಡಕ್ಕೆ ವಿಕೆಟ್ ಅಗತ್ಯವಿದ್ದಾಗ ಯಾವಾಗಲೂ ನಾನು ಕೆ.ಪಿ (ಕೃನಾಲ್ ಪಾಂಡ್ಯ) ಕಡೆ ಮುಖ ಮಾಡುತ್ತೇನೆ. ಏಕೆಂದರೆ ಅವರ ಮೇಲೆ ನನಗೆ ಅತೀವ ನಂಬಿಕೆಯಿದೆ ಎಂದು ರಜತ್ ಪಾಟೀದಾರ್ ತಿಳಿಸಿದರು.
ಇನ್ನು ಸುಯಶ್ ಶರ್ಮಾ ಅವರ ನಾಲ್ಕು ಓವರ್‌ಗಳ ಶಿಸ್ತುಬದ್ಧ ಬೌಲಿಂಗ್ ಮತ್ತು ರೊಮಾರಿಯೋ ಶೆಫರ್ಡ್ ಅವರ ಒಂದು ಓವರ್‌ನ ಸಾಂಘಿಕ ಪ್ರಯತ್ನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು ಎಂದು ಇದೇ ವೇಳೆ ರಜತ್ ಪಾಟಿದಾರ್ ಸ್ಮರಿಸಿದರು.
ಬ್ಯಾಕ್ ಟು ಬ್ಯಾಕ್ ಗೆಲುವುಗಳೊಂದಿಗೆ ಆರ್ಸಿಬಿ ತಂಡದ ಎಲ್ಲಾ ಆಟಗಾರರು ಈಗ ಉತ್ತಮ ಮಾನಸಿಕ ಸ್ಥಿತಿಯಲ್ಲಿದ್ದಾರೆ ಮತ್ತು ಫಾರ್ಮ್‌ನಲ್ಲಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಇದೇ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದ್ದೇವೆ ಎಂದು ನಾಯಕ ರಜತ್ ಪಾಟಿದಾರ್ ಇದೇ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಸರ್ಫರಾಝ್ ಖಾನ್
ಅಂದಹಾಗೆ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 10 ರಂದು ಆಡಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಾಳಿ ರಾಜಸ್ಥಾನ್ ರಾಯಲ್ಸ್. ಈ ಪಂದ್ಯದಲ್ಲೂ ಗೆಲ್ಲುವ ಮೂಲಕ ಆರ್ಸಿಬಿ ಹ್ಯಾಟ್ರಿಕ್ ಗೆಲುವು ತನ್ನದಾಗಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.