Rajat Patidar: ರಜತ್ ಪಟಿದಾರ್ ಶತಕದ ಅಬ್ಬರ: ಗೆಲುವಿನತ್ತ ಭಾರತ ಎ ತಂಡ
ರಜತ್ ಪಟಿದಾರ್ (Rajat Patidar) ಅವರ ಬೊಂಬಾಟ್ ಶತಕದ ನೆರವಿನಿಂದ ಭಾರತ ತಂಡ ಕಿವೀಸ್ಗೆ ಗೆಲ್ಲಲು 416 ರನ್ಗಳ ಟಾರ್ಗೆಟ್ ನೀಡಿದೆ. ಗುರಿ ಬೆನ್ನಟ್ಟಿರುವ ನ್ಯೂಜಿಲೆಂಡ್ ಎ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ಎ (India A vs New Zealand A) ತಂಡ ಭರ್ಜರಿ ಪ್ರದರ್ಶನ ತೋರುತ್ತಿದ್ದು ಜಯದತ್ತ ಸಾಗುತ್ತಿದೆ. ರಜತ್ ಪಟಿದಾರ್ (Rajat Patidar) ಅವರ ಬೊಂಬಾಟ್ ಶತಕದ ನೆರವಿನಿಂದ ಭಾರತ ತಂಡ ಕಿವೀಸ್ಗೆ ಗೆಲ್ಲಲು 416 ರನ್ಗಳ ಟಾರ್ಗೆಟ್ ನೀಡಿದೆ. ಗುರಿ ಬೆನ್ನಟ್ಟಿರುವ ನ್ಯೂಜಿಲೆಂಡ್ ಎ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿದೆ. ಗೆಲುವಿಗೆ ಇನ್ನೂ 396 ರನ್ಗಳ ಅವಶ್ಯತೆಯಿದೆ. ಭಾರತದ ಗೆಲುವಿಗೆ 9 ವಿಕೆಟ್ಗಳು ಬೇಕಾಗಿದೆ.
ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ರುತುರಾಜ್ ಗಾಯಕ್ವಾಡ್ ಹಾಗೂ ನಾಯಕ ಪ್ರಿಯಾಂಕ್ ಪಾಂಚಾಲ್ ಎರಡನೇ ವಿಕೆಟ್‌ಗೆ 122 ರನ್ ಸೇರಿಸಿದರು. ಗಾಯಕ್ವಾಡ್ 164 ಎಸೆತಗಳಲ್ಲಿ 94 ರನ್ ಬಾರಿಸಿ ಶತಕ ವಂಚಿತರಾದರೆ ಪ್ರಿಯಾಂಕ್ 114 ಎಸೆತಗಳಲ್ಲಿ 62 ರನ್ ಗಳಿಸಿದರು. ನಂತರ ಶುರುವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಟಿದಾರ್ ಆಟ. ಕ್ರೀಸ್‌ಗೆ ಬಂದವರೇ ಬೌಲರ್‌ಗಳನ್ನು ದಂಡಿಸಿದ ಇವರು ಅಮೋಘ ಶತಕ ಸಿಡಿಸಿ ಮಿಂಚಿದರು.
ಕಳೆದ 3 ತಿಂಗಳ ಅವಧಿಯಲ್ಲಿ ಪಟಿದಾರ್ ಚಿನ್ನಸ್ವಾಮಿ ಅಂಗಳದಲ್ಲಿ ಬಾರಿಸಿದ 3ನೇ ಶತಕ ಇದಾಗಿದೆ. ರಣಜಿ ಟ್ರೋಫಿ ಫೈನಲ್ ಹಾಗೂ ಪ್ರಸಕ್ತ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಟಿದರ್ ಸೆಂಚುರಿ ಸಿಡಿಸಿದ್ದರು. ಇನ್ನು ಸರ್ಫರಾಜ್ ಖಾನ್ ಕೂಡ ರನ್ ಗಳಿಕೆಗೆ ವೇಗ ನೀಡಿದರು. ರಜತ್ ಮತ್ತು ಖಾನ್ ಇಬ್ಬರೂ ಸೇರಿ ಚುಟುಕು ಕ್ರಿಕೆಟ್ ಮಾದರಿಯ ಬ್ಯಾಟಿಂಗ್ ಮಾಡಿದರು.
ಸರ್ಫರಾಜ್ 74 ಎಸೆತಗಳಲ್ಲಿ 63 ರನ್ ಗಳಿಸಿದರು. ಇದರಲ್ಲಿ ಏಳು ಫೋರ್, 2 ಸಿಕ್ಸರ್ ಸೇರಿದ್ದವು. ಇತ್ತ ಪಟಿದಾರ್ 135 ಎಸೆತಗಳಲ್ಲಿ 13 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 109 ರನ್ ಕಲೆಹಾಕಿದರು. ಭಾರತ 85 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ನ್ಯೂಜಿಲೆಂಡ್ ಎ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 20 ರನ್ ಗಳಿಸಿದೆ. ಭಾರತ ಪರ ಸೌರಭ್ ಕುಮಾರ್ 1 ವಿಕೆಟ್ ಪಡೆದಿದ್ದಾರೆ.
Published On - 9:33 am, Sun, 18 September 22