Ranji Trophy 2024: ಅತ್ಯಲ್ಪ ಮೊತ್ತಕ್ಕೆ ಕರ್ನಾಟಕ ತಂಡ ಆಲೌಟ್
Tamil Nadu vs Karnataka: ತಮಿಳುನಾಡು ವಿರುದ್ಧದ ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕರ್ನಾಟಕ ತಂಡದ ಯುವ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. 218 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 6 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 151 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ತಮಿಳುನಾಡು ನಡುವಣ ರಣಜಿ ಪಂದ್ಯವು (Ranji Trophy 2024) ರಣರೋಚಕದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ (151) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದ ನೆರವಿನಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 366 ರನ್ ಪೇರಿಸಿತು.
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ತಮಿಳುನಾಡು ತಂಡವು ಕರ್ನಾಟಕ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 151 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ ವಿಜಯಕುಮಾರ್ ವೈಶಾಕ್ 4 ವಿಕೆಟ್ ಕಬಳಿಸಿದರೆ, ಶಶಿಕುಮಾರ್ 3 ವಿಕೆಟ್ ಪಡೆದು ಮಿಂಚಿದರು.
215 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕರಾದ ರವಿಕುಮಾರ್ ಸಮರ್ಥ್ (2) ಹಾಗೂ ಮಯಾಂಕ್ ಅಗರ್ವಾಲ್ (11) ಬೇಗನೆ ನಿರ್ಗಮಿಸಿದರು. ಇನ್ನು ದೇವದತ್ ಪಡಿಕ್ಕಲ್ 36 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.
ಅನುಭವಿ ಆಟಗಾರ ಮನೀಶ್ ಪಾಂಡೆ ಕೇವಲ 14 ರನ್ಗಳಿಸಲಷ್ಟೇ ಶಕ್ತರಾದರು. ಪರಿಣಾಮ 88 ರನ್ಗಳಿಸುವಷ್ಟರಲ್ಲಿ ಕರ್ನಾಟಕ ತಂಡವು 5 ವಿಕೆಟ್ ಕಳೆದುಕೊಂಡಿತು. ಅತ್ತ ಪಂದ್ಯದ ಮೇಲೆ ಹಿಡಿತ ಸಾಧಿಸಿದ ತಮಿಳುನಾಡು ಬೌಲರ್ಗಳು ಕರ್ನಾಟಕ ತಂಡವನ್ನು ಕೇವಲ 139 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ತಮಿಳುನಾಡು ಅತ್ಯುತ್ತಮ ದಾಳಿ ಸಂಘಟಿಸಿದ ಅಜಿತ್ ರಾಮ್ 19.4 ಓವರ್ಗಳಲ್ಲಿ ಕೇವಲ 61 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.
ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ತಮಿಳುನಾಡು ತಂಡ 355 ರನ್ಗಳ ಗುರಿ ಪಡೆದಿದೆ. ಅಲ್ಲದೆ 3ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 36 ರನ್ ಕಲೆಹಾಕಿದೆ. ಇನ್ನು 2 ದಿನದಾಟಗಳು ಬಾಕಿಯಿದ್ದು ತಮಿಳುನಾಡು ತಂಡಕ್ಕೆ 319 ರನ್ಗಳ ಅವಶ್ಯಕತೆಯಿದ್ದರೆ, ಕರ್ನಾಟಕ ತಂಡದ ಗೆಲುವಿಗೆ 9 ವಿಕೆಟ್ಗಳ ಅಗತ್ಯತೆಯಿದೆ.
ತಮಿಳುನಾಡು ಪ್ಲೇಯಿಂಗ್ 11: ಸುರೇಶ್ ಲೋಕೇಶ್ವರ್ , ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್) , ಪ್ರದೋಶ್ ಪೌಲ್ , ಬಾಬಾ ಇಂದ್ರಜಿತ್ , ವಿಜಯ್ ಶಂಕರ್ , ವಿಮಲ್ ಖುಮಾರ್ , ಬೂಪತಿ ಕುಮಾರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ (ನಾಯಕ) , ಎಸ್ ಅಜಿತ್ ರಾಮ್ , ಎಂ ಮುಹಮ್ಮದ್ , ಸಂದೀಪ್ ವಾರಿಯರ್.
ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ರಿಎಂಟ್ರಿ ಯಾವಾಗ? ಇಲ್ಲಿದೆ ಮಾಹಿತಿ
ಕರ್ನಾಟಕ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಹಾರ್ದಿಕ್ ರಾಜ್ , ಕಿಶನ್ ಬೇಡರೆ , ಶಶಿ ಕುಮಾರ್ ಕೆ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.
