ಪ್ರತಿದಿನ ಎಷ್ಟು ಹಾಲು ಕುಡೀತಿಯಾ? ವೈಭವ್ ಸೂರ್ಯವಂಶಿ ಉತ್ತರ ಹೀಗಿತ್ತು!

Vaibhav Sooryavanshi: ಈ ಬಾರಿಯ ಐಪಿಎಲ್​ನಲ್ಲಿ 16 ಇನಿಂಗ್ಸ್ ಆಡಿರುವ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಬರೋಬ್ಬರಿ 776 ರನ್​ ಕಲೆಹಾಕಿದ್ದಾರೆ. ಈ 776 ರನ್​ಗಳೊಂದಿಗೆ ವೈಭವ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್ ಎನಿಸಿಕೊಂಡಿದ್ದಾರೆ.

ಪ್ರತಿದಿನ ಎಷ್ಟು ಹಾಲು ಕುಡೀತಿಯಾ? ವೈಭವ್ ಸೂರ್ಯವಂಶಿ ಉತ್ತರ ಹೀಗಿತ್ತು!
Vaibhav Sooryavanshi
Image Credit source: IPL

Updated on: Jun 01, 2026 | 11:27 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರಲ್ಲಿ ಸಂಚಲನ ಸೃಷ್ಟಿಸಿದ್ದ ವೈಭವ್ ಸೂರ್ಯವಂಶಿ ಈ ಬಾರಿ ಬರೋಬ್ಬರಿ 5 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್​ನ ರನ್ ಸರದಾರನಾಗಿ ಹೊರಹೊಮ್ಮಿದ ವೈಭವ್ 15ನೇ ವಯಸ್ಸಿನಲ್ಲೇ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ಐಪಿಎಲ್ ಸೀಸನ್-19ರ ಅತ್ಯಂತ ಮೌಲ್ಯಯುತ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ರವಿಶಾಸ್ತ್ರಿ ನಡೆಸಿದ ಚಿಟ್ ಚಾಟ್​ನಲ್ಲಿ ಮಾತನಾಡಿದ ವೈಭವ್ ಸೂರ್ಯವಂಶಿ, “ಇಷ್ಟೊಂದು ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಹೆಮ್ಮೆ ಅನಿಸುತ್ತಿದೆ. ಆದರೆ ಮೈದಾನದಲ್ಲಿ ಬ್ಯಾಟ್ ಮಾಡುವಾಗ ಇಲ್ಲದ ಒತ್ತಡ, ಈಗ ನಿಮ್ಮ ಜೊತೆ ಮಾತನಾಡುವಾಗ ಆಗುತ್ತಿದೆ” ಎಂದಿದ್ದಾರೆ.

ಈ ವೇಳೆ ಯುವ ಆಟಗಾರನ ಒತ್ತಡವನ್ನು ಕಡಿಮೆ ಮಾಡಲು ರವಿ ಶಾಸ್ತ್ರಿ ತಮಾಷೆಯ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ. ಅಲ್ಲಾ ವೈಭವ್, ಇಷ್ಟು ದೊಡ್ಡ ಸಿಕ್ಸರ್‌ಗಳನ್ನು ಹೊಡೆಯಲು ಪ್ರತಿದಿನ ಎಷ್ಟು ಲೀಟರ್ ಹಾಲು ಕುಡಿಯುತ್ತೀರಿ?” ಎಂದು ಕೇಳಿದ್ದಾರೆ.

ಇದಕ್ಕೆ ನಗುತ್ತಾ ಉತ್ತರಿಸಿದ ವೈಭವ್ ಸೂರ್ಯವಂಶಿ, “ಸದ್ಯಕ್ಕಂತೂ ನಾನು ಹಾಲು ಕುಡಿಯುತ್ತಿಲ್ಲ. ನಾನು ನನ್ನ ಬ್ಯಾಟಿಂಗ್ ಅನ್ನು  ನಂಬುತ್ತೇನೆ ಅಷ್ಟೇ. ಪಂದ್ಯದ ಮೊದಲ ಎಸೆತವೇ ನಾನು ಅಂದುಕೊಂಡಂತೆ, ನನ್ನ ಝೋನ್​ನಲ್ಲಿದ್ದರೆ, ಯಾವುದೇ ಹಿಂಜರಿಕೆಯಿಲ್ಲದೆ ಮ್ಯಾಕ್ಸಿಮಮ್ ರನ್ ಗಳಿಸಲು ಬ್ಯಾಟ್ ಬೀಸುತ್ತೇನೆ,” ಎಂದರು.

ಇದೇ ವೇಳೆ ಈ ಬಾರಿಯ ಐಪಿಎಲ್​ನಿಂದ ಕಲಿತ ಪಾಠ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ವೈಭವ್, “ಪ್ರತಿ ಮ್ಯಾಚ್​ ಅನ್ನು ಕೂಡ ಒಂದೇ ಮೈಂಡ್​ ಸೆಟ್​ನಲ್ಲಿ ಆಡಲು ಸಾಧ್ಯವಿಲ್ಲ. ಪ್ರತಿ ಪಂದ್ಯದಲ್ಲೂ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಬೇಕು, ಇದಕ್ಕಾಗಿ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂಬುದನ್ನು ನಾನು ಕಲಿತಿದ್ದೇನೆ” ಎಂದರು.

ಇನ್ನು ತಮ್ಮ ಭವಿಷ್ಯದ ಗುರಿಯ ಬಗ್ಗೆ ಮಾತನಾಡಿದ ವೈಭವ್ ಸೂರ್ಯವಂಶಿ, ” ನಾನು ಟೀಮ್ ಇಂಡಿಯಾಗೆ ದೀರ್ಘಕಾಲದವರೆಗೆ ಆಡಲು ಬಯಸುತ್ತೇನೆ. ಅದಕ್ಕಾಗಿ ಫಿಟ್​ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದೇನೆ” ಎಂದು ತಿಳಿಸಿದ್ದಾರೆ. ಈ ಮೂಲಕ ಮುಂಬರುವ ದಿನಗಳಲ್ಲಿ ಹೆಚ್ಚಿನ ಫಿಟ್​ನೆಸ್​ನೊಂದಿಗೆ ಮರಳುವ ವಿಶ್ವಾಸವನ್ನು ವೈಭವ್ ಸೂರ್ಯವಂಶಿ ಮುಂದಿಟ್ಟಿದ್ದಾರೆ.

ಈ ಬಾರಿ ವೈಭವ್ ಸೂರ್ಯವಂಶಿ ಪಡೆದ ಪ್ರಶಸ್ತಿಗಳು:

  • ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್
  • ಆರೆಂಜ್ ಕ್ಯಾಪ್
  • ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್
  • ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್
  • ಸೂಪರ್ ಸಿಕ್ಸರ್ಸ್ ಆಫ್ ದಿ ಸೀಸನ್

ಇದನ್ನೂ ಓದಿ: ಡ್ಯಾನ್ಸ್ ಕೊಹ್ಲಿ ಡ್ಯಾನ್ಸ್​: RCB ಪಾರ್ಟಿ ವಿಡಿಯೋ ವೈರಲ್

ಈ ಐದು ಪ್ರಶಸ್ತಿಗಳೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಒಂದೇ ಸೀಸನ್​ನಲ್ಲಿ ಅತ್ಯಧಿಕ ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ (2016) ಹಾಗೂ ಜೋಸ್ ಬಟ್ಲರ್ (2022) ಒಂದೇ ಸೀಸನ್​ನಲ್ಲಿ ತಲಾ 4 ಪ್ರಶಸ್ತಿ ಪಡೆದಿದ್ದರು.

 

Published On - 11:23 am, Mon, 1 June 26

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us