ಒಂದು ವಾರದ ವಿಶ್ರಾಂತಿಯ ನಂತರ ವಿಶ್ರಾಂತಿ… ಇದೇನಿದು: ರವಿ ಶಾಸ್ತ್ರಿ ಗರಂ
India vs England 2nd Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ 87 ರನ್ ಬಾರಿಸಿ ಮಿಂಚಿದ್ದಾರೆ. ಹಾಗೆಯೇ ನಾಯಕ ಶುಭ್ಮನ್ ಗಿಲ್ (114) ಅಜೇಯ ಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 310 ರನ್ಗಳಿಸಿದೆ.

ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಆಕ್ರೋಶ ಹೊರಹಾಕಿದ್ದಾರೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಪ್ಲೇಯಿಂಗ್ ಇಲೆವೆನ್ ಅನ್ನು ವಿಶ್ಲೇಷಿಸಿದ ರವಿ ಶಾಸ್ತ್ರಿ, ಒಬ್ಬ ಆಟಗಾರನಿಗೆ ಒಂದು ವಾರ ವಿಶ್ರಾಂತಿ ಸಿಕ್ಕ ಬಳಿಕ ಕೂಡ, ಆತನನ್ನು ವಿಶ್ರಾಂತಿಯ ಕಾರಣ ತಂಡದಿಂದ ಹೊರಗಿಡುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ.
ಹೆಡಿಂಗ್ಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿದಿದ್ದರು. ಈ ಪಂದ್ಯವು ಜೂನ್ 24 ರಂದು ಕೊನೆಗೊಂಡಿತ್ತು. ಇದಾದ ಬಳಿಕ ಭಾರತ ತಂಡವು ತನ್ನ ದ್ವಿತೀಯ ಟೆಸ್ಟ್ ಪಂದ್ಯವಾಡುತ್ತಿರುವುದು ಜುಲೈ 2 ರಂದು. ಅಂದರೆ ಎರಡು ಟೆಸ್ಟ್ ಪಂದ್ಯಗಳ ನಡುವೆ ಒಂದು ವಾರದ ಅಂತರವಿದೆ.
ಅಂದರೆ ಮೊದಲ ಟೆಸ್ಟ್ ಪಂದ್ಯವಾಡಿದ ಜಸ್ಪ್ರೀತ್ ಬುಮ್ರಾಗೆ ಒಂದು ವಾರದ ವಿಶ್ರಾಂತಿ ಸಿಕ್ಕಿದೆ. ಇದಾಗ್ಯೂ ಅವರು ವಿಶ್ರಾಂತಿಯ ಕಾರಣ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವುದು ಸರಿಯಲ್ಲ. 7 ದಿನಗಳ ಬ್ರೇಕ್ ಬಳಿಕ ತಂಡದಲ್ಲಿರುವ ವಿಶ್ವದ ಅತ್ಯುತ್ತಮ ಬೌಲರ್ಗೆ ವಿಶ್ರಾಂತಿ ನೀಡಿದ್ದಾರೆ ಎಂದರೆ ಅದನ್ನು ನನಗೆ ನಂಬೋಕೆ ಆಗುತ್ತಿಲ್ಲ. ಇಂತಹ ನಿರ್ಧಾರಗಳನ್ನು ಖಂಡಿತವಾಗಿಯೂ ನಾನಂತು ಒಪ್ಪಲ್ಲ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಭಾರತ ತಂಡಕ್ಕೆ ಇದು ತುಂಬಾ ಮುಖ್ಯವಾದ ಟೆಸ್ಟ್ ಪಂದ್ಯವಾಗಿದೆ. ಏಕೆಂದರೆ ಕಳೆದ ಸರಣಿಗಳಲ್ಲಿ ನೀವು ಸೋತಿದ್ದೀರಿ. ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳಲ್ಲೂ ಪರಾಜಯಗೊಂಡಿದ್ದೀರಿ. ಇನ್ನು ಆಸ್ಟ್ರೇಲಿಯಾ ವಿರುದ್ಧ ಕೂಡ 3 ಮ್ಯಾಚ್ಗಳಲ್ಲಿ ಸೋಲನುಭವಿಸಿದ್ದೀರಿ. ಇದೀಗ ನೀವು ಗೆಲುವಿನ ಹಾದಿಗೆ ಮರಳಬೇಕಿದೆ.
ಇಂತಹ ಸಂದರ್ಭದಲ್ಲಿ ನೀವು ವಿಶ್ವದ ಅತ್ಯುತ್ತಮ ವೇಗದ ಬೌಲರ್ ಅನ್ನು ಕೈ ಬಿಟ್ಟು ಕಣಕ್ಕಿಳಿಯುತ್ತೀರಿ ಎಂದರೆ ನಿಜಕ್ಕೂ ನಂಬಲಾಸಾಧ್ಯ. ಅದು ಕೂಡ 7 ದಿನಗಳ ವಿಶ್ರಾಂತಿಯ ಬಳಿಕ ವಿಶ್ರಾಂತಿ ನೀಡುತ್ತೀರಿ ಎಂದರೆ ಏನರ್ಥ ಎಂದು ರವಿ ಶಾಸ್ತ್ರಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಡೆಯನ್ನು ಪ್ರಶ್ನಿಸಿದ್ದಾರೆ.
ಬುಮ್ರಾ ಬದಲಿಗೆ ಆಕಾಶ್ ದೀಪ್:
ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಅವರನ್ನು ಹೊರಗಿಡಲಾಗಿದೆ. ಇದಕ್ಕೆ ಮುಖ್ಯ ಕಾರಣ ವಿಶ್ರಾಂತಿ. ಆಂಗ್ಲರ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ 2 ಮ್ಯಾಚ್ಗಳಲ್ಲಿ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಅದರ ಭಾಗವಾಗಿ ಅವರು ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಆಕಾಶ್ ದೀಪ್ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಶುಭ್ಮನ್ ಗಿಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: IPL 2026: CSK ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಬಹುತೇಕ ಖಚಿತ
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್, ಜೋಶ್ ಟಂಗ್, ಶೋಯೆಬ್ ಬಶೀರ್.
