
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ 2026 (IPL 2026) ರ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 175 ರನ್ ಕಲೆಹಾಕಿತು. ಆರ್‌ಸಿಬಿ ಪರ ಇಬ್ಬರು ಬ್ಯಾಟ್ಸ್ಮನ್ಗಳನ್ನು ಹೊರತುಪಡಿಸಿ ಉಳಿದ 8 ಬ್ಯಾಟ್ಸ್ಮನ್ಗಳಿಗೆ 20 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇತ್ತ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಆರ್‌ಸಿಬಿ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಡೆಲ್ಲಿ ಬೌಲರ್ಸ್ಗಳು ಯಶಸ್ವಿಯಾದರು. ಇದರೊಂದಿಗೆ ಆರ್‌ಸಿಬಿ ಈ ಆವೃತ್ತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ 200 ರನ್‌ಗಳ ಗಡಿ ದಾಟದೆ ಇರುವುದು ಇದೇ ಮೊದಲ ಬಾರಿ.
ಎಂದಿನಂತೆ ಈ ಪಂದ್ಯದಲ್ಲೂ ಆರ್ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್ಗೆ 52 ರನ್‌ಗಳ ಜೊತೆಯಾಟ ನೀಡಿದರು. ಆದರೆ ವಿರಾಟ್ ಕೊಹ್ಲಿಯ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಕೊಹ್ಲಿ 19 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕೊಹ್ಲಿ ಬಳಿಕ ಬಂದ ದೇವದತ್ ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟಿದರ್ಗೆ ಈ ಪಂದ್ಯದಲ್ಲಿ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ.
ತವರಿನಲ್ಲಿ ಆಡುತ್ತಿದ್ದ ಪಡಿಕ್ಕಲ್ ಕೇವಲ 18 ರನ್ಗಳಿಗೆ ಸುಸ್ತಾದರೆ, ನಾಯಕ ರಜತ್ ಪಾಟಿದರ್ ಕೇವಲ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದಾಗ್ಯೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಲ್ಟ್ ತನ್ನ ಎಂದಿನ ಆಟವನ್ನು ಮುಂದುವರೆಸಿ ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 38 ಎಸೆತಗಳನ್ನು ಎದುರಿಸಿದ ಸಾಲ್ಟ್ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅತ್ಯಧಿಕ 63 ರನ್‌ಗಳ ಕೊಡುಗೆ ನೀಡಿದರು.
RCB vs DC IPL 2026 Live Score: ಡೆಲ್ಲಿಗೆ 176 ರನ್ ಗುರಿ ನೀಡಿದ ಆರ್‌ಸಿಬಿ
ತಂಡದ ಪರ 20 ರನ್‌ಗಳ ಗಡಿ ದಾಟಿದ ಎರಡನೇ ಬ್ಯಾಟ್ಸ್‌ಮನ್ ಎಂದರೆ ಟಿಮ್ ಡೇವಿಡ್. ಸಂಕಷ್ಟದ ಸಮಯದಲ್ಲಿ ಡೇವಿಡ್ 26 ರನ್‌ಗಳ ಇನ್ನಿಂಗ್ಸ್ ಆಡಿದರು. ಉಳಿದಂತೆ ಜಿತೇಶ್ ಶರ್ಮಾ 14 ರನ್, ಶೆಫರ್ಡ್ 1 ರನ್, ಕೃನಾಲ್ ಪಾಂಡ್ಯ 12 ರನ್ ಬಾರಿಸಿದರೆ, ರಸಿಕ್ 0 ಹಾಗೂ ಭುವನೇಶ್ವರ್ 3 ರನ್ ಬಾರಿಸಿ ಅಜೇಯರಾಗಿ ಉಳಿದರು. ಇತ್ತ ಡೆಲ್ಲಿ ಪರ ಲುಂಗಿ ಎಂಗಿಡಿ, ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Sat, 18 April 26