IPL 2026 Final: ಸತತ 2ನೇ ಬಾರಿಗೆ ಚಾಂಪಿಯನ್; ಮತ್ತೊಂದು ದಾಖಲೆ ಸೃಷ್ಟಿಸುವ ಸನಿಹದಲ್ಲಿ ಆರ್​ಸಿಬಿ

IPL 2026 Final: ಮೇ 31 ರಂದು ನಡೆಯಲಿರುವ ಐಪಿಎಲ್ 2026 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ತಲಾ ಒಂದು ಪ್ರಶಸ್ತಿ ಗೆದ್ದಿದ್ದು, ಎರಡನೇ ಬಾರಿಗೆ ಟ್ರೋಫಿ ಗೆಲ್ಲಲು ಸಜ್ಜಾಗಿವೆ. ಕಳೆದ ಆವೃತ್ತಿಯ ಚಾಂಪಿಯನ್ ಆರ್‌ಸಿಬಿ ಸತತ ಎರಡನೇ ಪ್ರಶಸ್ತಿ ಗೆದ್ದು, ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್‌ನಂತಹ ತಂಡಗಳ ವಿಶೇಷ ಗುಂಪಿಗೆ ಸೇರಲು ಎದುರು ನೋಡುತ್ತಿದೆ. ಗುಜರಾತ್ ಟೈಟಾನ್ಸ್ ಕೂಡ ತಮ್ಮ ಎರಡನೇ ಪ್ರಶಸ್ತಿಗಾಗಿ ಹೋರಾಡಲಿದೆ.

IPL 2026 Final: ಸತತ 2ನೇ ಬಾರಿಗೆ ಚಾಂಪಿಯನ್; ಮತ್ತೊಂದು ದಾಖಲೆ ಸೃಷ್ಟಿಸುವ ಸನಿಹದಲ್ಲಿ ಆರ್​ಸಿಬಿ
Rcb

Updated on: May 30, 2026 | 8:19 PM

ಐಪಿಎಲ್ 2026 (IPL 2026) ರ 74ನೇ ಮತ್ತು ಕೊನೆಯ ಪಂದ್ಯ ಮೇ 31 ರಂದು ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈ ಹಿಂದೆ ಟೂರ್ನಿಯಲ್ಲಿ ತಲಾ ಒಂದೊಂದು ಪ್ರಶಸ್ತಿಯನ್ನು ಗೆದ್ದಿವೆ. ಆದ್ದರಿಂದ, ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶ ಉಭಯ ತಂಡಗಳಿಗಿದೆ. ಇತ್ತ ರಜತ್ ಪಾಟಿದಾರ್ ನೇತೃತ್ವದಲ್ಲಿ, ಆರ್‌ಸಿಬಿ ತಂಡವು ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಕಳೆದ ಆವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದಿದ್ದ ಆರ್‌ಸಿಬಿಗೆ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಇದು ಸಾಧ್ಯವಾದರೆ ಆರ್‌ಸಿಬಿ ಐಪಿಎಲ್​ನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ.

ಮುಂಬೈ , ಸಿಎಸ್​ಕೆ ಗುಂಪಿಗೆ ಸೇರಲಿದೆ ಆರ್​ಸಿಬಿ

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಾತ್ರ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿವೆ. ಇದೀಗ ಆರ್‌ಸಿಬಿಗೆ ಈ ಅವಕಾಶ ಸಿಕ್ಕಿದೆ. ಇದು ಸಾಧ್ಯವಾದರೆ, ಐಪಿಎಲ್‌ನಲ್ಲಿ ಸತತ ಎರಡು ಟ್ರೋಫಿಗಳನ್ನು ಗೆದ್ದ ಮೂರನೇ ತಂಡ ಎಂಬ ದಾಖಲೆ ಆರ್​ಸಿಬಿ ಪಾಲಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ 2010 ಮತ್ತು 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು. ಹಾಗೆಯೇ ಮುಂಬೈ ಇಂಡಿಯನ್ಸ್ 2019 ಮತ್ತು 2020 ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ 2025 ರಲ್ಲಿ ಟ್ರೋಫಿ ಗೆದ್ದಿರುವ ಆರ್‌ಸಿಬಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶ ಹೊಂದಿದೆ.

IPL 2026 Final: ಆರ್​ಸಿಬಿ- ಗುಜರಾತ್ ನಡುವೆ ಫೈನಲ್ ಫೈಟ್; ಮುಖಾಮುಖಿ ದಾಖಲೆ ಹೇಗಿದೆ?

3ನೇ ಬಾರಿಗೆ ಫೈನಲ್​ಗೇರಿದ ಗುಜರಾತ್

ಗುಜರಾತ್ ಟೈಟಾನ್ಸ್ ತಂಡ ಕೂಡ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಗುಜರಾತ್ ಟೈಟಾನ್ಸ್ 2022 ರಲ್ಲಿ ಪ್ರಶಸ್ತಿ ಗೆದ್ದಿತ್ತು. ಅದಾದ ನಂತರ, 2023 ರಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವಿತ್ತಾದರೂ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತ್ತು. ಇದರಿಂದಾಗಿ ಗುಜರಾತ್, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಂತೆ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us