IPL 2025: ನಾನು 7 ವರ್ಷ ಆಡಿದ ತಂಡ… ಗೆದ್ದ ಬಳಿಕ ಭಾವುಕರಾದ ಸಿರಾಜ್
Mohammed Siraj: ಮೊಹಮ್ಮದ್ ಸಿರಾಜ್ 2018 ರಿಂದ 2024ರವರೆಗೆ ಆರ್ಸಿಬಿ ಪರ 87 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 303.2 ಓವರ್ಗಳನ್ನು ಎಸೆದಿರುವ ಅವರು 83 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಇದೀಗ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಸಿರಾಜ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲೇ ಮಿಂಚಿದ್ದಾರೆ.

IPL 2025: ಐಪಿಎಲ್ 2025ರಲ್ಲಿ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲನುಭವಿಸಿದೆ. ಆರ್ಸಿಬಿ ತಂಡದ ಈ ಸೋಲಿಗೆ ಪ್ರಮುಖ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ (Mohammed Siraj). ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಗುಜರಾತ್ ಟೈಟಾನ್ಸ್ ವೇಗಿ ಮೊಹಮ್ಮದ್ ಸಿರಾಜ್ ಪವರ್ಪ್ಲೇನಲ್ಲಿ ಫಿಲ್ ಸಾಲ್ಟ್ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಆರಂಭಿಕ ಆಘಾತ ನೀಡಿದ್ದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ರಜತ್ ಪಾಟಿದಾರ್ ವಿಕೆಟ್ ಒಪ್ಪಿಸಿದರು. ಅಲ್ಲದೆ ಅಂತಿಮವಾಗಿ 20 ಓವರ್ಗಳಲ್ಲಿ 169 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
170 ರನ್ಗಳ ಗುರಿ ಪಡೆದ ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ (49) ಆರಂಭದಲ್ಲಿ ಅಬ್ಬರಿಸಿದರೆ, ಆ ಬಳಿಕ ಜೋಸ್ ಬಟ್ಲರ್ (73) ಸ್ಪೋಟಕ ಇನಿಂಗ್ಸ್ ಆಡಿದರು. ಈ ಮೂಲಕ 17.5 ಓವರ್ಗಳಲ್ಲಿ 170 ರನ್ ಬಾರಿಸಿ ಗುಜರಾತ್ ಟೈಟಾನ್ಸ್ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಸಿರಾಜ್ಗೆ ಒಲಿದ ಪಂದ್ಯಶ್ರೇಷ್ಠ ಪ್ರಶಸ್ತಿ:
ಈ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 4 ಓವರ್ಗಳಲ್ಲಿ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಸಿರಾಜ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಈ ಪ್ರಶಸ್ತಿ ಪಡೆದು ಮಾತನಾಡಿದ ಮೊಹಮ್ಮದ್ ಸಿರಾಜ್, ಆರ್ಸಿಬಿ ವಿರುದ್ಧ ಆಡುವಾಗ ನಾನು ಸ್ವಲ್ಪ ಭಾವುಕನಾಗಿದ್ದೆ. ಏಕೆಂದರೆ ಕಳೆದ 7 ವರ್ಷಗಳ ಕಾಲ ನಾನು ಆರ್ಸಿಬಿ ಪರ ಆಡಿದ್ದೆ. ಇದೀಗ ಕೆಂಪು ಬಣ್ಣದ ಜೆರ್ಸಿಯಿಂದ ನೀಲಿ ಬಣ್ಣದ ಜೆರ್ಸಿಗೆ ಬದಲಾಗಿದ್ದೇನೆ. ಇದಾಗ್ಯೂ ಆರ್ಸಿಬಿ ತಂಡವನ್ನು ಎದುರಿಸುವುದು ನಿಜವಾಗೂ ಭಾವನಾತ್ಮಕವಾಗಿತ್ತು ಎಂದಿದ್ದಾರೆ.
ಆರಂಭದಲ್ಲಿ ಭಾವುಕನಾದರೂ, ಚೆಂಡು ಪಡೆದ ಬಳಿಕ ನಾನು ಸರಿಯಾದೆ. ಏಕೆಂದರೆ ನಾನು ಎದುರಾಳಿಯಾಗಿ ಕಣಕ್ಕಿಳಿದಿರುವುದು ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಭಾವುಕತೆಯನ್ನು ಸೈಡ್ನಲ್ಲಿರಿಸುವುದು ಅನಿವಾರ್ಯವಾಗಿತ್ತು ಎಂದು ಸಿರಾಜ್ ಹೇಳಿದ್ದಾರೆ.
ಅಲ್ಲದೆ ಈ ಪ್ರದರ್ಶನಕ್ಕೆ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಹಾಗೂ ಸಹ ಆಟಗಾರ ಇಶಾಂತ್ ಶರ್ಮಾ ನೀಡಿದ ಬೆಂಬಲವೇ ಕಾರಣ. ಏಕೆಂದರೆ ಕಳೆದ ಕೆಲ ತಿಂಗಳಿಂದ ನಾನು ಸ್ಥಿರವಾಗಿ ಆಡುತ್ತಿದ್ದೆ. ಇದರಿಂದ ನಾನು ನನ್ನ ಬೌಲಿಂಗ್ನಲ್ಲಿ ಕೆಲ ತಪ್ಪುಗಳನ್ನು ಮಾಡುತ್ತಿದ್ದೆ.
ಆದರೆ ಯಾವಾಗ ವಿರಾಟ್ ಸಿಕ್ಕಿತೋ ಆ ವೇಳೆ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡೆ. ನನ್ನ ಫಿಟ್ನೆಸ್‌ನಲ್ಲಿ ಕೆಲಸ ಮಾಡಿದೆ. ಗುಜರಾತ್ ಟೈಟಾನ್ಸ್ ತಂಡ ನನ್ನನ್ನು ಆಯ್ಕೆ ಮಾಡಿದ ಬಳಿಕ, ನಾನು ಆಶಿಶ್ ಭಾಯ್ (ಆಶಿಶ್ ನೆಹ್ರಾ) ಅವರೊಂದಿಗೆ ಮಾತನಾಡಿದೆ. ಬೌಲಿಂಗ್ ಅನ್ನು ಆನಂದಿಸಿ ಬೌಲಿಂಗ್ ಮಾಡು ಎಂದರು.
ಇದನ್ನೂ ಓದಿ: IPL 2025: ಹೀನಾಯ ಅತ್ಯಂತ ಹೀನಾಯ ದಾಖಲೆ ಬರೆದ RCB
ಇನ್ನು ಇಶು ಭಾಯ್ (ಇಶಾಂತ್ ಶರ್ಮಾ) ನನಗೆ ಯಾವ ಲೈನ್ ಮತ್ತು ಲೆಂಗ್ತ್ ಬೌಲಿಂಗ್ ಮಾಡಬೇಕೆಂದು ಹೇಳಿಕೊಟ್ಟರು. ಈ ಮೂಲಕ ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಆರ್ಸಿಬಿ ವಿರುದ್ಧ ಅತ್ಯುತ್ತಮವಾಗಿ ದಾಳಿ ಸಂಘಟಿಸಿದೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.