IPL 2025: ಸಾಲ್ಟ್- ಕೊಹ್ಲಿ ಸಿಡಿಲಬ್ಬರ; ಪವರ್ ಪ್ಲೇಯಲ್ಲಿ 80 ರನ್ ಚಚ್ಚಿದ ಆರ್​ಸಿಬಿ

|

Updated on: Mar 22, 2025 | 10:24 PM

Virat Kohli, Phil Salt Blitz: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 175 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡವು ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಅದ್ಭುತ ಆಟದೊಂದಿಗೆ ಮೊದಲ ಆರು ಓವರ್‌ಗಳಲ್ಲಿ 80 ರನ್ ಗಳಿಸಿ ಸ್ಫೋಟಕ ಆರಂಭ ಪಡೆಯಿತು. ಕೊಹ್ಲಿ ಮತ್ತು ಸಾಲ್ಟ್ ಅವರ ಬೌಂಡರಿ ಮತ್ತು ಸಿಕ್ಸರ್‌ಗಳು ಆರ್‌ಸಿಬಿಗೆ ಉತ್ತಮ ಆರಂಭವನ್ನು ನೀಡಿತು.

IPL 2025: ಸಾಲ್ಟ್- ಕೊಹ್ಲಿ ಸಿಡಿಲಬ್ಬರ; ಪವರ್ ಪ್ಲೇಯಲ್ಲಿ 80 ರನ್ ಚಚ್ಚಿದ ಆರ್​ಸಿಬಿ
ವಿರಾಟ್ ಕೊಹ್ಲಿ, ಪಿಲ್ ಸಾಲ್ಟ್
Follow us on

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR)​ ನಡುವಿನ ಐಪಿಎಲ್ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಹಾನೆ ಪಡೆ 175 ರನ್ ಕಲೆಹಾಕಿದೆ. ಇದೀಗ ಈ ರನ್​ಗಳ ಗುರಿ ಬೆನ್ನಟ್ಟಿರುವ ಆರ್​ಸಿಬಿ ತಂಡಕ್ಕೆ ಸ್ಫೋಟಕ ಆರಂಭ ಸಿಕ್ಕಿದೆ. ಆರಂಭಿಕರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ಫಿಲ್ ಸಾಲ್ಟ್ (Phil Salt) ಮೊದಲ 6 ಓವರ್​ಗಳಲ್ಲೇ ತಂಡದ ಮೊತ್ತವನ್ನು 80 ರನ್​ಗಳಿಗೆ ಕೊಂಡೊಯ್ದಿದ್ದಾರೆ.

ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭ

175 ರನ್​ಗಳ ಬೆನ್ನಟ್ಟಿದ ಆರ್​ಸಿಬಿಗೆ ಮೊದಲ ಓವರ್​ನಲ್ಲೇ ಸ್ಫೋಟಕ ಆರಂಭ ಸಿಕ್ಕಿತು. ಈ ಓವರ್​ನಲ್ಲಿ ಫಿಲ್ ಸಾಲ್ಟ್ 1 ಬೌಂಡರಿ ಹೊಡೆದರೆ, ವಿರಾಟ್ ಕೊಹ್ಲಿ ಕೂಡ ಬೌಂಡರಿಯೊಂದಿಗೆ ಖಾತೆ ತೆರೆದರು. ಈ ಓವರ್​ನಿಂದ ಒಟ್ಟು 12 ರನ್​ಗಳು ಬಂದವು. 2ನೇ ಓವರ್​ನಲ್ಲಿ ಮ್ಯಾಜಿಕಲ್ ಸ್ಪೆಲ್ ಮಾಡಿದ ಸ್ಪೆನ್ಸರ್ ಜಾನ್ಸನ್ ಕೇವಲ 5 ರನ್​ ನೀಡಿದರು. ಮೂರನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ವೈಭವ್ ಆರೋರಾ ಮೇಲೆ ಸಾಲ್ಟ್ ಬೌಂಡರಿಗಳ ಮಳೆಗರೆದರು. ಈ ಓವರ್​ನಲ್ಲಿ ಸಾಲ್ಟ್ 1 ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರೆ, ವಿರಾಟ್ ಕೊಹ್ಲಿ ಕೂಡ 2 ಬೌಂಡರಿ ಕಲೆಹಾಕಿದರು.

ವರುಣ್ ಓವರ್​ನಲ್ಲಿ 21 ರನ್

ಹೀಗಾಗಿ 3 ಓವರ್​ಗಳ ಮುಕ್ತಾಯಕ್ಕೆ ಆರ್​ಸಿಬಿ 37 ರನ್ ಕಲೆಹಾಕಿತು. ಇದೇ ವೇಳೆ ನಾಯಕ ರಹಾನೆ ತಂಡದ ಭರವಸೆಯ ಬೌಲರ್​ ವರುಣ್ ಚಕ್ರವರ್ತಿಗೆ ಬೌಲಿಂಗ್ ನೀಡಿದರು. ವರುಣ್ ಕೂಡ ಮೊದಲ 2 ಎಸೆತಗಳಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟರು. ಆದರೆ ಉಳಿದ 4 ಎಸೆತಗಳಲ್ಲಿ ಬೌಂಡರಿಗಳು ಸಿಡಿದವು. ಮಾಜಿ ಕೆಕೆಆರ್ ಆಟಗಾರ ಫಿಲ್ ಸಾಲ್ಟ್ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಈ ಓವರ್​ನಲ್ಲಿ 21 ರನ್ ಕಲೆಹಾಕಿದರು.

IPL 2025: ಸುಯೇಶ್ ಗೂಗ್ಲಿಗೆ ಗಿರ್ಕಿ ಹೊಡೆದ ಡೇಂಜರಸ್ ರಸೆಲ್; ವಿಡಿಯೋ

6 ಓವರ್​ ಅಂತ್ಯಕ್ಕೆ 80 ರನ್

ಐದನೇ ಓವರ್​ನಲ್ಲಿ ಉಗ್ರರೂಪ ತಾಳಿದ ವಿರಾಟ್ ಕೊಹ್ಲಿ, ಸ್ಪೆನ್ಸರ್ ಜಾನ್ಸನ್ ಎಸೆದ ಈ ಓವರ್​ನ ಮೊದಲ ಎರಡು ಎಸೆತಗಳನ್ನು ಸಿಕ್ಸರ್​ಗಟ್ಟಿದರು. ಹಾಗೆಯೇ ಈ ಓವರ್​ನ ಕೊನೆಯ ಎಸೆತವನ್ನು ಸಾಲ್ಟ್ ಬೌಂಡರಿ ಬಾರಿಸಿದರು. ಐದನೇ ಓವರ್ ಅಂತ್ಯಕ್ಕೆ ಆರ್​ಸಿಬಿ ಸ್ಕೋರ್ 75 ರನ್ ಆಗಿತ್ತು. ಆದರೆ 6ನೇ ಓವರ್​ನಲ್ಲಿ ಮಿತವ್ಯಯದ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ ಕೇವಲ 5 ರನ್ ಬಿಟ್ಟುಕೊಟ್ಟು ಆರ್​ಸಿಬಿ ವೇಗಕ್ಕೆ ಕಡಿವಾಣ ಹಾಕಿದರು. ಆದಾಗ್ಯೂ ಆರ್​ಸಿಬಿ ಮೊದಲ 6 ಓವರ್​ಗಳಲ್ಲಿ 80 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 pm, Sat, 22 March 25