IND vs ENG: ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಿಷಭ್ ಪಂತ್​ಗೆ ಐಸಿಸಿಯಿಂದ ವಾಗ್ದಂಡನೆ

Rishabh Pant Fined by ICC: ಲೀಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಚೆಂಡಿನ ಬಗ್ಗೆ ಅಂಪೈರ್‌ನ ನಿರ್ಧಾರಕ್ಕೆ ರಿಷಭ್ ಪಂತ್ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಅವರಿಗೆ ಐಸಿಸಿ ವಾಗ್ದಂಡನೆ ವಿಧಿಸಿದೆ. ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಪಂತ್ ಮೇಲೆ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಪಂತ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಮತ್ತು ಹೆಚ್ಚಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

IND vs ENG: ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಿಷಭ್ ಪಂತ್​ಗೆ ಐಸಿಸಿಯಿಂದ ವಾಗ್ದಂಡನೆ
Rishabh Pant

Updated on: Jun 24, 2025 | 4:13 PM

ಲೀಡ್ಸ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಟೀಂ ಇಂಡಿಯಾದ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಐಸಿಸಿಯಿಂದ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಐಸಿಸಿ (ICC) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ರಿಷಭ್ ಪಂತ್‌ಗೆ ವಾಗ್ದಂಡನೆ ವಿಧಿಸಲಾಗಿದ್ದು, ಪಂತ್ ಲೆವೆಲ್ 1 ರ ಅಡಿಯಲ್ಲಿ ತಪ್ಪಿತಸ್ಥನೆಂದು ಕಂಡುಬಂದಿದೆ. ಹೀಗಾಗಿ ಮ್ಯಾಚ್ ರೆಫರಿ, ಪಂತ್​ಗೆ ವಾಗ್ದಂಡನೆ ನೀಡಿದ್ದಾರೆ. ಅಂದರೆ ಪಂತ್ ವಿರುದ್ಧ ಯಾವುದೇ ಮುಂದಿನ ಕ್ರಮ ಕೈಗೊಳ್ಳಲಾಗಿಲ್ಲ. ಐಸಿಸಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ನಿರ್ಧಾರವನ್ನು ಪ್ರತಿಭಟಿಸುವುದು ಅಥವಾ ಆಕ್ಷೇಪಿಸುವುದಕ್ಕೆ ಸಂಬಂಧಿಸಿದ ಆರ್ಟಿಕಲ್ 2.8 ರ ಅಡಿಯಲ್ಲಿ ಪಂತ್ ತಪ್ಪಿತಸ್ಥನೆಂದು ಕಂಡುಬಂದಿದ್ದಾರೆ. ಹೀಗಾಗಿ ಈ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂತ್ ಅವರ ಖಾತೆಗೆ 1 ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.

ಪಂತ್ ಮಾಡಿದ ತಪ್ಪಾದರೂ ಏನು?

ಈಗ ಪ್ರಶ್ನೆ ಏನೆಂದರೆ, ವಾಗ್ದಂಡನೆ ನೀಡುವಂತಹ ತಪ್ಪನ್ನು ಪಂತ್ ಮಾಡಿದ್ದಾದರೂ ಏನು ಎಂಬುದು. ವಾಸ್ತವವಾಗಿ ಲೀಡ್ಸ್ ಟೆಸ್ಟ್‌ನ ಮೂರನೇ ದಿನದಂದು ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನ 61 ನೇ ಓವರ್‌ನಲ್ಲಿ ಚೆಂಡಿನ ಆಕಾರ ಬದಲಾಗಿದ್ದು ಅದನ್ನು ಬದಲಿಸುವಂತೆ ಪಂತ್, ಅಂಪೈರ್ ಬಳಿ ಮನವಿ ಮಾಡಿದರು. ಆದರೆ ಚೆಂಡನ್ನು ಗೇಜ್​ನಿಂದ ಪರೀಕ್ಷಿಸಿದ ಅಂಪೈರ್, ಚೆಂಡು ನಿಯಮಗಳಿಗನುಸಾರವಾಗಿ ಇದ್ದ ಕಾರಣ ಚೆಂಡನ್ನು ಬದಲಾಯಿಸಲು ನಿರಾಕರಿಸಿದರು. ಇದರಿಂದ ಅಸಮಾಧಾನಗೊಂಡ ಪಂತ್, ಅಂಪೈರ್ ಮುಂದೆ ಚೆಂಡನ್ನು ನೆಲದ ಮೇಲೆ ಎಸೆಯುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಇದಕ್ಕಾಗಿ ಪಂತ್​ಗೆ ಇದೀಗ ವಾಗ್ದಂಡನೆ ವಿಧಿಸಲಾಗಿದೆ.

ತಪ್ಪನ್ನು ಒಪ್ಪಿಕೊಂಡ ಪಂತ್

ಐಸಿಸಿ ಪತ್ರಿಕಾ ಪ್ರಕಟಣೆಯ ಪ್ರಕಾರ, ರಿಷಭ್ ಪಂತ್ ಆ ಪ್ರಕರಣದಲ್ಲಿ ತನ್ನ ತಪ್ಪನ್ನು ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಬಳಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ. ಆನ್-ಫೀಲ್ಡ್ ಅಂಪೈರ್‌ಗಳಾದ ಪಾಲ್ ರೈಫಲ್ ಮತ್ತು ಕ್ರಿಸ್ ಜಾಫ್ನಿ ಪಂತ್ ಅವರ ಪ್ರತಿಭಟನೆಯ ಬಗ್ಗೆ ಪಂದ್ಯದ ರೆಫರಿಗೆ ದೂರು ನೀಡಿದ್ದರು. ಅವರಲ್ಲದೆ, ಮೂರನೇ ಅಂಪೈರ್ ಶರ್ಫುದುಲ್ಲಾ ಮತ್ತು ನಾಲ್ಕನೇ ಅಂಪೈರ್ ಮೈಕ್ ಬರ್ನ್ಸ್ ಕೂಡ ಆರೋಪಗಳನ್ನು ಮಾಡಿದ್ದರು ಎಂದು ಐಸಿಸಿ ತಿಳಿಸಿದೆ.

IND vs ENG: ರಾಹುಲ್- ಪಂತ್ ಶತಕ; ಇಂಗ್ಲೆಂಡ್​ ಗೆಲುವಿಗೆ 371 ರನ್​ಗಳ ಟಾರ್ಗೆಟ್

ವಾಸ್ತವವಾಗಿ ಐಸಿಸಿ ನಿಯಮಗಳ ಹಂತ 1 ರ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಆಟಗಾರರಿಗೆ ಕನಿಷ್ಠ ಶಿಕ್ಷೆ ವಾಗ್ದಂಡನೆಯಾಗಿದೆ. ಗರಿಷ್ಠ ಶಿಕ್ಷೆಯೆಂದರೆ ಅವರ ಪಂದ್ಯ ಶುಲ್ಕದಲ್ಲಿ ಶೇಕಡಾ 50 ರಷ್ಟು ಕಡಿತ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗುವುದು. ಇದೀಗ ಪಂತ್, ಹಂತ 1 ರ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ವಾಗ್ದಂಡನೆ ವಿಧಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Tue, 24 June 25