ಹಲವು ದಿನಗಳ ಊಹಾಪೋಹಗಳು ಮತ್ತು ಚರ್ಚೆಗಳ ನಂತರ ಚಿತ್ರಣ ಸ್ಪಷ್ಟವಾಗುತ್ತಿದ್ದು, ಐಪಿಎಲ್ ಮುಂದಿನ ಸೀಸನ್ನ ಡೆಲ್ಲಿ ಕ್ಯಾಪಿಟಲ್ಸ್ ಡಗೌಟ್ನಲ್ಲಿ ರಿಷಬ್ ಪಂತ್ ಅವರ ಮುಖ ಕಾಣಿಸುವುದಿಲ್ಲ. ಫ್ರಾಂಚೈಸಿಗಳು ಧಾರಣ ಪಟ್ಟಿಯನ್ನು ಸಲ್ಲಿಸುವ ಒಂದು ದಿನಕ್ಕೆ ಮೊದಲು ರಿಷಬ್ ಪಂತ್ ಡೆಲ್ಲಿ ತಂಡದಿಂದ ಹೊರಹೋಗುವುದು ಭಾಗಶಃ ಖಚಿತ ಎಂದು ವರದಿಯೊಂದು ಬಹಿರಂಗಪಡಿಸಿದೆ. ಇದರೊಂದಿಗೆ ಕಳೆದ 9 ವರ್ಷಗಳಿಂದ ಡೆಲ್ಲಿ ಹಾಗೂ ಪಂತ್ ನಡುವಿನ ಸಂಬಂಧಕ್ಕೆ ತೆರೆ ಬಿದ್ದಿದೆ. ವಾಸ್ತವವಾಗಿ ಪಂತ್ 2016 ರಲ್ಲಿ ಡೆಲ್ಲಿ ತಂಡದ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ಈ ಫ್ರಾಂಚೈಸಿಯ ಭಾಗವಾಗಿದ್ದರು. ಇದೀಗ ಪಂತ್, ಡೆಲ್ಲಿ ತಂಡಕ್ಕೆ ವಿದಾಯ ಹೇಳುವುದು ಖಚಿತ ಎನ್ನಲಾಗುತ್ತಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ರಿಷಬ್ ಪಂತ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಉಳಿಸಿಕೊಳ್ಳುವ ಬಗ್ಗೆ ಹಲವಾರು ಸುತ್ತಿನ ಚರ್ಚೆಗಳು ನಡೆದಿವೆ. ಆದರೆ ಇಬ್ಬರ ನಡುವೆ ಯಾವುದೇ ಒಮ್ಮತ ಮೂಡದ ಕಾರಣ ಪಂತ್ ಅವರನ್ನು ತಂಡದಿಂದ ಬಿಡುಗಡೆ ಮಾಡಲು ದೆಹಲಿ ನಿರ್ಧರಿಸಿದೆ. ತೆರೆ ಮರೆಯ ವದಂತಿಗಳ ಪ್ರಕಾರ, ಪಂತ್ ತಂಡದ ನಾಯಕನಾಗಿ ಉಳಿಯಲು ಬಯಸಿದ್ದರು. ಇದರ ಹೊರತಾಗಿ ಅವರು ತಂಡದ ಮಾಲೀಕರ ಬಳಿ ಕೆಲವು ಬೇಡಿಕೆಗಳನ್ನು ಸಹ ಇಟ್ಟಿದ್ದರು. ಆದರೆ ಫ್ರಾಂಚೈಸಿ ಪಂತ್ ಅವರ ಬೇಡಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲು ಸಿದ್ಧವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಅದರಲ್ಲೂ ಫ್ರಾಂಚೈಸಿಗೆ ಪಂತ್ ನಾಯಕತ್ವದ ಬಗ್ಗೆ ವಿಶ್ವಾಸವಿರಲಿಲ್ಲ. ಹೀಗಾಗಿ ಪಂತ್ ಅವರನ್ನು ಉಳಿಸಿಕೊಳ್ಳದಿರಲು ನಿರ್ಧರಿಸಲಾಗಿದೆ.
ಪಂತ್ ಅವರನ್ನು 2021 ರಲ್ಲಿ ದೆಹಲಿ ತಂಡದ ನಾಯಕನನ್ನಾಗಿ ನೇಮಿಸಲಾಯಿತು. ಅಪಘಾತಕ್ಕೀಡಾಗಿ ಕ್ರಿಕೆಟ್ನಿಂದ ಹೊರಗುಳಿದಿದ್ದ ಪಂತ್, ಪೂರ್ಣ ಚೇತರಿಸಿಕೊಂಡು ಈ ವರ್ಷ ಐಪಿಎಲ್ ಅಖಾಡಕ್ಕಿಳಿದ ನಂತರವೂ ಅವರು ಮತ್ತೆ ನಾಯಕನಾಗಿ ಮುಂದವರೆದಿದ್ದರು. ಆದಾಗ್ಯೂ, ಪಂತ್ ಅವರ ಅಧಿಕಾರಾವಧಿಯಲ್ಲಿ, ಡೆಲ್ಲಿ ಒಂದು ಬಾರಿ ಮಾತ್ರ ಪ್ಲೇ ಆಫ್ ತಲುಪಿದರೆ ಉಳಿದಂತೆ ತಂಡದ ಪ್ರದರ್ಶನ ಅಷ್ಟಕಷ್ಟೆ. ಇಂತಹ ಪರಿಸ್ಥಿತಿಯಲ್ಲಿ ಪಂತ್ ಈ ಬಾರಿ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಮೆಗಾ ಹರಾಜಿನಲ್ಲಿ ಭಾರತದ ದುಬಾರಿ ಆಟಗಾರ ಎನಿಸಿಕೊಳ್ಳುವ ಸಾಧ್ಯತೆ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅವರನ್ನು ಖರೀದಿಸಲು ರೇಸ್ನಲ್ಲಿವೆ ಎಂದು ಹಲವು ವರದಿಗಳು ಹೇಳಿವೆ.
ಧಾರಣೆಗೆ ಸಂಬಂಧಿಸಿದಂತೆ, ಡೆಲ್ಲಿ ಕ್ಯಾಪಿಟಲ್ಸ್ 4 ಆಟಗಾರರನ್ನು ಉಳಿಸಿಕೊಂಡಿದೆ. ಇದರಲ್ಲಿ ಮೊದಲ ಧಾರಣೆ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಆಗಿದ್ದರೆ, ಎರಡನೇ ಧಾರಣೆ ಸ್ಪಿನ್ನರ್ ಕುಲ್ದೀಪ್ ಯಾದವ್. ಅವರನ್ನು ಹೊರತುಪಡಿಸಿ, ಫ್ರಾಂಚೈಸಿ ಕಳೆದ ಸೀಸನ್ನಲ್ಲಿ ಸಾಕಷ್ಟು ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಉದಯೋನ್ಮುಖ ಬ್ಯಾಟ್ಸ್ಮನ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಸಹ ಉಳಿಸಿಕೊಂಡಿದೆ. ಯುವ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಅಭಿಷೇಕ್ ಪೊರೆಲ್ ಅವರನ್ನು ಅನ್ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲಾಗುವುದು. ಇದಲ್ಲದೆ ಮೆಗಾ ಹರಾಜಿನ ಸಮಯದಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ 2 ಆಟಗಾರರನ್ನು ಖರೀದಿಸುವ ಆಯ್ಕೆಯನ್ನು ಫ್ರಾಂಚೈಸಿ ಹೊಂದಿರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Wed, 30 October 24