ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯದಲ್ಲಿ ಸೋತು ಸರಣಿ ಕಳೆದುಕೊಳ್ಳುವ ಭೀತಿಯಲ್ಲಿರುವ ಭಾರತ (India vs South Africa) ತಂಡ ಇಂದು ಮೂರನೇ ಟಿ20 ಪಂದ್ಯವನ್ನು ಆಡಲಿದೆ. ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಕದನ ನಡೆಯಲಿದ್ದು, ಇದು ಟೀಮ್ ಇಂಡಿಯಾಗೆ ಮಾಡು ಇಲ್ಲವೇ ಮಡಿ ಮ್ಯಾಚ್. ಗೆದ್ದರೆ ಸರಣಿಯಲ್ಲಿ ಜೀವಂತವಾಗಿರಲಿದೆ. ಸೋತರೆ ರಿಷಭ್ ಪಂತ್ (Rishabh Pant) ನಾಯಕತ್ವಕ್ಕೆ ಹಾಗೂ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಹೊಸದಿಲ್ಲಿಯ ಮೊದಲ ಟಿ20 ಪಂದ್ಯವನ್ನು ಭಾರತ ಕಳಪೆ ಬೌಲಿಂಗ್‌ನಿಂದಾಗಿ ಕಳೆದುಕೊಂಡರೆ, ರವಿವಾರ ಕಟಕ್‌ನಲ್ಲಿ ಬ್ಯಾಟಿಂಗ್ ಕೈಕೊಟ್ಟಿತು. ಒಂದು ಹಂತದಲ್ಲಿ ಬೌಲಿಂಗ್ ಮೇಲುಗೈ ಸಾಧಿಸಿದರೂ ಹೆನ್ರಿಕ್ ಕ್ಲಾಸೆನ್ (Heinrich Klaasen) ಅವರ ಟಾಪ್ ಕ್ಲಾಸ್ ಬ್ಯಾಟಿಂಗ್ ಭಾರತವನ್ನು ಮುಳುಗಿಸಿತು. ಪಂತ್ ಪಡೆ ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿದೆ. ಇದೀಗ ಮೂರನೇ ಕದನಕ್ಕೆ ಮಾಸ್ಟರ್ ಪ್ಲಾನ್ನೊಂದಿಗೆ ಭಾರತ ಕಣಕ್ಕಿಳಿಯಲಿದೆ.
ಹೌದು, ಮೂರನೇ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆ ಖಚಿತ. ಅದು ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ. ಪ್ರಮುಖವಾಗಿ ಭಾರತಕ್ಕೆ ಉತ್ತಮ ಆರಂಭ ಸಿಗುತ್ತಿಲ್ಲ. ರುತುರಾಜ್ ಗಾಯಕ್ವಾಡ್ ಅವರ ಐಪಿಎಲ್ನ ಕಳಪೆ ಫಾರ್ಮ್ ಇಲ್ಲೂ ಮುಂದುವರೆದಿದೆ. ಹೀಗಾಗಿ ಇವರ ಜಾಗದಲ್ಲಿ ವೆಂಕಟೇಶ್ ಅಯ್ಯರ್ ಆಡುವ ನಿರೀಕ್ಷೆಯಿದೆ. ಇದರಿಂದ ಒಂದು ಬೌಲಿಂಗ್ ಆಯ್ಕೆಕೂಡ ಹೆಚ್ಚು ಸಿಗಲಿದೆ. ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಎರಡೂ ಪಂದ್ಯಗಳಲ್ಲಿ ತಮ್ಮ ಕೈಲಾದಷ್ಟು ಕೊಡುಗೆ ನೀಡಿದ್ದಾರೆ.
ಆದರೆ, ಭಾರತದ ಮಧ್ಯಮ ಕ್ರಮಾಂಕವನ್ನು ನಂಬುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ. ಹಾರ್ದಿಕ್ ಪಾಂಡ್ಯ, ನಾಯಕ ರಿಷಭ್ ಪಂತ್ ಸಿಡಿಯುವ ಜತೆಗೆ ನಿಂತು ಆಡುವುದನ್ನೂ ಕಲಿಯಬೇಕಿದೆ. ರಿಷಭ್ ಪಂತ್ ನಾಯಕತ್ವಕ್ಕೆ ಇನ್ನೂ ಪಕ್ವವಾಗಿಲ್ಲ ಎಂಬುದು ಪುನಃ ಸಾಬೀತಾಗಿದೆ. ಗಳಿಸಿದ್ದು ಕೇವಲ 23 ಹಾಗೂ 5 ರನ್. ದಿನೇಶ್ ಕಾರ್ತಿಕ್ ಉತ್ತಮ ಲಯದಲ್ಲಿದ್ದಾರೆ. ಕಟಕ್ ಪಂದ್ಯದ ಡೆತ್ ಓವರ್‌ಗಳಲ್ಲಿ ಸಿಡಿದು ನಿಂತಿದ್ದು, ಹೆಚ್ಚಿನ ನಿರೀಕ್ಷೆ ಮೂಡಿಸಿದ್ದಾರೆ.
ಭಾರತ vs ಐರ್ಲೆಂಡ್ ಸರಣಿ: ಟೀಮ್ ಇಂಡಿಯಾ ಹೊಸ ಕೋಚ್ ವಿವಿಎಸ್ ಲಕ್ಷ್ಮಣ್
ಭಾರತ ತಂಡದ ಸ್ಪಿನ್ನರ್‌ಗಳು ಪ್ರಭಾವಿ ಎನಿಸಿಲ್ಲ. ಯುಜ್ವೇಂದ್ರ ಚಹಲ್ ಮತ್ತು ಅಕ್ಷರ್ ಪಟೇಲ್ ಮೊದಲ ಎರಡು ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಇವರಲ್ಲಿ ಒಬ್ಬರನ್ನು ಕೈಬಿಟ್ಟು, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿಗೆ ಅವಕಾಶ ಸಿಗುವ ಸಂಭವವಿದೆ. ಅಂತೆಯೆ ತಂಡದ ಸಮತೋಲನದ ದೃಷ್ಟಿಯಿಂದ ಆವೇಶ್ ಖಾನ್ ಬದಲಿಗೆ ಅರ್ಷ್‌ದೀಪ್ ಸಿಂಗ್‌ಗೆ ಅವಕಾಶ ನಿಡುವುದು ಉತ್ತಮ. ಡೆತ್ ಓವರ್‌ನಲ್ಲಿ ತೀಕ್ಷ್ಣ ಯಾರ್ಕರ್‌ಗಳ ಮೂಲಕ ಮಿಂಚಿರುವ ಅರ್ಷ್‌ದೀಪ್ ರನ್‌ನಿಯಂತ್ರಣದಲ್ಲಿಯೂ ಗಮನಸೆಳೆದಿದ್ದಾರೆ.
ಇತ್ತ ಕಗಿಸೊ ರಬಾಡ, ಆನ್ರಿಚ್ ನೋರ್ಜೆ, ಪಾರ್ನೆಲ್ ಅವರನ್ನೊಳಗೊಂಡ ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ಭಾರತದ ಟ್ರ್ಯಾಕ್‌ನಲ್ಲಿ ಮಿಂಚುತ್ತಿರುವುದು ವಿಶೇಷ. ದಕ್ಷಿಣ ಆಫ್ರಿಕಾದ ಗೆಲುವಿನ ಆಟದಲ್ಲಿ ಐಪಿಎಲ್ ಯಶಸ್ಸು ಕೂಡ ಇದೆ ಎಂಬುದು ರಹಸ್ಯವಲ್ಲ. ಬ್ಯಾಟಿಂಗ್ನಲ್ಲಿ ಡೇವಿಡ್ ಮಿಲ್ಲರ್, ರಸಿ ವ್ಯಾನ್ ಡರ್ ಡಸೆನ್ ಮತ್ತು ಹೆನ್ರಿಚ್ ಕ್ಲಾಸೆನ್ ಉತ್ತಮ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ರಿಷಭ್ ಪಂತ್ (ನಾಯಕ-ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯಿ, ಯುಜ್ವೇಂದ್ರ ಚಹಲ್, ಆರ್ಷದೀಪ್ ಸಿಂಗ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.