Rishabh Pant: ಅಪಘಾತದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ರಿಷಭ್ ಪಂತ್
Rishabh Pant: ಮೊಣಕಾಲಿನ ಸರ್ಜರಿ ಮುಗಿಸಿರುವ ರಿಷಭ್ ಪಂತ್ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಹೀಗಾಗಿ ಅವರು ಕನಿಷ್ಠ 6-7 ತಿಂಗಳ ಕಾಲ ಮೈದಾನಕ್ಕೆ ಇಳಿಯಲು ಸಾಧ್ಯವಾಗುವುದಿಲ್ಲ
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಡಿಸೆಂಬರ್ 30 ರಂದು ದೆಹಲಿಯಿಂದ ಉತ್ತರ ಖಂಡದ ಹರಿದ್ವಾರದಲ್ಲಿರುವ ರೂರ್ಕಿಯಲ್ಲಿರುವ ತನ್ನ ಮನೆಗೆ ತೆರಳುವಾಗ ಭೀಕರ ಅಪಘಾತ ಸಂಭವಿಸಿತ್ತು. ಬಳಿಕ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ (Max Hospital) ಸೇರಿಸಲಾಗಿತ್ತು. ಕೆಲ ದಿನಗಳ ಚಿಕಿತ್ಸೆಯ ಬಳಿಕ ಪಂತ್ ಅವರನ್ನು ಡೆಹ್ರಾಡೂನ್ನಿಂದ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಗಾಯದಿಂದ ತುಸು ಚೇತರಿಸಿಕೊಂಡಿರುವ ರಿಷಭ್ ಪಂತ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಂತ್, ನಿಮ್ಮೆಲ್ಲರ ಹಾರೈಕೆಗೆ ನಾನು ಆಭಾರಿಯಾಗಿದ್ದೇನೆ. ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಚೇತರಿಕೆಯ ಹಾದಿಯಲ್ಲಿದ್ದೇನೆ. ನನಗೆ ಬೆಂಬಲ ಸೂಚಿಸಿದ ಅಭಿಮಾನಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ವೈದ್ಯರಿಗೆ, ಬಿಸಿಸಿಐಗೆ, ಜಯ್ ಶಾ ಅವರಿಗೆ..ಎಲ್ಲರಿಗೂ ನಾನು ಹೃದಯಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ. ಅಲ್ಲದೆ ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಮೈದಾನದಲ್ಲಿ ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದು ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ.
I am humbled and grateful for all the support and good wishes. I am glad to let you know that my surgery was a success. The road to recovery has begun and I am ready for the challenges ahead. Thank you to the @BCCI , @JayShah & government authorities for their incredible support.
— Rishabh Pant (@RishabhPant17) January 16, 2023
ಸದ್ಯ ಮೊಣಕಾಲಿನ ಸರ್ಜರಿ ಮುಗಿಸಿರುವ ರಿಷಭ್ ಪಂತ್ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಹೀಗಾಗಿ ಅವರು ಕನಿಷ್ಠ 6-7 ತಿಂಗಳ ಕಾಲ ಮೈದಾನಕ್ಕೆ ಇಳಿಯಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ. ಇದರಿಂದ ಮುಂಬರುವ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಅನ್ನು ರಿಷಭ್ ಪಂತ್ ತಪ್ಪಿಸಿಕೊಳ್ಳಲಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಪಂತ್ ಕಾಣಿಸಿಕೊಳ್ಳುವುದಿಲ್ಲ ಎಂಬುದನ್ನು ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖಚಿತಪಡಿಸಿದೆ. ಹಾಗಾಗಿ 2023ರ ಪ್ರಮುಖ ಟೂರ್ನಿ ಹಾಗೂ ಸರಣಿಗಳನ್ನು ರಿಷಭ್ ಪಂತ್ ತಪ್ಪಿಸಿಕೊಳ್ಳಲಿದ್ದಾರೆ.
Published On - 9:02 pm, Mon, 16 January 23