Virat Kohli: ಒಂದು ಸಣ್ಣ ಬ್ರೇಕ್ನ ನಂತರ…”ವಿರಾಟ” ದರ್ಶನ
Virat Kohli: ಒಂದು ಸಣ್ಣ ಬ್ರೇಕ್ ನಂತರ...ವಿರಾಟ್ ಕೊಹ್ಲಿ ಕ್ರಿಕೆಟ್ ಅಂಗಳಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಹಳೆಯ ಕಿಂಗ್ ಕೊಹ್ಲಿಯಾಗಿ ಎಂಬುದೇ ಇಲ್ಲಿ ವಿಶೇಷ.
2019ರ ಬಳಿಕ ಒಂದೇ ಒಂದು ಶತಕವಿಲ್ಲ…ಕಳಪೆ ಫಾರ್ಮ್…2021 ರಲ್ಲಿ ನಾಯಕತ್ವಕ್ಕೆ ರಾಜೀನಾಮೆ…ಹೀಗೆ ಕ್ರಿಕೆಟ್ ಅಂಗಳದಲ್ಲಿ ನಾನಾ ಕಾರಣಗಳಿಂದ ಸುದ್ದಿಯಾಗಿದ್ದ ವಿರಾಟ್ ಕೊಹ್ಲಿ (Virat Kohli) ಕಳೆದ ವರ್ಷ ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. ಈ ಬ್ರೇಕ್ ಬೆನ್ನಲ್ಲೇ ನಾನಾ ಟೀಕೆ-ಟಿಪ್ಪಣಿಗಳಿಗೆ ಕೊಹ್ಲಿ ಗುರಿಯಾಗಿದ್ದರು. ಅಷ್ಟೇ ಅಲ್ಲದೆ ಕೊಹ್ಲಿಯ ಖೇಲ್ ಖತಂ, ಕಿಂಗ್ ಕೊಹ್ಲಿಯ ಯುಗಾಂತ್ಯ, ವಿದಾಯ ಹೇಳುವುದು ಉತ್ತಮ ಎಂಬಿತ್ಯಾದಿ ಸುದ್ದಿಗಳು ಕೂಡ ಹರಿದಾಡಿದ್ದವು. ಇವೆಲ್ಲದರ ನಡುವೆ ನೀರವ ಮೌನವಹಿಸಿದ್ದ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದರು. ಈ ಒಂದು ಸಣ್ಣ ಬ್ರೇಕ್ ನಂತರ ಕಿಂಗ್ ಕೊಹ್ಲಿ ಮತ್ತೆ ಕಾಣಿಸಿಕೊಂಡಿದ್ದು ಏಷ್ಯಾಕಪ್ನಲ್ಲಿ…ಆ ಬಳಿಕ ವಿರಾಟ್ ಕೊಹ್ಲಿ ತಮ್ಮ ಹಳೆಯ ವಿರಾಟ ರೂಪ ತೋರಿಸಲಾರಂಭಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.
ಹೌದು, ಒಂದು ಸಣ್ಣ ವಿಶ್ರಾಂತಿಯ ಬಳಿಕ ಮರಳಿದ್ದ ವಿರಾಟ್ ಕೊಹ್ಲಿ ಇದುವರೆಗೆ ಒಟ್ಟು 26 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಿಂಗ್ ಕೊಹ್ಲಿಯ ಬ್ಯಾಟ್ನಿಂದ ಸಿಡಿದಿರುವುದು ಬರೋಬ್ಬರಿ 4 ಶತಕಗಳು. ಅಂದರೆ 2019 ರಿಂದ 2021ರವರೆಗೆ ಒಂದೇ ಒಂದು ಸೆಂಚುರಿ ಸಿಡಿಸದ ಕೊಹ್ಲಿ ಇದೀಗ ಬ್ಯಾಕ್ ಟು ಬ್ಯಾಕ್ ಶತಕಗಳ ಮೂಲಕ ಅಬ್ಬರಿಸಿದ್ದಾರೆ. ಅಷ್ಟೇ ಯಾಕೆ ಇದೇ ಅವಧಿಯಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ 7 ಅರ್ಧಶತಕಗಳು ಕೂಡ ಮೂಡಿಬಂದಿವೆ.
ಅಂದರೆ ಎಲ್ಲರ ಟೀಕೆಗಳನ್ನು ಬದಿಗಿಟ್ಟು, ಒಂದು ತಿಂಗಳುಗಳ ಕಾಲ ಬ್ಯಾಟ್ ಮುಟ್ಟದೇ ಮೈದಾನದಿಂದ ಹೊರಗುಳಿದಿದ್ದ ಕೊಹ್ಲಿ ಆ ಬಳಿಕ ಆಡಿದ 26 ಇನಿಂಗ್ಸ್ಗಳಲ್ಲಿ 11 ಬಾರಿ 50+ ರನ್ ಕಲೆಹಾಕಿದ್ದಾರೆ. ಈ ವೇಳೆ ಬರೋಬ್ಬರಿ 99 ಫೋರ್ ಹಾಗೂ 35 ಸಿಕ್ಸ್ಗಳನ್ನೂ ಕೂಡ ಸಿಡಿಸಿದ್ದಾರೆ.
ಇನ್ನು ಈ ಬ್ರೇಕ್ ಬಳಿಕ ಆಡಿದ 26 ಇನಿಂಗ್ಸ್ ಮೂಲಕ ಕಲೆಹಾಕಿರುವುದು ಬರೋಬ್ಬರಿ 1155 ರನ್ಗಳು. ಅಂದರೆ ಕಿಂಗ್ ಕೊಹ್ಲಿ ತಮ್ಮ ಹಳೆಯ ಚಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಕೆಂದರೆ ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡಿದ ಬಳಿಕ ಆಡಿದ ಟಿ20 ಇನಿಂಗ್ಸ್ಗಳಲ್ಲಿ 70ರ ಸರಾಸರಿಯಲ್ಲಿ ರನ್ಗಳಿಸಿದ್ದಾರೆ. ಇನ್ನು ಏಕದಿನ ಹಾಗೂ ಟೆಸ್ಟ್ನಲ್ಲಿ 82 ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ. ಇದರ ನಡುವೆ ಟಿ20 ಯಲ್ಲಿ ಚೊಚ್ಚಲ ಶತಕ, 4 ಏಕದಿನ ಪಂದ್ಯಗಳಲ್ಲಿ 3 ಶತಕಗಳನ್ನೂ ಕೂಡ ಬಾರಿಸಿದ್ದಾರೆ.
ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್
ಇದೀಗ ಶತಕಗಳ ಮೇಲೆ ಶತಕ ಸಿಡಿಸುತ್ತಾ…ದಾಖಲೆಗಳನ್ನು ಮುರಿಯುತ್ತಾ…ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಸಾಗಿರುವ ಕಿಂಗ್ ಕೊಹ್ಲಿಯ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಅದು ಕೂಡ ಈ ಹಿಂದೆ ಟೀಕೆಗಳನ್ನು ಮಾಡಿದ ಕೆಲ ಮಾಜಿ ಆಟಗಾರರ ಬಾಯಿಂದಲೇ ಎಂಬುದು ವಿಶೇಷ.
ಒಟ್ಟಿನಲ್ಲಿ ಒಂದು ಸಣ್ಣ ಬ್ರೇಕ್ ನಂತರ… ವಿರಾಟ್ ಕೊಹ್ಲಿ ಮರಳಿದ್ದಾರೆ. ಆದರೆ ಈ ಬಾರಿ ಹಳೆಯ ಕಿಂಗ್ ಕೊಹ್ಲಿಯಾಗಿ ಎಂಬುದಷ್ಟೇ ಇಲ್ಲಿ ವ್ಯತ್ಯಾಸ.