Saurav Ganguly: ಸಿಎಂ ಮಮತಾ ಬ್ಯಾನರ್ಜಿ- ಗಂಗೂಲಿ ಭೇಟಿ: ರಾಜಕೀಯಕ್ಕೆ ಬರುತ್ತಾರಾ ದಾದಾ?
Saurav Ganguly - Mamata Banerjee : ದಾದಾ ಕ್ರಿಕೆಟ್ ಬಿಟ್ಟು ರಾಜಕೀಯ ಸೇರಲಿದ್ದಾರೆ ಎಂಬ ಊಹಾಪೋಹಗಳು ಪಶ್ಚಿಮ ಬಂಗಾಳದಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಮೂಲಕ ಸೌರವ್ ಗಂಗೂಲಿ ಕುತೂಹಲ ಮೂಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ (Saurav Ganguly) ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದಾರೆ. ನಬನ್ನಾದಲ್ಲಿರುವ ಸಿಎಂ ಕಚೇರಿಗೆ ಆಗಮಿಸಿದ ಗಂಗೂಲಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಆದರೆ ಈ ಭೇಟಿಯ ಉದ್ದೇಶವೇನು ಎಂಬುದು ಇನ್ನೂ ಕೂಡ ಬಹಿರಂಗವಾಗಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಸೌರವ್ ಗಂಗೂಲಿ ಕೂಡ ನಿರಾಕರಿಸಿದ್ದಾರೆ. ಇದಾಗ್ಯೂ ಈ ಭೇಟಿಯ ಹಿಂದೆ ರಾಜಕೀಯ ಚರ್ಚೆಗಳು ಶುರುವಾಗಿದೆ.
ಸೌರವ್ ಗಂಗೂಲಿ ಪಶ್ಚಿಮ ಬಂಗಾಳ ಸಿಎಂ ಅವರ ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಆದರೆ ಈ ಬಾರಿಯ ಭೇಟಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಏಕೆಂದರೆ ದಾದಾ ಕ್ರಿಕೆಟ್ ಬಿಟ್ಟು ರಾಜಕೀಯ ಸೇರಲಿದ್ದಾರೆ ಎಂಬ ಊಹಾಪೋಹಗಳು ಪಶ್ಚಿಮ ಬಂಗಾಳದಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಮೂಲಕ ಸೌರವ್ ಗಂಗೂಲಿ ಕುತೂಹಲ ಮೂಡಿಸಿದ್ದಾರೆ.
ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸೌರವ್ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಭಿನಂದಿಸಿದ್ದರು. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದ ಗಂಗೂಲಿ, ಮುಖ್ಯಮಂತ್ರಿ ನನಗೆ ತುಂಬಾ ಆಪ್ತರು. ಅವರು ನನಗೆ ತಾಯಿ ಇದ್ದಂತೆ. ಹೀಗಾಗಿ ಅವರು ನನ್ನನ್ನು ಅಭಿನಂದಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದು ತಿಳಿಸಿದ್ದರು.
ಇದಾದ ಬಳಿಕ 4 ವರ್ಷಗಳ ಕಾಲ ಬಿಸಿಸಿಐ ಚುಕ್ಕಾಣಿ ಹಿಡಿದಿದ್ದ ಸೌರವ್ ಗಂಗೂಲಿ ಅವರನ್ನು ಕಳೆದ ವರ್ಷ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ಈ ಬಗ್ಗೆ ಕೂಡ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲದೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಗಂಗೂಲಿ ಅವಕಾಶ ಮಾಡಿಕೊಡುವಂತೆ ಪ್ರಧಾನಿ ಮಂತ್ರಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ: IPL 2023: ಕನ್ನಡಿಗನನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಿದ ಪಂಜಾಬ್ ಕಿಂಗ್ಸ್
“ಪ್ರಧಾನಿ ಅವರಲ್ಲಿ ನನ್ನ ವಿನಂತಿ, ದಯವಿಟ್ಟು ಸೌರವ್ ಅವರಿಗೆ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಿ” ಎಂದು ಮಮತಾ ಬ್ಯಾನರ್ಜಿ ಅವರು ಬಹಿರಂಗವಾಗಿ ಮನವಿ ಮಾಡಿದ್ದರು. ಇದಾಗ್ಯೂ ಅವಕಾಶ ನೀಡದ ಬಗ್ಗೆ ಪ್ರತಿಕ್ರಿಯಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಸೌರವ್ ಗಂಗೂಲಿ ಅವರು ಬಂಗಾಳದ ಪುತ್ರ ಎಂಬ ಕಾರಣಕ್ಕೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಿಲ್ಲ’ ಎಂದು ಆರೋಪಿಸಿದ್ದರು.
ಅಷ್ಟೇ ಅಲ್ಲದೆ ಬಿಸಿಸಿಐಯಲ್ಲಿ ಅಮಿತ್ ಶಾ ಪುತ್ರ ಜಯ್ ಶಾ ಅಧಿಕಾರಾವಧಿ ವಿಸ್ತರಣೆ ಮಾಡಿದ್ದಾರೆ. ಆದರೆ ಸೌರವ್ ಗಂಗೂಲಿಯನ್ನು ಬಿಸಿಸಿಐನಿಂದ ಕೈ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದೀಗ ದಿಢೀರ್ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಮೂಲಕ ಸೌರವ್ ಗಂಗೂಲಿ ಬಂಗಾಳ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
Published On - 7:24 pm, Mon, 16 January 23