ಪಾಕಿಸ್ತಾನ್ ಫೈನಲ್​ಗೆ: ಟೀಮ್ ಇಂಡಿಯಾ ಅಭಿಮಾನಿಗಳಿಗೆ ನಿರಾಸೆ!

2026ರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನf ನಡುವಿನ ರೋಚಕ ಕದನವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾ 'ಎ' ವಿರುದ್ಧ 8 ವಿಕೆಟ್‌ಗಳ ಹೀನಾಯ ಸೋಲು ಕಂಡು ಭಾರತ 'ಎ' ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ, ಎರಡನೇ ಸೆಮಿಫೈನಲ್‌ನಲ್ಲಿ ಗೆದ್ದು ಪಾಕಿಸ್ತಾನ್ 'ಎ' ಫೈನಲ್‌ಗೆ ಪ್ರವೇಶಿಸಿದೆ.

ಪಾಕಿಸ್ತಾನ್ ಫೈನಲ್​ಗೆ: ಟೀಮ್ ಇಂಡಿಯಾ ಅಭಿಮಾನಿಗಳಿಗೆ ನಿರಾಸೆ!
IND vs PAK
Image Credit source: ACC

Updated on: Nov 28, 2026 | 10:36 AM

2026ರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ನಡುವೆ ಫೈನಲ್ ಪಂದ್ಯ ನಡೆಯಲಿದೆ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಮೊದಲ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ‘ಎ’ ವಿರುದ್ಧ ಮುಗ್ಗರಿಸಿ ಭಾರತ ‘ಎ’ ಟೂರ್ನಿಯಿಂದ ನಿರ್ಗಮಿಸಿದರೆ, ಮತ್ತೊಂದೆಡೆ ಬಾಂಗ್ಲಾದೇಶ್ ‘ಎ’ ತಂಡವನ್ನು 5 ವಿಕೆಟ್‌ಗಳಿಂದ ಬಗ್ಗುಬಡಿದ ಪಾಕಿಸ್ತಾನ ‘ಎ’ ತಂಡವು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಬೌಲರ್‌ಗಳ ಕರಾರುವಾಕ್ ದಾಳಿ:

ದ್ವಿತೀಯ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ್ ‘ಎ’ ತಂಡಕ್ಕೆ ಪಾಕಿಸ್ತಾನದ ಬೌಲರ್‌ಗಳು ಆರಂಭದಿಂದಲೇ ಕಡಿವಾಣ ಹಾಕಿದರು. ಪಾಕ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಯುವ ವೇಗಿ ಅಲಿ ರಾಝ ಮತ್ತು ಸ್ಪಿನ್ನರ್ ಸುಫಿಯಾನ್ ಮುಕೀಮ್ ಬಾಂಗ್ಲಾ ಬ್ಯಾಟರ್‌ಗಳನ್ನು ಕಾಡಿದರು. ಇವರಿಬ್ಬರ ಜೋಡಿ ಒಟ್ಟು 5 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಎದುರಾಳಿ ತಂಡ ದೊಡ್ಡ ಮೊತ್ತ ಪೇರಿಸದಂತೆ ತಡೆಯಿತು. ಅಂತಿಮವಾಗಿ ಬಾಂಗ್ಲಾದೇಶ್ ‘ಎ’ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 232 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

Loading...

ನವಾಝ್ ಭರ್ಜರಿ ಬ್ಯಾಟಿಂಗ್:

233 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ್ ‘ಎ’ ತಂಡಕ್ಕೆ ಆರಂಭದಿಂದಲೇ ಉತ್ತಮ ಅಡಿಪಾಯ ಸಿಕ್ಕಿತು. ಯುವ ಬ್ಯಾಟರ್‌ಗಳಾದ ಶಹಝೈಬ್ ಖಾನ್ ಮತ್ತು ಹಸನ್ ನವಾಝ್ ಜವಾಬ್ದಾರಿಯುತ ಆಟವಾಡಿ ಆಕರ್ಷಕ ಅರ್ಧಶತಕಗಳನ್ನು ಸಿಡಿಸಿದರು. ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿತು. ಪರಿಣಾಮವಾಗಿ ಇನ್ನೂ 28 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಪಾಕಿಸ್ತಾನ್ ತಂಡ ಗೆಲುವಿನ ನಗೆ ಬೀರಿತು.

  • ಬಾಂಗ್ಲಾದೇಶ್- A: 232/8(50)
  • ಪಾಕಿಸ್ತಾನ್- A: 233/5(45.2)

ಪಾಕಿಸ್ತಾನ್ ‘ಎ’ ಪ್ಲೇಯಿಂಗ್ ಇಲೆವೆನ್: ಶಮಿಲ್ ಹುಸೇನ್, ಮಾಝ್ ಸದಾಕತ್, ಶಹಝೈಬ್ ಖಾನ್, ಹಸನ್ ನವಾಝ್, ಅಬ್ದುಲ್ ಸಮದ್ (ನಾಯಕ), ಫರ್ಹಾನ್ ಯೂಸುಫ್, ರೋಹೈಲ್ ನಝೀರ್ (ವಿಕೆಟ್ ಕೀಪರ್), ಮೊಹಮ್ಮದ್ ಇಮ್ರಾನ್, ಅಹ್ಮದ್ ದಾನಿಯಾಲ್, ಸುಫಿಯಾನ್ ಮುಕೀಮ್, ಅಲಿ ರಾಝ.

ಇದನ್ನೂ ಓದಿ: ಆರಂಭಿಕರ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ: ಫೈನಲ್​ ಕನಸು ನುಚ್ಚುನೂರು!​

ಬಾಂಗ್ಲಾದೇಶ್ ‘ಎ’ ಪ್ಲೇಯಿಂಗ್ ಇಲೆವೆನ್: ಮಹ್ಮದುಲ್ ಹಸನ್ ಜಾಯ್, ಸೈಫ್ ಹಸನ್ (ನಾಯಕ), ಶಹಾದತ್ ಹೊಸೈನ್, ಮಹಿದುಲ್ ಇಸ್ಲಾಂ ಅಂಕನ್ (ವಿಕೆಟ್ ಕೀಪರ್), ಅಫಿಫ್ ಹೊಸೈನ್, ಸಬ್ಬೀರ್ ರೆಹಮಾನ್, ಎಸ್‌ಎಂ ಮೆಹೆರೋಬ್, ಎಂಡಿ ರುಬೆಲ್, ರಕಿಬುಲ್ ಹಸನ್, ರಿಪನ್ ಮೊಂಡಲ್, ಇಕ್ಬಾಲ್ ಹೊಸೈನ್ ಎಮನ್.

ಟೀಮ್ ಇಂಡಿಯಾ ಅಭಿಮಾನಿಗಳಿಗೆ ನಿರಾಸೆ:

ಟೂರ್ನಿಯ ಲೀಗ್ ಹಂತದಲ್ಲಿ ಪಾಕಿಸ್ತಾನ ‘ಎ’ ವಿರುದ್ಧ 48 ರನ್‌ಗಳಿಂದ ಅನುಭವಿಸಿದ್ದ ಸೋಲಿನ ಕಹಿಯನ್ನು ಮರೆತು, ಫೈನಲ್ ವೇದಿಕೆಯಲ್ಲಿ ಸಾಂಪ್ರದಾಯಿಕ ಎದುರಾಳಿಗೆ ತಕ್ಕ ತಿರುಗೇಟು ನೀಡುವ ಮೂಲಕ ಭರ್ಜರಿ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.

ಪ್ರಶಸ್ತಿ ಸುತ್ತಿನಲ್ಲಿ ಪಾಕ್ ಪಡೆಯನ್ನು ಬಗ್ಗುಬಡಿದು ಆ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಜೊತೆಗೆ ಚಾಂಪಿಯನ್ ಪಟ್ಟಕ್ಕೇರುವ ಸುವರ್ಣಾವಕಾಶ ಭಾರತ ‘ಎ’ ತಂಡದ ಮುಂದಿತ್ತು. ಆದರೆ, ಸೆಮಿಫೈನಲ್‌ನಲ್ಲಿ ಶ್ರೀಲಂಕಾ ‘ಎ’ ವಿರುದ್ಧ ಟೀಮ್ ಇಂಡಿಯಾ 8 ವಿಕೆಟ್‌ಗಳಿಂದ ಪರಾಜಯಗೊಂಡಿದೆ. ಇದರೊಂದಿಗೆ ಫೈನಲ್‌ನಲ್ಲಿ ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳುವ ಭಾರತದ ಕನಸು ನುಚ್ಚುನೂರಾಗಿದ್ದು, ಹೈವೋಲ್ಟೇಜ್ ಕದನವನ್ನು ನಿರೀಕ್ಷಿಸಿದ್ದ ಅಭಿಮಾನಿಗಳು ತೀವ್ರ ನಿರಾಸೆ ಅನುಭವಿಸಿದ್ದಾರೆ.

ಫೈನಲ್‌ನಲ್ಲಿ ಶ್ರೀಲಂಕಾ ಸವಾಲು:

ಸೆಮಿಫೈನಲ್ ಗೆಲುವಿನೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿರುವ ಪಾಕಿಸ್ತಾನ್ ‘ಎ’ ತಂಡವು ಭಾನುವಾರ (ನವೆಂಬರ್ 29) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ಶ್ರೀಲಂಕಾ ‘ಎ’ ತಂಡವನ್ನು ಎದುರಿಸಲಿದೆ. ಏಷ್ಯಾಕಪ್ ಕಿರೀಟಕ್ಕಾಗಿ ಉಭಯ ತಂಡಗಳ ನಡುವೆ ರೋಚಕ ಪೈಪೋಟಿ ನಡೆಯುವ ನಿರೀಕ್ಷೆಯಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us