
ಬೆಂಗಳೂರು (ಏ, 21): ಪಂಜಾಬ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 37 ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅದ್ಭುತ ಇನ್ನಿಂಗ್ಸ್ ಆಡಿದರು. ರನ್ ಚೇಸ್ ನಲ್ಲಿ ಅವರು 54 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಆಡಿದ ಈ ಇನ್ನಿಂಗ್ಸ್‌ನಿಂದಾಗಿ ಆರ್‌ಸಿಬಿ ಗೆಲುವು ಸಾಧಿಸಿತು. ಈ ಪ್ರದರ್ಶನಕ್ಕಾಗಿ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು.
ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೂಡಲೇ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದರು. ಐಪಿಎಲ್ ಇತಿಹಾಸದಲ್ಲಿ ವಿರಾಟ್ 19 ನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದರು. ರೋಹಿತ್ ಶರ್ಮಾ ಕೂಡ 19 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ. ಇದು ಭಾರತೀಯ ಆಟಗಾರರಲ್ಲಿ ಅತ್ಯಧಿಕವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ 18 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರ ಈ ದಾಖಲೆಯನ್ನು ಸರಿಗಟ್ಟಿದರು. ಆದರೆ, ರಾತ್ರಿ 11 ಗಂಟೆ ಸುಮಾರಿಗೆ, ರೋಹಿತ್ ಮತ್ತೊಮ್ಮೆ ವಿರಾಟ್‌ಗಿಂತ ಮುಂದಕ್ಕೆ ಹೋಗಿ ಕೊಹ್ಲಿಯ ಪಂದ್ಯಶ್ರೇಷ್ಠ ಸಾಧನೆ ಪುಡಿಗಟ್ಟಿದರು. ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 76 ರನ್‌ಗಳ ಇನ್ನಿಂಗ್ಸ್ ಆಡಿದರು. ಅವರು 45 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ ಈ ರನ್ ಗಳಿಸಿದರು. ಈ ಇನ್ನಿಂಗ್ಸ್‌ಗೆ ಅವರು ಪಂದ್ಯಶ್ರೇಷ್ಠರಾದರು. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ 20 ನೇ ಬಾರಿಗೆ ಈ ಪ್ರಶಸ್ತಿಯನ್ನು ಪಡೆದು ವಿರಾಟ್ ಸಾಧನೆಯನ್ನು ಹಿಂದಿಕ್ಕಿದರು.
Rohit Sharma: ಪೋಸ್ಟ್ ಮ್ಯಾಚ್ನಲ್ಲಿ ರೋಹಿತ್ ಶರ್ಮಾರನ್ನು ಹಾಡಿಹೊಗಳಿದ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಆಟಗಾರನ ಬಗ್ಗೆ ಮಾತನಾಡಿದರೆ, ಎಬಿ ಡಿವಿಲಿಯರ್ಸ್ ಮೊದಲ ಸ್ಥಾನದಲ್ಲಿದ್ದಾರೆ. ದೆಹಲಿ ಮತ್ತು ಆರ್‌ಸಿಬಿ ಪರ ಆಡುವ ಎಬಿಡಿ 25 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕ್ರಿಸ್ ಗೇಲ್ 22 ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 2008 ರಲ್ಲಿ ಕೆಕೆಆರ್ ಪರ ಪಾದಾರ್ಪಣೆ ಮಾಡಿದ ಗೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳಲ್ಲೂ ಆಡಿದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ