IPL 2025: ಕೊನೆಗೂ ಅಬ್ಬರಿಸಿದ ರೋಹಿತ್; ಚೆನ್ನೈ ವಿರುದ್ಧ ಗೆದ್ದ ಮುಂಬೈ
Mumbai Indians' Hat-trick Win: ಐಪಿಎಲ್ 2025ರಲ್ಲಿ ಕಳಪೆ ಆರಂಭ ಪಡೆದಿದ್ದ ಮುಂಬೈ ಇಂಡಿಯ, ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕಗಳ ನೆರವಿನಿಂದ ಮುಂಬೈ ತಂಡವು ಚೆನ್ನೈ ನಿಗದಿಪಡಿಸಿದ 176 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು.

ಐಪಿಎಲ್‌ನಲ್ಲಿ (IPL 2025) ಕಳಪೆ ಆರಂಭ ಪಡೆದು ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದ್ದ ಮುಂಬೈ ಇಂಡಿಯನ್ಸ್ (MI) ತಂಡ ಲಯಕಂಡುಕೊಂಡತೆ ತೋರುತ್ತಿದೆ. ಮೊದಲ 5 ಪಂದ್ಯಗಳಲ್ಲಿ ಕೇವಲ 1 ಗೆಲುವು ದಾಖಲಿಸಿದ್ದ ಮುಂಬೈ ತಂಡ ಈಗ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಐಪಿಎಲ್ 2025 ರ 38 ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಸುಲಭ ಗೆಲುವು ಸಾಧಿಸಿ ಸಿಎಸ್ಕೆ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿತು.
ಹ್ಯಾಟ್ರಿಕ್ ಜಯ
ವಾಸ್ತವವಾಗಿ ಈ ಸೀಸನ್ನಲ್ಲಿ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿತ್ತು. ಆ ಪಂದ್ಯವನ್ನು ಚೆನ್ನೈ 4 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಆದರೆ ಇದೀಗ ಈ ಪಂದ್ಯವನ್ನು ಗೆಲ್ಲುವ ಮೂಲಕ ಹಳೆಯ ಸೋಲಿಗೆ ಮುಂಬೈ ಸೇಡು ತೀರಿಸಿಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 176 ರನ್ ಗಳಿಸಲಷ್ಟೇ ಶಕ್ತವಾಯಿತು.
ದುಬೆ- ಜಡೇಜಾ ಅರ್ಧಶತಕ
ಮುಂಬೈ ಕರಾರುವಕ್ಕಾದ ದಾಳಿ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ 11 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಾದ ನಂತರ, ರವೀಂದ್ರ ಜಡೇಜಾ ಮತ್ತು ಶಿವಂ ದುಬೆ ತಲಾ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಉತ್ತಮ ಸ್ಕೋರ್‌ಗೆ ಕೊಂಡೊಯ್ದರು. ಶಿವಂ ದುಬೆ 32 ಎಸೆತಗಳಲ್ಲಿ 50 ರನ್ ಗಳಿಸಿದರೆ, ರವೀಂದ್ರ ಜಡೇಜಾ 35 ಎಸೆತಗಳಲ್ಲಿ 53 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಲ್ಲದೆ, 17 ವರ್ಷದ ಆಯುಷ್ ಮ್ಹಾತ್ರೆ 15 ಎಸೆತಗಳಲ್ಲಿ 32 ರನ್‌ಗಳ ಇನ್ನಿಂಗ್ಸ್ ಆಡಿದರು. ಆರಂಭಿಕ ಆಟಗಾರ ಶೇಖ್ ರಶೀದ್ ಕೂಡ 19 ರನ್‌ಗಳ ಕೊಡುಗೆ ನೀಡಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ದೀಪಕ್ ಚಹಾರ್, ಅಶ್ವಿನಿ ಕುಮಾರ್ ಮತ್ತು ಚೈಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ರೋಹಿತ್- ಸೂರ್ಯ ಅರ್ಧಶತಕ
ಈ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ರಯಾನ್ ರಿಕಲ್ಟನ್ ಮತ್ತು ರೋಹಿತ್ ಉತ್ತಮ ಆರಂಭ ನೀಡಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಮೊದಲ ವಿಕೆಟ್‌ಗೆ 63 ರನ್‌ಗಳನ್ನು ಸೇರಿಸಿದರು. ಆದರೆ ರಿಕಲ್ಟನ್, 19 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 24 ರನ್ ಗಳಿಸಿ ಔಟಾಗುವುದರೊಂದಿಗೆ ಈ ಇಬ್ಬರ ಜೊತೆಯಾಟ ಮುರಿದುಬಿತ್ತು. ಆದರೆ ಸತತ ವೈಫಲ್ಯದಿಂದ ಬಳಲುತ್ತಿದ್ದ ರೋಹಿತ್ ಈ ಪಂದ್ಯದಲ್ಲಿ ಲಯಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
IPL: ಅತಿ ಹೆಚ್ಚು ಪಂದ್ಯಶ್ರೇಷ್ಠ; ರೋಹಿತ್ ದಾಖಲೆ ಸರಿಗಟ್ಟಿದ ಕೊಹ್ಲಿ
ಸಿಎಸ್ಕೆ ಬೌಲರ್‌ಗಳನ್ನು ಸರಿಯಾಗಿ ದಂಡಿಸಿದ ರೋಹಿತ್ ಈ ಸೀಸನ್ನ ಮೊದಲ ಅರ್ಧಶತಕವನ್ನು 33 ಎಸೆತಗಳಲ್ಲಿ ಪೂರೈಸಿದರು. ಈ ವೇಳೆ ರೋಹಿತ್ಗೆ ಜೊತೆಯಾದ ಸೂರ್ಯ ಆರಂಭದಿಂದಲೇ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ನಂತರ ಗೇರ್ ಬದಲಿಸಿದ ಸೂರ್ಯ ಕುಮಾರ್ ಮತ್ತು ರೋಹಿತ್ 16 ನೇ ಓವರ್ ಬೌಲಿಂಗ್ ಮಾಡಲು ಬಂದ ಮಥಿಶಾ ಪತಿರಾನ ಓವರ್ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 pm, Sun, 20 April 25