ಸುನಿಲ್ ಗವಾಸ್ಕರ್ ವಿರುದ್ಧ ರೋಹಿತ್ ಶರ್ಮಾ ದೂರು..!
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳನ್ನು ಮಾಡಿದ್ದರು. ಅದರಲ್ಲೂ ಕೆಲವೊಮ್ಮೆ ನಾಲಿಗೆ ಹರಿಬಿಡುವ ಮೂಲಕ ಗಮನ ಸೆಳೆದಿದ್ದರು. ಇದೇ ವಿಚಾರವಾಗಿ ಇದೀಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತದ ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿ ವೇಳೆ ಗವಾಸ್ಕರ್ ನಕರಾತ್ಮಕ ವಿಚಾರಗಳ ಪ್ರಸ್ತಾಪದ ಮೂಲಕ ಭಾರತೀಯ ಆಟಗಾರರನ್ನು ಗುರಿಯಾಗಿಸಿದ್ದರು ಎಂದು ಹಿಟ್ಮ್ಯಾನ್ ಬಿಸಿಸಿಐ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿನ ಹೀನಾಯ ಸೋಲಿನ ಬಳಿಕ ಬಿಸಿಸಿಐ ಪರಿಶೀಲನಾ ಸಭೆ ಕರೆದಿತ್ತು. ಈ ಸಭೆಯಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಪಾಲ್ಗೊಂಡಿದ್ದರು.
ಈ ವೇಳೆ ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್ ಅವರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಕಾಮೆಂಟ್ರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಅಗತ್ಯಕ್ಕಿಂತ ಹೆಚ್ಚು ನಕಾರಾತ್ಮಕ ಹೇಳಿಕೆ ನೀಡುತ್ತಿದ್ದರು. ಇದು ಆಟಗಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ರೋಹಿತ್ ಸಭೆಯಲ್ಲಿ ಹೇಳಿದ್ದಾರೆ.
ಸುನಿಲ್ ಗವಾಸ್ಕರ್ ಇಂತಹ ಕಟು ಪದಗಳಲ್ಲಿ ಆಟಗಾರರನ್ನು ಟೀಕಿಸಬಾರದಿತ್ತು. ಕಾಮೆಂಟ್ರಿ ಮಾಡುವವರ ನೇರ ಟೀಕೆಗಳಿಂದ ಆಟಗಾರರ ಮನಸ್ಥಿತಿ ಬದಲಾಗುತ್ತದೆ. ಹೀಗಾಗಿ ಇಂತಹ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರೋಹಿತ್ ಶರ್ಮಾ ಬಿಸಿಸಿಐಗೆ ತಿಳಿಸಿದ್ದಾರೆ.
ಸುನಿಲ್ ಗವಾಸ್ಕರ್ ನಕರಾತ್ಮ ಹೇಳಿಕೆಗಳು:
- ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಸುನಿಲ್ ಗವಾಸ್ಕರ್ ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಆಡಿದ ಹಲವು ಮಾತುಗಳು ಭಾರೀ ಚರ್ಚೆಗೆ ಕಾರಣವಾಗಿತ್ತು. ಅಂತಹ
- ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದ ಕಾರಣ, ಜಸ್ಪ್ರೀತ್ ಬುಮ್ರಾ ಅವರೇ ನಾಯಕರಾಗಿ ಮುಂದುವರೆಯಬೇಕೆಂದು ಸುನಿಲ್ ಗವಾಸ್ಕರ್ ಆಗ್ರಹಿಸಿದ್ದರು.
- ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸೋಲುತ್ತಿದ್ದಂತೆ, ಜಸ್ಪ್ರೀತ್ ಬುಮ್ರಾಗೆ ಕ್ಯಾಪ್ಟನ್ ಪಟ್ಟ ನೀಡುವುದು ಉತ್ತಮ ಎಂದು ಗವಾಸ್ಕರ್ ಬಹಿರಂಗವಾಗಿಯೇ ಹೇಳಿದ್ದರು.
- ರಿಷಭ್ ಪಂತ್ ಪ್ರಯೋಗಾತ್ಮಕ ಹೊಡೆತಗಳಿಗೆ ಪ್ರಯತ್ನಿಸಿ ಔಟಾಗಿದ್ದರೆ, ಮೂರ್ಖ ಎಂದು ಕಟುವಾಗಿ ಟೀಕಿಸಿದ್ದರು.
- ರೋಹಿತ್ ಶರ್ಮಾ ಕಳಪೆ ಬ್ಯಾಟಿಂಗ್ ವೇಳೆ, ಅವರಿಗೆ ಮಗುವಾಗಿದೆ. ಹೀಗಾಗಿ ಪತ್ನಿಯೊಂದಿಗೆ ವಿರಾಮ ತೆಗೆದುಕೊಳ್ಳುವುದು ಉತ್ತಮ ಎಂದಿದ್ದರು.
- ಇನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲ್ಲ. ಸಾಧ್ಯವಾದರೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಪ್ರಯತ್ನಿಸಿ ಎಂಬ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಬಾಬರ್ ಆಝಂ
ಹೀಗೆ ಟೂರ್ನಿಯುದ್ದಕ್ಕೂ ನಾನಾ ಹೇಳಿಕೆಗಳ ಮೂಲಕ ಸುನಿಲ್ ಗವಾಸ್ಕರ್ ಸುದ್ದಿಯಾಗಿದ್ದರು. ಆದರೆ ಇಂತಹ ಹೇಳಿಕೆಗಳು ಟೀಮ್ ಇಂಡಿಯಾ ಆಟಗಾರರ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಗಮನಹರಿಸುವಂತೆ ಇದೀಗ ರೋಹಿತ್ ಶರ್ಮಾ ಬಿಸಿಸಿಐಗೆ ಮನವಿ ಮಾಡಿದೆ.