
ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ, ಹಿರಿಯ ಆಟಗಾರರು ಮತ್ತು ಕೋಚ್ ನಡುವೆ ಕೋಲ್ಡ್ ವಾರ್ ನಡೀತಿದೆ ಎನ್ನುತ್ತಿದ್ದ ವದಂತಿಗಳಿಗೆ ಲಾರ್ಡ್ಸ್ ಮೈದಾನದ ಬಾಲ್ಕನಿಯಿಂದ ಬ್ರೇಕ್ ಬಿದ್ದಿದೆ. ಅನುಭವಿ ದಾಂಡಿಗ ರೋಹಿತ್ ಶರ್ಮಾ ಹಾಗೂ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮುಕ್ತವಾಗಿ ನಗುತ್ತಾ, ಹರಟೆ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಸುದ್ದಿಗೆ ಸಂಪೂರ್ಣ ತೆರೆ ಎಳೆದಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯದಕ್ಕೂ ಮುನ್ನ ರೋಹಿತ್ ಶರ್ಮಾ, ಗೌತಮ್ ಗಂಭೀರ್ ಮತ್ತು ಬ್ಯಾಟಿಂಗ್ ತರಬೇತುದಾರ ಸಿತಾಂಶು ಕೋಟಕ್ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಗುತ್ತಾ ಹರಟೆ ಹೊಡೆಯುತ್ತಿರುವ ದೃಶ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಸೆರೆ ಹಿಡಿದಿದೆ. ಇದರೊಂದಿಗೆ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ.
ರೋಹಿತ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ದೊಡ್ಡ ಸ್ಕೋರ್ ಗಳಿಸಲು ಪರದಾಡುತ್ತಿದ್ದರೂ, ಗೌತಮ್ ಗಂಭೀರ್ ಅವರು ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡುವಂತೆ ನಾಯಕನಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನು ಇಬ್ಬರ ನಡುವಿನ ಸಂಬಂಧ ಹಳಸಿದೆ ಎಂಬ ಮಾಧ್ಯಮಗಳ ಊಹಾಪೋಹಗಳು ಕೇವಲ ವದಂತಿ ಎಂಬುದನ್ನು ಈ ದೃಶ್ಯ ಸಾಬೀತುಪಡಿಸಿದೆ.
ಲಾರ್ಡ್ಸ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯವೇ 39 ವರ್ಷದ ರೋಹಿತ್ ಶರ್ಮಾ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಮತ್ತು 2027ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಮಣೆ ಹಾಕಲು ಆಯ್ಕೆಗಾರರು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ರೋಹಿತ್ ಶರ್ಮಾ ನಿವೃತ್ತಿ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅವರು ತಂಡದ ಅವಿಭಾಜ್ಯ ಅಂಗವಾಗಿದ್ದು, ಏಕದಿನ ಮಾದರಿಯಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮೆಸ್ಸಿಯ ಸಾರ್ವಕಾಲಿಕ ವಿಶ್ವ ದಾಖಲೆ ಮುರಿದ ಎಂಬಾಪೆ!
ಒಟ್ಟಾರೆ, ಲಾರ್ಡ್ಸ್ ಬಾಲ್ಕನಿಯ ಈ ಒಂದೇ ಒಂದು ದೃಶ್ಯ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ನೆಮ್ಮದಿ ತಂದಿದೆ. ನಾಯಕ ಮತ್ತು ಕೋಚ್ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂಬುದು ಸಾಬೀತಾಗಿದ್ದು, ಇವರಿಬ್ಬರ ಜುಗಲ್ಬಂದಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲಿ ಎಂಬುದೇ ಸದ್ಯದ ನಿರೀಕ್ಷೆ.