IND vs SL T20: ಸರಣಿ ಗೆದ್ದ ಬಳಿಕ ರೋಹಿತ್ ಶರ್ಮಾ ಟ್ರೋಫಿ ನೀಡಿದ್ದು ಯಾರ ಕೈಗೆ ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ
Rohit Sharma hands over trophy to Jaydev Shah: ಶ್ರೀಲಂಕಾ ವಿರುದ್ಧದ ಮೂರನೇ ಟಿ20ಯಲ್ಲೂ ಭಾರತ ಗೆದ್ದು ಸರಣಿ ವೈಟ್ವಾಷ್ ಮಾಡಿದ ಬಳಿಕ ರೋಹಿತ್ ಶರ್ಮಾ ಟ್ರೋಫಿ ಎತ್ತಿ ಹಿಡಿಯಲು ವಿಶೇಷ ವ್ಯಕ್ತಿಯೊಬ್ಬರನ್ನು ಕರೆತಂದರು. ಇದೀಗ ಅವರು ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ಅಂದುಕೊಂಡಂತೆ ಭಾರತ ಕ್ರಿಕೆಟ್ ತಂಡ (Indian Cricket Team) ಅಂತಿಮ ಮೂರನೇ ಟಿ20 ಪಂದ್ಯದಲ್ಲೂ ಪ್ರವಾಸಿ ಶ್ರೀಲಂಕಾವನ್ನು ಸೋಲಿಸಿ ಸರಣಿ ಕ್ಲೀನ್ಸ್ವೀಪ್ ಮಾಡಿದ ಸಾಧನೆ ಗೈದಿದೆ. ಸರಣಿಯುದ್ದಕ್ಕೂ ಅಬ್ಬರಿಸಿದ ರೋಹಿತ್ ಶರ್ಮಾ (Rohit Sharma) ಪಡೆ ಮೊದಲ ಟಿ20ಯಲ್ಲಿ 62 ರನ್ಗಳ ಭರ್ಜರಿ ಜಯ ಸಾಧಿಸಿದರೆ, ಎರಡನೇ ಮತ್ತು ಮೂರನೇ ಪಂದ್ಯದಲ್ಲಿ ಕ್ರಮವಾಗಿ 7 ಮತ್ತು 6 ವಿಕೆಟ್ಗಳಿಂದ ಗೆದ್ದು ಬೀಗಿತು. ಈ ಸರಣಿಯಿಂದ ಭಾರತ ತಂಡದಲ್ಲಿ ಹೊಸ ಕ್ರಾಂತಿ ಶುರುವಾಗುವುದು ಖಚಿತ. ಪ್ರಮುಖ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲೇ ರೋಹಿತ್ ಪಡೆ ದೊಡ್ಡ ಮಟ್ಟಿನ ಯಶಸ್ಸು ಸಾಧಿಸಿತು. ಅಲ್ಲದೆ ಕಳೆದ ಕೆಲ ವರ್ಷಗಳಿಂದ ಮಧ್ಯಮ ಕ್ರಮಾಂಕದಲ್ಲಿ ಬೆಂಬಿಡದೆ ಕಾಡುತ್ತಿದ್ದ ಪ್ರಶ್ನೆಗೂ ಉತ್ತರ ಸಿಕ್ಕಂತಿದೆ. ಈ ಗೆಲುವಿನೊಂದಿಗೆ ವಿಶ್ವದಾಖಲೆ ಬರೆದ ಟೀಮ್ ಇಂಡಿಯಾ ಸತತ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದು ಅಫಘಾನಿಸ್ತಾನ ತಂಡದ ದಾಖಲೆ ಸರಿಗಟ್ಟಿದೆ. ಜೊತೆಗೆ ತಾಯ್ನಾಡಿನಲ್ಲಿ ಸತತ ಮೂರನೇ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ (Cleansweep) ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಂದ್ಯ ಮುಗಿದ ಬಳಿಕ ವಿಶೇಷ ಘಟನೆಯೊಂದು ನಡೆಯಿತು. ನಾಯಕ ರೋಹಿತ್ ಶರ್ಮಾ ಪಂದ್ಯದ ಬಗ್ಗೆ ಮತ್ತು ಆಟಗಾರರ ಪ್ರದರ್ಶನದ ಬಗ್ಗೆ ಮಾತನಾಡಿದ ಬಳಿಕ ಸರಣಿ ಗೆದ್ದ ಟ್ರೋಫಿಯನ್ನು ಅವರ ಕೈಗೆ ವಿತರಿಸಲಾಯಿತು. ನಂತರ ಟೀಮ್ ಇಂಡಿಯಾದ ಎಲ್ಲ ಆಟಗಾರರು ಮೈದಾನದಲ್ಲಿ ಟ್ರೋಫಿ ಜೊತೆ ಫೋಟೋಕ್ಕೆ ಪೋಸ್ ಕೊಡುವುದು ವಾಡಿಕೆ. ಆದರೆ, ಈ ಬಾರಿ ಹಾಗಾಗಲಿಲ್ಲ. ರೋಹಿತ್ ಅವರು ಟ್ರೋಫಿಯನ್ನು ಎತ್ತಿ ಹಿಡಿಯಲು ವಿಶೇಷ ವ್ಯಕ್ತಿಯೊಬ್ಬರನ್ನು ಕರೆತಂದರು. ಇದೀಗ ಅವರು ಯಾರು? ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ರೋಹಿತ್ ಶರ್ಮಾ ಟ್ರೋಫಿ ಪಡೆದುಕೊಂಡ ಬಳಿಕ ಅವರು ಅದನ್ನು ಜಯದೇವ್ ಶಾ ಅವರ ಕೈಗೆ ನೀಡಿದರು. ಇವರು ಈ ಮೂರು ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐಯ ಪ್ರತಿನಿಧಿಯಾಗಿದ್ದಾರೆ. ಅಲ್ಲದೆ ಇವರು ಸೌರಾಷ್ಟ್ರ ಕ್ರಿಕೆಟ್ ತಂಡದ ಮಾಜಿ ನಾಯಕನಾಗಿದ್ದು, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 120 ಪಂದ್ಯಗಳನ್ನ ಆಡಿ 5354 ರನ್ ಕಲೆಹಾಕಿದ್ದಾರೆ. ಹಾಗೆಯೆ ಇವರು ಬಿಸಿಸಿಐ ಮಾಜಿ ಕಾರ್ಯದರ್ಶಿ ಮತ್ತು ಕ್ರಿಕೆಟಿಗ ನಿರಂಜನ್ ಶಾ ಅವರ ಮಗ. ಜಯದೇವ್ ಅವರು ಪ್ರಸ್ತುತ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿದ್ದಾರೆ.
ಮೂರನೇ ಟಿ20 ಪಂದ್ಯ ಮುಗಿದ ಬಳಿಕ ರೋಹಿತ್ ಇವರನ್ನು ಆಹ್ವಾನಿಸಿ ಟ್ರೋಫಿಯನ್ನು ನೀಡಿದರು. ಜಯದೇವ್ ಇದೆಲ್ಲ ಅಗತ್ಯವಿಲ್ಲ ಎಂಬಂತೆ ನಗುಮುಖದಲ್ಲಿ ಹಿಂದೆ ಸರಿದರೂ, ರೋಹಿತ್ ಪಟ್ಟುಬಿಡದೆ ಟೀಮ್ ಇಂಡಿಯಾ ಆಟಗಾರರ ಜೊತೆ ಇವರನ್ನು ಸೇರಿಸಿ ಟ್ರೋಫಿ ಜೊತೆ ಫೋಟೋಕ್ಕೆ ಪೋಸ್ ಕೊಟ್ಟರು. ಸದ್ಯ ಈ ಫೋಟೋ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
— Addicric (@addicric) February 27, 2022
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಾಯಕ ದಸುನ್ ಶನಕ 38 ಎಸೆತಗಳಲ್ಲಿ ಅಜೇಯ 74 ರನ್ ಬಾರಿಸುವುದರ ಮೂಲಕ ತಂಡದ ಮೊತ್ತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ತಲುಪಿತು. ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 18 ರನ್ ಗಳಿಸಿ ಔಟ್ ಆದರೆ, ನಾಯಕ ರೋಹಿತ್ ಶರ್ಮಾ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ 21 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ 45 ಎಸೆತಗಳಿಗೆ ಅಜೇಯ 73 ರನ್ ಬಾರಿಸುವುದರ ಮೂಲಕ ಸತತ ಮೂರನೇ ಅರ್ಧಶತಕವನ್ನು ಚಚ್ಚಿದರು. ರವೀಂದ್ರ ಜಡೇಜಾ ಅಜೇಯ 22 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 16.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಗೆಲುವಿನ ನಗೆಬೀರಿತು.
Rohit Sharma: ವೈಟ್ವಾಷ್ ಖುಷಿಯಲ್ಲಿ ರೋಹಿತ್ ಶರ್ಮಾರಿಂದ ನಾಯಕನ ಮಾತು: ಏನಂದ್ರು ಕೇಳಿ
IND vs SL 3rd T20: ಸತತ 12ನೇ ಟಿ20 ಪಂದ್ಯ ಗೆದ್ದು ಬೀಗಿದ ಭಾರತ: ನಾಯಕ ರೋಹಿತ್ರಿಂದ ದಾಖಲೆ ಮೇಲೆ ದಾಖಲೆ