ಏನು ಮಾಡ್ತಿದ್ದೀರಾ? ರೋಹಿತ್ ಶರ್ಮಾ ಮುಖದಲ್ಲಿ ಹತಾಶೆ, ನೋವು, ನಿರಾಸೆ!

IPL 2026 Chennai Super Kings vs Mumbai Indians: ಐಪಿಎಲ್​ನ 44ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 159 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 18.1 ಓವರ್​ಗಳಲ್ಲಿ 160 ರನ್ ಕಲೆಹಾಕಿದೆ. ಈ ಮೂಲಕ ಸಿಎಸ್​ಕೆ ತಂಡ 8 ವಿಕೆಟ್​ಗಳ ಜಯ ಸಾಧಿಸಿದೆ.

ಏನು ಮಾಡ್ತಿದ್ದೀರಾ? ರೋಹಿತ್ ಶರ್ಮಾ ಮುಖದಲ್ಲಿ ಹತಾಶೆ, ನೋವು, ನಿರಾಸೆ!
Rohit Sharma

Updated on: May 03, 2026 | 9:25 AM

ಐಪಿಎಲ್ 2026ರ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ (MI) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಹಣಾಹಣಿಯು ಅಭಿಮಾನಿಗಳಿಗೆ ಕೇವಲ ಆಟದ ರೋಮಾಂಚನವನ್ನಷ್ಟೇ ನೀಡಲಿಲ್ಲ, ಬದಲಿಗೆ ಒಂದು ಭಾವನಾತ್ಮಕ ಕ್ಷಣಕ್ಕೂ ಸಾಕ್ಷಿಯಾಯಿತು. ಮೇ 2ರಂದು ನಡೆದ ಈ ಪಂದ್ಯದಲ್ಲಿ ಮುಂಬೈ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಡಗೌಟ್‌ನಲ್ಲಿ ಅತ್ಯಂತ ನಿರಾಶೆ ಮತ್ತು ಅಸಮಾಧಾನದಿಂದ ಕುಳಿತಿದ್ದ ದೃಶ್ಯಗಳು ಈಗ ಕ್ರೀಡಾ ಲೋಕದಲ್ಲಿ ಚರ್ಚೆಗೆ ಕಾರಣವಾಗಿವೆ.

ಈ ಪಂದ್ಯದ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ತೆಗೆದುಕೊಳ್ಳುತ್ತಿದ್ದ ಕೆಲ ನಿರ್ಧಾರಗಳಿಂದ, ಪ್ರಮುಖವಾಗಿ ಬೌಲಿಂಗ್ ಬದಲಾವಣೆಗಳ ವೇಳೆ ರೋಹಿತ್ ಶರ್ಮಾ ಡಗೌಟ್​ನಲ್ಲಿ ನಿರಾಸೆ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಅಲ್ಲದೆ ತಂಡದ ಒಟ್ಟಾರೆ ಪ್ರದರ್ಶನವನ್ನು ನೋಡಿ ಹತಾಶರಾಗಿ ಕೂತಿದ್ದರು. ಇದೀಗ ಹಿಟ್​ಮ್ಯಾನ್ ಅವರ ಈ ಭಾವನಾತ್ಮಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2024ರಲ್ಲೇ ನಿರಾಸೆ ವ್ಯಕ್ತಪಡಿಸಿದ್ದ ಹಿಟ್​ಮ್ಯಾನ್!

ಐಪಿಎಲ್ 2024ರ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸಹಾಯಕ ಕೋಚ್ ಅಭಿಷೇಕ್ ನಾಯರ್ ನಡುವಿನ ಖಾಸಗಿ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಈ ವಿಡಿಯೋದಲ್ಲಿ ರೋಹಿತ್ ಶರ್ಮಾ, ಒಂದೊಂದಾಗಿ ಎಲ್ಲವೂ ಬದಲಾಗುತ್ತಿದೆ… ಅದು ಅವರ ಇಷ್ಟ, ನಾನದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿದ ನಂತರ ತಂಡದಲ್ಲಿ ಆದ ಬದಲಾವಣೆಗಳ ಬಗ್ಗೆ ಅವರು ಈ ಮಾತು ಹೇಳಿರಬಹುದು ಎಂದು ವಿಶ್ಲೇಷಿಸಲಾಗಿತ್ತು.

ಅಷ್ಟೇ ಅಲ್ಲದೆ ಇದೇ ವೇಳೆ  ಮುಂಬೈ ಇಂಡಿಯನ್ಸ್ ತಂಡದೊಂದಿಗಿನ ತಮ್ಮ ದಶಕದ ಸುದೀರ್ಘ ಸಂಬಂಧವನ್ನು ಸ್ಮರಿಸಿದ ರೋಹಿತ್, “ಏನೇ ಆದರೂ ಇದು ನನ್ನ ಮನೆ. ಈ ತಂಡವನ್ನು ಕಟ್ಟಿದ್ದು ನಾನು” ಎಂದು ಭಾವುಕರಾಗಿ ನುಡಿದಿದ್ದರು. ಇದೀಗ ಅದೇ ತಂಡದ ಕುಸಿತವನ್ನು ರೋಹಿತ್ ಶರ್ಮಾ ಕಣ್ಣಾರೆ ಕಾಣುತ್ತಿದ್ದಾರೆ. ಇದಕ್ಕೆ ಸಾಕ್ಷಿ ಸಿಎಸ್​ಕೆ ವಿರುದ್ಧದ ಪಂದ್ಯದ ವೇಳೆ ಹಿಟ್​ಮ್ಯಾನ್ ಮುಖದಲ್ಲಿ ಕಾಣಿಸಿಕೊಂಡ ಹಾವಭಾವ.

ರೋಹಿತ್ ಶರ್ಮಾ ಬೇಸರಕ್ಕೆ ಕಾರಣವೇನು?

  • ಗಾಯದ ಸಮಸ್ಯೆ ಮತ್ತು ಅಸಹಾಯಕತೆ: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ರೋಹಿತ್, ಈ ಮಹತ್ವದ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು. ತಮ್ಮ ನೆಚ್ಚಿನ ತಂಡ ಸಂಕಷ್ಟದಲ್ಲಿರುವಾಗ ಮೈದಾನಕ್ಕಿಳಿದು ನೆರವಾಗಲು ಸಾಧ್ಯವಾಗದ ಅಸಹಾಯಕತೆ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
  • ತಂಡದ ಕಳಪೆ ಪ್ರದರ್ಶನ: ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 159 ರನ್‌ಗಳಿಗೆ ಸೀಮಿತವಾಯಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸಿಎಸ್‌ಕೆ, ತುತುರಾಜ್ ಗಾಯಕ್ವಾಡ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ತನ್ನ ತಂಡದ ಸತತ ಸೋಲು ರೋಹಿತ್ ಅವರ ಬೇಸರಕ್ಕೆ ಮುಖ್ಯ ಕಾರಣವಾಗಿತ್ತು.
  • ಅಂಕಪಟ್ಟಿಯಲ್ಲಿ ಕುಸಿತ: ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು. 9 ಪಂದ್ಯಗಳಲ್ಲಿ ಕೇವಲ ಎರಡು ಜಯ ದಾಖಲಿಸಿರುವ ಮುಂಬೈ ತಂಡಕ್ಕೆ ಪ್ಲೇ-ಆಫ್ ಹಾದಿ ಬಹುತೇಕ ಮುಚ್ಚಿಹೋಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಅವರ ಈ ಫೋಟೋಗಳು ವೈರಲ್ ಆಗಿದ್ದು, “ಮುಂಬೈ ಸಾಮ್ರಾಜ್ಯವನ್ನು ಕಟ್ಟಿದ ವ್ಯಕ್ತಿ ಇಂದು ಅಸಹಾಯಕನಾಗಿ ಕುಳಿತಿದ್ದಾರೆ” ಎಂದು ಅಭಿಮಾನಿಗಳು ಮರುಗುತ್ತಿದ್ದಾರೆ. ಅನೇಕರು ಇದನ್ನು ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಶರ್ಮಾ ಅವರ ಶಕೆಯ ಅಂತ್ಯ ಎಂದು ಬಣ್ಣಿಸುತ್ತಿದ್ದಾರೆ.

ಇದನ್ನೂ ಓದಿ: IPL 2026: ಐಪಿಎಲ್​ ಅಂಗಳದಲ್ಲಿ CSK ಯುವ ದಾಂಡಿಗನ ಗನ್ ಸೆಲೆಬ್ರೇಷನ್!

ಒಟ್ಟಾರೆಯಾಗಿ, ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಮುಂಬೈ ಇಂಡಿಯನ್ಸ್​ ಅಭಿಮಾನಿಗಳಿಗೆ ಕೇವಲ ಸೋಲನ್ನಷ್ಟೇ ಅಲ್ಲದೆ, ತಮ್ಮ ನೆಚ್ಚಿನ ಆಟಗಾರನ ಕಣ್ಣಲ್ಲಿನ ನೋವನ್ನೂ ಉಣಬಡಿಸಿತು ಎಂದರೆ ತಪ್ಪಾಗಲಾರದು.

 

 

Follow Us