
ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ (Rohit Sharma) ತಮ್ಮ ನಿವೃತ್ತಿ ಕೇಳುತ್ತಿದ್ದವರಿಗೆ ಬ್ಯಾಟ್ನಿಂದಲೇ ಉತ್ತರ ನೀಡಿದ್ದಾರೆ. ಆದಾಗ್ಯೂ ಏಕದಿನ ತಂಡದಲ್ಲಿ ರೋಹಿತ್ ಅವರ ಸ್ಥಾನ ಇನ್ನು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಪ್ರತಿ ಸರಣಿಯ ಕೊನೆಯ ಪಂದ್ಯದಲ್ಲಿ ಮಿಂಚುವ ರೋಹಿತ್ ಉಳಿದ ಪಂದ್ಯಗಳಲ್ಲಿ ಸಪ್ಪೆ ಪ್ರದರ್ಶನ ನೀಡುತ್ತಾರೆ. ಹೀಗಾಗಿ ಕೊನೆಯ ಪಂದ್ಯದಲ್ಲಿ ಒಂದೊಳ್ಳೆ ಇನ್ನಿಂಗ್ಸ್ ಆಡಿ ಮುಂದಿನ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂಬ ಆರೋಪವೂ ರೋಹಿತ್ ಮೇಲೆ ಇದೆ. ಇದೆಲ್ಲದರ ನಡುವೆ ಲಾರ್ಡ್ಸ್‌ನಲ್ಲಿ (Lord’s) ಕೊನೆಯ ಏಕದಿನ ಪಂದ್ಯ ಮುಗಿದ ಬಳಿಕ ತಮ್ಮ ನಿವೃತ್ತಿ ವದಂತಿಯ ಬಗ್ಗೆ ಮಾತನಾಡಿದ ರೋಹಿತ್ ತಮ್ಮನ್ನು ಟೀಕಿಸುವವರಿಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ.
ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 138 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ರೋಹಿತ್ ಶರ್ಮಾ, ಪಂದ್ಯದ ನಂತರ ಬಿಸಿಸಿಐ ಟಿವಿಯೊಂದಿಗಿನ ಸಂಭಾಷಣೆಯಲ್ಲಿ, ಹೊರಗಿನ ಚರ್ಚೆಗಳು ತಮ್ಮ ಆಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ‘ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಈ ರೀತಿಯ ಟೀಕೆಗಳು ಕೇಳಿಬರುತ್ತಲೇ ಇವೆ. ನಾನು ಆಡುವುದನ್ನು ನಿಲ್ಲಿಸುವವರೆಗೂ ಈ ರೀತಿಯ ಟೀಕೆಗಳು ಹರಿದುಬರುವುದು ಮುಂದುವರಿಯುತ್ತದೆ. ಹೀಗಾಗಿ ನನಗೆ ಈ ರೀತಿಯ ಟೀಕೆಗಳು ಮತ್ತು ವದಂತಿಗಳು ಮುಖ್ಯವಲ್ಲ. ನನಗೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ನಾನು ಮೈದಾನದಲ್ಲಿ ಏನು ಮಾಡುತ್ತೇನೆ ಮತ್ತು ತಂಡದ ಯಶಸ್ಸಿಗೆ ನಾನು ಎಷ್ಟು ಕೊಡುಗೆ ನೀಡುತ್ತೇನೆ ಎಂಬುದು.
ಅಷ್ಟಕ್ಕೂ ಈ ರೀತಿಯ ವದಂತಿಗಳು ಇಲ್ಲದಿದ್ದರೆ ಯಾವುದೇ ಮೋಜು ಇರುವುದಿಲ್ಲ. ದೇಶಕ್ಕಾಗಿ ಆಡುವುದು ಮತ್ತು ರನ್ ಗಳಿಸುವುದು ಯಾವಾಗಲೂ ನನ್ನ ಗುರಿಯಾಗಿದೆ. ನನ್ನ ಕೆಲಸ ಬ್ಯಾಟಿಂಗ್‌ನಲ್ಲಿ ಪ್ರದರ್ಶನ ನೀಡುವುದು ಮತ್ತು ದೇಶವನ್ನು ಪ್ರತಿನಿಧಿಸುವುದು. ನನ್ನ ಚೊಚ್ಚಲ ಪಂದ್ಯದಿಂದಲೂ ನಾನು ಹೊಂದಿರುವ ಜವಾಬ್ದಾರಿ ಅದು, ಮತ್ತು ನಾನು ಅದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
IND vs ENG: ಬಾಲ್ಯದ ಗೆಳೆಯ ನೀಡಿದ ಬ್ಯಾಟ್ನಿಂದ ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ರೋಹಿತ್
ಇನ್ನು ತಂಡದ ಸರಣಿ ಸೋಲಿನ ಬಗ್ಗೆ ಮಾತನಾಡಿದ ರೋಹಿತ್, ‘ಈ ಸೋಲಿನಿಂದಾಗಿ ಇಡೀ ತಂಡಕ್ಕೆ ಬೇಸರವಾಗಿದೆ. ನಾವು ಬರ್ಮಿಂಗ್ಹ್ಯಾಮ್‌ನಲ್ಲಿ ಉತ್ತಮವಾಗಿ ಪ್ರಾರಂಭಿಸಿದೆವು ಮತ್ತು ಉತ್ತಮ ಕ್ರಿಕೆಟ್ ಆಡಿದೆವು. ಆದರೆ ಕಾರ್ಡಿಫ್‌ನಲ್ಲಿ, ನಾವು ಬ್ಯಾಟಿಂಗ್‌ನಲ್ಲಿ ಸಾಕಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಇತ್ತ ಲಾರ್ಡ್ಸ್‌ನಲ್ಲಿ ಗುರಿ ಸಾಕಷ್ಟು ದೊಡ್ಡದಾಗಿತ್ತು. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು ಆದರೆ 20-25 ರನ್‌ಗಳ ಅಂತರದಲ್ಲಿ ಸೋತಿದ್ದೇವೆ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Mon, 20 July 26