ಕೆಎಲ್ ರಾಹುಲ್​ಗೆ ಬೆಂಬಲ: ರೋಹಿತ್ ಶರ್ಮಾ ಸುದ್ದಿಗೋಷ್ಠಿಯ ಮುಖ್ಯಾಂಶಗಳು

| Updated By: ಝಾಹಿರ್ ಯೂಸುಫ್

Updated on: Sep 17, 2024 | 2:58 PM

India vs Bangladesh Test: ಭಾರತ-ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಕೆಎಲ್ ರಾಹುಲ್​ಗೆ ಬೆಂಬಲ: ರೋಹಿತ್ ಶರ್ಮಾ ಸುದ್ದಿಗೋಷ್ಠಿಯ ಮುಖ್ಯಾಂಶಗಳು
Rohit Sharma - KL Rahul
Follow us on

ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರಗಳ ನಡುವೆ ಬಾಂಗ್ಲಾದೇಶ್ ವಿರುದ್ಧದ ಸರಣಿಯನ್ನು ನಾವು ಹಗುರವಾಗಿ ಪರಿಗಣಿಸುತ್ತಿಲ್ಲ ಎಂದು ಒತ್ತಿ ಹೇಳಿದ್ದಾರೆ. ಈ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಈ ಕೆಳಗಿನಂತಿವೆ…

  • ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿ ನಮಗೆ ರಿಹರ್ಸಲ್ ಸರಣಿಯಲ್ಲ ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಟೀಮ್ ಇಂಡಿಯಾಗೆ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದೆ. ಪ್ರತಿ ಸರಣಿ ಮತ್ತು ಪಂದ್ಯವನ್ನು ಗೆಲ್ಲಲು ಬಯಸುತ್ತದೆ ಎಂದು ಟೀಮ್ ಇಂಡಿಯಾ ನಾಯಕ ಸ್ಪಷ್ಟಪಡಿಸಿದ್ದಾರೆ.
  • ನಾನು ದೇಶಕ್ಕಾಗಿ ಪಂದ್ಯಗಳನ್ನು ಆಡುತ್ತೇನೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಂಕಗಳನ್ನು ಗಳಿಸಲು ಬಯಸುತ್ತೇನೆ. ಹೀಗಾಗಿ ನಾವು ಯಾವುದೇ ಪಂದ್ಯವನ್ನು ಅಥವಾ ಸರಣಿಯನ್ನು ಹಗುರವಾಗಿ ಕಾಣುತ್ತಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
  • ಈ ಸರಣಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಅವರ ಆಯ್ಕೆಯನ್ನು ರೋಹಿತ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ದೀರ್ಘ ಕಾಲದಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದು, ವಿದೇಶಗಳಲ್ಲಿ ಅತ್ಯುತ್ತಮ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಅವರು ಅತ್ಯುತ್ತಮ ಗುಣಮಟ್ಟದ ಬ್ಯಾಟ್ಸ್‌ಮನ್ ಮತ್ತು ಅದ್ಭುತ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ರೋಹಿತ್ ಸ್ಪಷ್ಟಪಡಿಸಿದ್ದಾರೆ.
  • ರಾಹುಲ್ ಪುನರಾಗಮನ ಮಾಡಿದ ನಂತರ ಅವರು ಸೌತ್ ಆಫ್ರಿಕಾದಲ್ಲಿ ಶತಕ ಬಾರಿಸಿದ್ದಾರೆ. ಹೈದರಾಬಾದ್‌ನಲ್ಲಿ ಅವರು 80 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಇದಾದ ಬಳಿಕ ಅವರು ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಅದರರ್ಥ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದಲ್ಲ. ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
  • ಇದೇ ವೇಳೆ ರೋಹಿತ್ ಶರ್ಮಾ ಯುವ ಆಟಗಾರರನ್ನು ಹೊಗಳಿದ್ದಾರೆ. ಟೀಮ್ ಇಂಡಿಯಾ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಸರ್ಫರಾಝ್ ಖಾನ್ ಮತ್ತು ಧ್ರುವ್ ಜುರೆಲ್ ಅವರನ್ನು ಪಕ್ವಗೊಳಿಸಬೇಕಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದು, ಸರ್ಫರಾಝ್ ಮತ್ತು ಜುರೆಲ್ ಕೂಡ ನಿರ್ಭೀತ ಆಟ ಪ್ರದರ್ಶಿಸಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  • ಚೆನ್ನೈನಲ್ಲಿ ನಡೆದ ಅಭ್ಯಾಸದಲ್ಲಿ ಉತ್ತಮ ತಯಾರಿ ನಡೆಸಲಾಗಿದೆ ಎಂದಿರುವ ರೋಹಿತ್ ಶರ್ಮಾ, ಈ ಮೂಲಕ ದೀರ್ಘಾವಧಿಯ ಬಳಿಕ ಟೆಸ್ಟ್ ಆಡಲು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ್ ಸರಣಿ ಯಾವಾಗ ಶುರು?

ಭಾರತ-ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಗುರುವಾರ, 19 ಸೆಪ್ಟೆಂಬರ್ 2024 9:30 AM ಚೆನ್ನೈ
2ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಶುಕ್ರವಾರ, 27 ಸೆಪ್ಟೆಂಬರ್ 2024 9:30 AM ಕಾನ್ಪುರ
1ನೇ ಟಿ20, ಭಾರತ vs ಬಾಂಗ್ಲಾದೇಶ ಸೋಮವಾರ, 7 ಅಕ್ಟೋಬರ್ 2024 7 PM ಗ್ವಾಲಿಯರ್
2ನೇ ಟಿ20, ಭಾರತ vs ಬಾಂಗ್ಲಾದೇಶ ಗುರುವಾರ, 10 ಅಕ್ಟೋಬರ್ 2024 7 PM ದೆಹಲಿ
3ನೇ ಟಿ20, ಭಾರತ vs ಬಾಂಗ್ಲಾದೇಶ ಭಾನುವಾರ, 13 ಅಕ್ಟೋಬರ್ 2024 7 PM ಹೈದರಾಬಾದ್