
ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್‌ನಂತೆಯೇ, ಹಾಸ್ಯಪ್ರಜ್ಞೆ ಮತ್ತು ನೇರನುಡಿಗೂ ಹೆಸರುವಾಸಿ. ಇದೀಗ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ತಮ್ಮ ಹೊಸ ಶೋ ‘ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ’ ಕಾರ್ಯಕ್ರಮದಲ್ಲಿ ಯುವ ನಾಯಕ ಶುಭಮನ್ ಗಿಲ್ ಅವರ ಮದುವೆಯ ಕುರಿತು ಹಿಟ್‌ಮ್ಯಾನ್ ಆಡಿರುವ ತಮಾಷೆಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.
2027ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ತರಲು ಬೇಕಿದ್ದರೆ ತಾನೇ ಮುಂದೆ ನಿಂತು ಶುಭಮನ್ ಗಿಲ್‌ಗೆ ಮದುವೆ ಮಾಡಿಸಲು ಸಿದ್ಧ ಎಂದು ರೋಹಿತ್ ಶರ್ಮಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಈ ವಿಶೇಷ ಸಂಚಿಕೆಯಲ್ಲಿ ಖ್ಯಾತ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಕಾಶ್ ಗುಪ್ತಾ ಮತ್ತು ಶಾದಿ.ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಡುವೆ ಆಕಾಶ್ ಗುಪ್ತಾ ಅವರು ಅನುಪಮ್ ಮಿತ್ತಲ್ ಮುಂದೆ ಒಂದು ವಿಚಿತ್ರ ಹಾಗೂ ತಮಾಷೆಯ ಸಿದ್ಧಾಂತವನ್ನು ಮುಂದಿಟ್ಟರು.
“ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ, ಯಾವ ತಂಡದ ನಾಯಕ ಮದುವೆಯಾಗುತ್ತಾರೋ, ಮರುವರ್ಷ ಆ ತಂಡ ವಿಶ್ವಕಪ್ ಗೆಲ್ಲುತ್ತದೆ” ಎಂದು ಆಕಾಶ್ ವಾದಿಸಿದರು. ಇದಕ್ಕೆ ಉದಾಹರಣೆಯಾಗಿ, ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮದುವೆಯಾದ ನಂತರ 2023ರ ವಿಶ್ವಕಪ್ ಗೆದ್ದಿದ್ದನ್ನು ಅವರು ನೆನಪಿಸಿದರು.
ಆಕಾಶ್ ಅವರ ಈ ಮಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಅನುಪಮ್ ಮಿತ್ತಲ್, “ನಮ್ಮ ಶಾದಿ.ಕಾಮ್ ತಂಡ ಈಗಾಗಲೇ ಭಾರತದ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರ ಪ್ರೊಫೈಲ್ ಸಿದ್ಧಪಡಿಸಿ ಅವರಿಗೆ ಪ್ರಪೋಸಲ್ ಕಳುಹಿಸಿದೆ. ಅವರು ಕೇವಲ ‘ರೈಟ್ ಸ್ವೈಪ್’ ಮಾಡಬೇಕಷ್ಟೇ, ಆದರೆ ಗಿಲ್ ಸದ್ಯಕ್ಕೆ ಮದುವೆಯಾಗಲು ನಿರಾಕರಿಸಿದ್ದಾರೆ” ಎಂದು ನಗೆಚಟಾಕಿ ಹಾರಿಸಿದರು.
ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದ ನಿರೂಪಕ ರೋಹಿತ್ ಶರ್ಮಾ, ತಮ್ಮದೇ ಶೈಲಿಯಲ್ಲಿ ಮಧ್ಯಪ್ರವೇಶಿಸಿ, “ಇಲ್ಲಾ, ವಿಶ್ವಕಪ್ ಗೆಲ್ಲಲು ನಾನು ಏನು ಬೇಕಾದರೂ ಮಾಡಲು ಸಿದ್ಧ. ನಾನೇ ಮುಂದೆ ನಿಂತು ಶುಭ್ಮನ್ ಗಿಲ್ ಮಾಡಿಸುತ್ತೇನೆ” ಎಂದು ಹೇಳುವ ಮೂಲಕ ಇಡೀ ವೇದಿಕೆಯನ್ನು ನಗೆಗಡಲಲ್ಲಿ ತೇಲಿಸಿದರು.
2 ಬಾರಿ ಟಿ20 ವಿಶ್ವಕಪ್ ಗೆದ್ದಿರುವ ರೋಹಿತ್ ಶರ್ಮಾಗೆ ಏಕದಿನ ವಿಶ್ವಕಪ್ ಎಂಬುದು ಬಹುದೊಡ್ಡ ಕನಸು. 2023ರ ಫೈನಲ್‌ನಲ್ಲಿ ಸ್ವಲ್ಪದರಲ್ಲೇ ಕೈತಪ್ಪಿದ್ದ ಆ ಟ್ರೋಫಿಯನ್ನು ಈ ಬಾರಿಯಾದರೂ ಎತ್ತ ಹಿಡಿಯಬೇಕೆಂಬ ಹಂಬಲ ಅವರಲ್ಲಿದೆ. ಇದೇ ಕಾರಣಕ್ಕೆ, 2027ರ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲಿರುವ ಯುವ ನಾಯಕ ಶುಭ್ಮನ್ ಗಿಲ್‌ಗೆ ಸಂಪೂರ್ಣ ಬೆಂಬಲ ನೀಡುವುದರ ಜೊತೆಗೆ, ಕಪ್ ಗೆಲ್ಲಲು ಬೇಕಿದ್ದರೆ ತಾನೇ ಮುಂದೆ ನಿಂತು ಗಿಲ್‌ಗೆ ಮದುವೆ ಮಾಡಿಸಲೂ ಸಿದ್ಧ ಎಂದು ರೋಹಿತ್ ತಮಾಷೆಯಾಗಿ ತಮ್ಮ ಮನದಾಸೆಯನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: ICCಗೆ ಸೆಡ್ಡು ಹೊಡೆಯುತ್ತಾ IPL?
2027ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಶುಭ್ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಉತ್ತರಾಧಿಕಾರಿ ಗಿಲ್ ಮತ್ತು ವಿಶ್ವಕಪ್ ಕುರಿತು ರೋಹಿತ್ ತೋರಿದ ಈ ಪ್ರೀತಿ ಹಾಗೂ ಹಾಸ್ಯಪ್ರಜ್ಞೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಈ ವಿಡಿಯೋ ತುಣುಕು ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಗಿಲ್ ಕಾಲೆಳೆಯುತ್ತಾ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.