‘ಇದು ರೋಹಿತ್ ಶರ್ಮಾರ ಕೊನೆಯ ಟೆಸ್ಟ್ ಸರಣಿಯಾಗಬಹುದು’; ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ

Rohit Sharma's Future in Test Cricket: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ನಂತರ ರೋಹಿತ್ ಶರ್ಮಾ ಅವರ ನಾಯಕತ್ವ ಮತ್ತು ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕೃಷ್ಣಮಾಚಾರಿ ಶ್ರೀಕಾಂತ್ ರೋಹಿತ್ ಅವರ ಆಸ್ಟ್ರೇಲಿಯಾ ಪ್ರವಾಸದ ಪ್ರದರ್ಶನವನ್ನು ಅವಲಂಬಿಸಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಬಹುದು ಎಂದು ಭವಿಷ್ಯ ನುಡಿದಿದ್ದಾರೆ. ರೋಹಿತ್ ಅವರ ಕಳಪೆ ಪ್ರದರ್ಶನ ಮತ್ತು ವಯಸ್ಸು ಇದಕ್ಕೆ ಕಾರಣವಾಗಿದೆ. ಭಾರತದ WTC ಫೈನಲ್ ಅವಕಾಶಗಳು ಕೂಡ ಈ ಸೋಲಿನಿಂದ ಕಷ್ಟಕರವಾಗಿವೆ.

‘ಇದು ರೋಹಿತ್ ಶರ್ಮಾರ ಕೊನೆಯ ಟೆಸ್ಟ್ ಸರಣಿಯಾಗಬಹುದು’; ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ
ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
|

Updated on: Nov 04, 2024 | 9:54 PM

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-0 ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನೊಂದಿಗೆ ಟೀಂ ಇಂಡಿಯಾದ ಡಬ್ಲ್ಯುಟಿಸಿ ಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಇದೀಗ ಟೀಂ ಇಂಡಿಯಾ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದರಷ್ಟೇ ಫೈನಲ್​ಗೆ ಸುಗಮವಾಗಿ ಅರ್ಹತೆ ಪಡೆಯಲ್ಲಿದೆ. ಇಲ್ಲದಿದ್ದರೆ, ಸತತ ಮೂರನೇ ಬಾರಿಗೆ ಫೈನಲ್ ಆಡುವ ಟೀಂ ಇಂಡಿಯಾ ಕನಸು ಭಗ್ನಗೊಳ್ಳಲಿದೆ. ಇನ್ನು ಕಿವೀಸ್ ವಿರುದ್ಧದ ಸೋಲಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಮೇಲೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಈ ಸರಣಿಯಲ್ಲಿ ಅವರ ಬ್ಯಾಟ್‌ ಸಾಕಷ್ಟು ಮೌನವಾಗಿತ್ತು. ಹೀಗಾಗಿ ರೋಹಿತ್​ರನ್ನು ಟೆಸ್ಟ್​ ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಕೂಗು ಜೋರಾಗಿದೆ. ಈ ನಡುವೆ ಟೀಂ ಇಂಡಿಯಾದ ಅನುಭವಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ರೋಹಿತ್ ಶರ್ಮಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಸಾಧನೆ ವಿಶೇಷವೇನಿಲ್ಲ. ಕಳೆದ 10 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಕೇವಲ 13.30ರ ಸರಾಸರಿಯಲ್ಲಿ 133 ರನ್ ಗಳಿಸಿದ್ದಾರೆ. ಇದರ ಜೊತೆಗೆ ಮೇಲೆ ಹೇಳಿದಂತೆ ಈ ಬಾರಿ ಟೀಂ ಇಂಡಿಯಾ ಡಬ್ಲ್ಯುಟಿಸಿ ಫೈನಲ್ ತಲುಪುವುದು ಕಷ್ಟಕರವಾಗಿದೆ. ಟೀಂ ಇಂಡಿಯಾ ಕಳೆದ ಎರಡು ಡಬ್ಲ್ಯುಟಿಸಿ ಫೈನಲ್ ಪಂದ್ಯಗಳನ್ನು ಆಡಿತ್ತು. ಇದೀಗ ಟೀಂ ಇಂಡಿಯಾ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಪ್ರವೇಶಿಸಬೇಕಾದರೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 4 ಪಂದ್ಯಗಳನ್ನು ಗೆಲ್ಲಲೇಬೇಕು. ಆದರೆ ಈ ಸರಣಿಗೂ ಮುನ್ನ ರೋಹಿತ್ ಶರ್ಮಾ ಫಾರ್ಮ್ ಕಳವಳಕಾರಿಯಾಗಿದೆ.

ಬಿಜಿಟಿ ಟೆಸ್ಟ್ ಸರಣಿ ರೋಹಿತ್​ಗೆ ನಿರ್ಣಾಯಕ

1983 ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಅವರು ರೋಹಿತ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದು, ಆಸ್ಟ್ರೇಲಿಯಾದಲ್ಲಿ ರೋಹಿತ್ ತಮ್ಮ ಲಯವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗದಿದ್ದರೆ, ಅವರು ಸ್ವತಃ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ. ತಮ್ಮ ಯೂಟ್ಯೂಬ್ ಶೋನಲ್ಲಿ ರೋಹಿತ್ ಶರ್ಮಾ ಬಗ್ಗೆ ಮಾತನಾಡಿ ಶ್ರೀಕಾಂತ್, ‘ಟೀಂ ಇಂಡಿಯಾ ಈಗ ಮುಂದೆ ಯೋಜಿಸಬೇಕಾಗಿದೆ. ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಅವರು ಸ್ವತಃ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಾರೆ ಎಂದು ನಾನು ಭಾವಿಸುತ್ತೇನೆ. ಈಗಾಗಲೇ ಟಿ20 ಮಾದರಿಗೆ ವಿದಾಯ ಹೇಳಿರುವ ರೋಹಿತ್, ಆಸೀಸ್ ಪ್ರವಾಸದಲ್ಲಿ ಲಯ ಕಂಡುಕೊಳ್ಳದಿದ್ದರೆ, ಅವರು ಟೆಸ್ಟ್ ಮಾದರಿಗೂ ವಿದಾಯ ಹೇಳಿ ಏಕದಿನ ಪಂದ್ಯವನ್ನಷ್ಟೇ ಆಡಲಿದ್ದಾರೆ. ಇದಲ್ಲದೆ ರೋಹಿತ್ ಅವರ ವಯಸ್ಸು ಕೂಡ ಹೆಚ್ಚುತ್ತಿದೆ. ಎಂಬುದನ್ನು ನೆನಪಿನಲ್ಲಿಡಬೇಕು ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಕೃಷ್ಣಮಾಚಾರಿ ಶ್ರೀಕಾಂತ್, ‘ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾನು ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ ಎಂದು ರೋಹಿತ್ ಶರ್ಮಾ ಅವರೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ, ಇದು ದೊಡ್ಡ ವಿಷಯ. ಸರಣಿಯಲ್ಲಿ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ವಿಫಲವಾಗಿದ್ದೇನೆ ಎಂದು ರೋಹಿತ್ ಒಪ್ಪಿಕೊಂಡಿದ್ದಾರೆ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ. ಇದೀಗ ಮುಂಬರುವ ಸರಣಿಯಲ್ಲಿ ರೋಹಿತ್ ತಮ್ಮ ಹಳೆಯ ಲಯವನ್ನು ಕಂಡುಕೊಳ್ಳಬೇಕು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ