RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ…

| Updated By: ಝಾಹಿರ್ ಯೂಸುಫ್

Updated on: May 26, 2022 | 6:35 PM

RR vs RCB Qualifier 2: ಈ ಬಾರಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್​ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್​ ಕಲೆಹಾಕಿತು. ಇಲ್ಲಿ ಆರ್​ಸಿಬಿ ಬೌಲರ್​ಗಳು ಪಡೆದಿರುವುದು ಕೇವಲ 3 ವಿಕೆಟ್​ಗಳನ್ನು ಮಾತ್ರ.

RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ...
RR vs RCB Qualifier 2
Follow us on

IPL 2022: ಐಪಿಎಲ್ ಸೀಸನ್​ 15 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಉಳಿದಿರುವುದು ಕೇವಲ 2 ಪಂದ್ಯ ಮಾತ್ರ. ಈಗಾಗಲೇ ಫೈನಲ್​ಗೆ ತಲುಪಿರುವ ಗುಜರಾತ್ ಟೈಟಾನ್ಸ್ (GT)​ ಅಂತಿಮ ಎದುರಾಳಿಯನ್ನು ಎದುರು ನೋಡುತ್ತಿದೆ. ಈ ಎದುರಾಳಿ ಯಾರು ಎಂಬುದು ಶುಕ್ರವಾರ ನಿರ್ಧಾರವಾಗಲಿದೆ. ಏಕೆಂದರೆ ಐಪಿಎಲ್​ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ (RR vs RCB) ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಹೀಗಾಗಿ ಈ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ವಿಶೇಷ ಎಂದರೆ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಸಿದ್ದರೂ, ಆರ್​ಸಿಬಿ ತಂಡವು ಗ್ರೂಪ್​-ಎ ನಲ್ಲಿದ್ದ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯವಾಡಿತ್ತು. ಅಂದರೆ ಗ್ರೂಪ್ ಎ ಮತ್ತು ಗ್ರೂಪ್ ಬಿ ನಡುವೆ ಒಂದು ತಂಡದ ವಿರುದ್ದ 2 ಪಂದ್ಯವಾಡಬೇಕಿತ್ತು. ಹೀಗೆ ಆರ್​ಸಿಬಿ ತಂಡಕ್ಕೆ ಎದುರಾಳಿಯಾಗಿ ಸಿಕ್ಕಿದ ರಾಜಸ್ಥಾನ್ ರಾಯಲ್ಸ್ ತಂಡವೇ ಇದೀಗ ಮೂರನೇ ಬಾರಿಗೆ ಎದುರಾಗಿದೆ.

ಇಲ್ಲಿ ಉಭಯ ತಂಡಗಳು ಬಲಿಷ್ಠವಾಗಿದೆ. ಏಕೆಂದರೆ ಪ್ಲೇಆಫ್​ ಆಡಬೇಕಿದ್ದರೆ ಆ ತಂಡಗಳು ಬಲಿಷ್ಠ ಆಗಿರಲೇಬೇಕು. ಇದಾಗ್ಯೂ ಐಪಿಎಲ್ ಇತಿಹಾಸ ಅಂಕಿ ಅಂಶಗಳನ್ನು ಗಮನಿಸಿದರೆ ಆರ್​ಸಿಬಿ ರಾಜಸ್ಥಾನ್ ವಿರುದ್ದ ಮೇಲುಗೈ ಹೊಂದಿದೆ. ಅಂದರೆ ಉಭಯ ತಂಡಗಳು ಆಡಿರುವ 27 ಪಂದ್ಯಗಳಲ್ಲಿ ಆರ್​ಸಿಬಿ 13 ಬಾರಿ ಗೆದ್ದಿದೆ. ಇನ್ನು ರಾಜಸ್ಥಾನ್ ರಾಯಲ್ಸ್ 11 ಬಾರಿ ಜಯ ಸಾಧಿಸಿದೆ. ಇದು ಹಳೆಯ ಅಂಕಿ ಅಂಶಗಳಾದರೆ, ಇತ್ತೀಚಿನ ಅಂಕಿ ಅಂಶದಲ್ಲೂ ಆರ್​ಸಿಬಿ ತಂಡವೇ ಮುಂದಿದೆ.

ಅಂದರೆ ಕಳೆದ ಸೀಸನ್ ಹಾಗೂ ಈ ಸೀಸನ್​ನಲ್ಲಿನ ಅಂಕಿ ಅಂಶ ತೆಗೆದುಕೊಂಡರೆ, 4 ಪಂದ್ಯಗಳಲ್ಲಿ ಆರ್​ಸಿಬಿ ತಂಡ 3 ಬಾರಿ ಗೆದ್ದಿದೆ. 2021 ರ ಸೀಸನ್​ನಲ್ಲಿ ಆರ್​ಸಿಬಿ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯಗಳನ್ನು ಗೆದ್ದುಕೊಂಡರೆ, ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿತ್ತು. ಆದರೆ ಈ ಗೆಲುವು ಭರ್ಜರಿ ಗೆಲುವಾಗಿರಲಿಲ್ಲ ಎಂಬುದು ವಿಶೇಷ. ಅಂದರೆ ಇಲ್ಲಿ ಅಂಕಿ ಅಂಶಗಳ ಪ್ರಕಾರ ಆರ್​ಸಿಬಿ ಬಲಿಷ್ಠವಾಗಿದ್ದರೂ ರಾಜಸ್ಥಾನ್ ರಾಯಲ್ಸ್ ಉತ್ತಮ ಪೈಪೋಟಿ ನೀಡಿರುವುದು ಸ್ಪಷ್ಟ.

ಇದನ್ನೂ ಓದಿ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಏಕೆಂದರೆ ಈ ಬಾರಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್​ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್​ ಕಲೆಹಾಕಿತು. ಇಲ್ಲಿ ಆರ್​ಸಿಬಿ ಬೌಲರ್​ಗಳು ಪಡೆದಿರುವುದು ಕೇವಲ 3 ವಿಕೆಟ್​ಗಳನ್ನು ಮಾತ್ರ ಎಂಬುದು ಉಲ್ಲೇಖಾರ್ಹ. ಇನ್ನು 170 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಆರ್​ಸಿಬಿ ಗೆಲುವು ದಾಖಲಿಸಿದ್ದು ಕೊನೆಯ ಓವರ್​ನಲ್ಲಿ. ಅದು ಕೂಡ ಶಹಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ಅವರ ಎಚ್ಚರಿಕೆಯ ಆಟದಿಂದ ಎಂಬುದು ವಿಶೇಷ. ಅಂದರೆ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಆರ್​ಸಿಬಿ ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳು ವಿಫಲರಾಗಿದ್ದರು. ಇದಾಗ್ಯ 6 ವಿಕೆಟ್ ಕಳೆದುಕೊಂಡು ಆರ್​ಸಿಬಿ 4 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.

ಇನ್ನು 2ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ರಾಜಸ್ಥಾನ್ ರಾಯಲ್ಸ್​ ಸಾಧಿಸಿತ್ತು. ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ನಡೆಸಿದ್ದ ಆರ್​ಸಿಬಿ ಬೌಲರ್​ಗಳು ರಾಜಸ್ಥಾನ್ ತಂಡವನ್ನು ಕೇವಲ 144 ರನ್​ಗಳಿಗೆ ನಿಯಂತ್ರಿಸಿದ್ದರು. 145 ರನ್​ಗಳ ಸುಲಭ ಗುರಿ ಬೆನ್ನತ್ತಿದ ಆರ್​ಸಿಬಿಯನ್ನು ಅತ್ಯುತ್ತಮ ಬೌಲಿಂಗ್ ಮೂಲಕ ನಿಯಂತ್ರಿಸುವಲ್ಲಿ ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿತ್ತು. ಅಂದರೆ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ 115 ರನ್​ಗಳಿಗೆ ಆಲೌಟ್​ ಆಗುವ ಮೂಲಕ 29 ರನ್​ಗಳಿಂದ ಸೋಲನುಭವಿಸಿತ್ತು.

ಅಂದರೆ ಇಲ್ಲಿ ಆರ್​ಸಿಬಿ ವಿರುದ್ದದ ಕೊನೆಯ ಪಂದ್ಯದಲ್ಲಿ ಪರಾಕ್ರಮ ಮೆರೆದಿದ್ದ ರಾಜಸ್ಥಾನ್ ರಾಯಲ್ಸ್​ ಇದೀಗ ಅದೇ ಆತ್ಮ ವಿಶ್ವಾಸದಲ್ಲಿದ್ದಾರೆ. ಅದರಲ್ಲೂ ಆರ್​ಸಿಬಿ ವಿರುದ್ದ ಈ ಬಾರಿ ಆಡಿದ 2 ಪಂದ್ಯಗಳಲ್ಲೂ ರಾಜಸ್ಥಾನ್ ರಾಯಲ್ಸ್ ಉತ್ತಮ ಪ್ರದರ್ಶನವನ್ನೇ ನೀಡಿದೆ. ಹೀಗಾಗಿ ಅಂಕಿ ಅಂಶಗಳ ಪ್ರಕಾರ ಈ ಆರ್​ಸಿಬಿ ಬಲಿಷ್ಠವಾಗಿ ಕಂಡರೂ, ಪ್ರಸ್ತುತ ತಂಡಗಳ ಪ್ರದರ್ಶನವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಆರ್​ಸಿಬಿ ತಂಡಕ್ಕೆ ರಾಜಸ್ಥಾನ್ ರಾಯಲ್ಸ್​ ತಂಡದಿಂದ ಕಠಿಣ ಪೈಪೋಟಿ ಎದುರಾಗುವುದು ಖಚಿತ.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.