
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಯುವ ದಾಂಡಿಗನಿಗೆ ಆಡುವ ಬಳಗದಲ್ಲಿ ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟಿದ್ದರು. ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಈ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದಿದ್ದ ಮ್ಯಾಚ್ ವಿನ್ನರ್ ಸ್ಯಾಮ್ಸನ್‌ನನ್ನು ಕೇವಲ 3 ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ದಿಢೀರ್ ಆಗಿ ಕೈಬಿಟ್ಟಿರುವುದು ಅಚ್ಚರಿಯ ನಿರ್ಧಾರ.
ಒಂದು ವೇಳೆ ಅವರಿಗೆ ಗಾಯವಾಗಿದ್ದರೆ ಮಾತ್ರ ಈ ನಿರ್ಧಾರ ಒಪ್ಪಬಹುದು, ಇಲ್ಲದಿದ್ದರೆ ಇದು ಕ್ರಿಕೆಟ್ ಇತಿಹಾಸದ ಅತ್ಯಂತ ವಿಲಕ್ಷಣ ಆಯ್ಕೆ ಎಂದು ಸಂಜಯ್ ಮಂಜ್ರೇಕರ್ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ.
15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಪಾದಾರ್ಪಣೆ ಮಾಡಲು ಮ್ಯಾನೇಜ್‌ಮೆಂಟ್ ಬಯಸಿದ್ದರೆ, ಅದಕ್ಕೆ ಸ್ಯಾಮ್ಸನ್ ಅವರನ್ನು ಬಲಿಪಶು ಮಾಡುವ ಅಗತ್ಯವಿರಲಿಲ್ಲ ಎಂಬುದು ಮಂಜ್ರೇಕರ್ ವಾದ.
ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲೇ ಉಳಿಸಿಕೊಂಡು, ನಂಬರ್ 3 ಬ್ಯಾಟಿಂಗ್ ಸ್ಥಾನಕ್ಕೆ ಕಳುಹಿಸಬಹುದಿತ್ತು. ಆದರೆ ಅವರನ್ನು ಏಕಾಏಕಿ ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟಿದ್ದಾರೆ.
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಏನು ತಮಾಷೆ ಮಾಡುತ್ತಿದ್ದಾರಾ? ಎಂಬುದೇ ಅರ್ಥವಾಗುತ್ತಿಲ್ಲ. ಯಾವುದೇ ಕಾರಣವಿಲ್ಲದೆ ಸ್ಯಾಮ್ಸನ್ ಅವರನ್ನು ಹೊರಗಿಟ್ಟಿರುವುದು ಅತ್ಯಂತ ವಿಲಕ್ಷಣ ಮತ್ತು ನಂಬಲಾಗದ ನಿರ್ಧಾರ ಎಂದು ಮಂಜ್ರೇಕರ್ ಅಸಮಾಧಾನ ಹೊರಹಾಕಿದ್ದಾರೆ.
ಸಂಜು ಸ್ಯಾಮ್ಸನ್ ಕಳೆದ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅದರಲ್ಲೂ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 1 ರನ್ ಮಾತ್ರ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಮುರಿದ ಬೆತ್ ಮೂನಿ
ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಸಂಜು ಸ್ಯಾಮ್ಸನ್ ಅವರನ್ನು ಕೂರಿಸಿ ವೈಭವ್ ಸೂರ್ಯವಂಶಿಗೆ ಚಾನ್ಸ್ ನೀಡಿದ್ದರು. ಆದರೆ ಗಂಭೀರ್ ಅವರ ಈ ನಿರ್ಧಾರಕ್ಕೆ ಸಂಜಯ್ ಮಂಜ್ರೇಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.