SMAT 2025: 7 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿದ ಶಾರ್ದೂಲ್; ಮುಂಬೈಗೆ 98 ರನ್ ಜಯ
Shardul Thakur's Five-Wicket Haul: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025ರಲ್ಲಿ ಮುಂಬೈ ತಂಡ ಅಸ್ಸಾಂ ವಿರುದ್ಧ ಭರ್ಜರಿ 98 ರನ್‌ಗಳ ಜಯ ಸಾಧಿಸಿದೆ. ನಾಯಕ ಶಾರ್ದೂಲ್ ಠಾಕೂರ್ ಅವರ ಮಾರಕ ಬೌಲಿಂಗ್ ಪ್ರದರ್ಶನದಿಂದ ಮುಂಬೈ ಅಜೇಯ ಓಟ ಮುಂದುವರಿಸಿದೆ. ಶಾರ್ದೂಲ್ ಕೇವಲ 23 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿ, ಅಸ್ಸಾಂ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅಸ್ಸಾಂ ತಂಡ 122 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಂಬೈ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.

ಮುಂಬೈ ಮತ್ತು ಅಸ್ಸಾಂ (Mumbai vs Assam) ನಡುವೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2025 (Syed Mushtaq Ali Trophy 2025) ಪಂದ್ಯದಲ್ಲಿ ಬಲಿಷ್ಠ ಮುಂಬೈ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಸ್ಸಾಂ ತಂಡ ಕೇವಲ 122 ರನ್‌ಗಳಿಗೆ ಆಲೌಟ್ ಆಗಿ 98 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಅಸ್ಸಾಂ ತಂಡದ ಈ ಪೆವಿಲಿಯನ್ ಪರೇಡ್ಗೆ ಕಾರಣರಾಗಿದ್ದು, ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ (Shardul Thakur). ಪವರ್‌ಪ್ಲೇನಲ್ಲಿಯೇ ತನ್ನ ಪವರ್ ತೋರಿದ ಶಾರ್ದೂಲ್, ಅಸ್ಸಾಂ ಬ್ಯಾಟರ್ಗಳ ಹೆಡೆಮುರಿ ಕಟ್ಟಿದರು.
ಶಾರ್ದೂಲ್ ಠಾಕೂರ್ ಮಾರಕ ಬೌಲಿಂಗ್
220 ರನ್‌ಗಳ ಗುರಿ ಬೆನ್ನಟ್ಟಿದ ಅಸ್ಸಾಂಗೆ ಆರಂಭದಲ್ಲೇ ಶಾರ್ದೂಲ್ ಶಾಕ್ ನೀಡಿದರು. ಮುಂಬೈ ಪರ ಬೌಲಿಂಗ್ ಆರಂಭಿಸಿದ ಶಾರ್ದೂಲ್ ಠಾಕೂರ್, ತಮ್ಮ ಮೊದಲ ಓವರ್ನಲ್ಲೇ ಮೂರು ವಿಕೆಟ್ ಕಬಳಿಸಿದರು. ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಅಸ್ಸಾಂನ ಆರಂಭಿಕ ದಾನಿಶ್ ದಾಸ್ ಅವರನ್ನು ಔಟ್ ಮಾಡಿದ ಠಾಕೂರ್, ನಂತರ ಮೂರನೇ ಎಸೆತದಲ್ಲಿ ಅಬ್ದುಲ್ ಅಜೀಜ್ ಖುರೇಷಿ ಮತ್ತು ಐದನೇ ಎಸೆತದಲ್ಲಿ ರಿಯಾನ್ ಪರಾಗ್ ಅವರನ್ನು ಔಟ್ ಮಾಡಿ ಅಸ್ಸಾಂ ಇನ್ನಿಂಗ್ಸ್ನ ಬೆನ್ನೆಲುಬು ಮುರಿದರು.
ತಮ್ಮ ಎರಡನೇ ಓವರ್ ಅನ್ನು ಇದೇ ರೀತಿ ಆರಂಭಿಸಿದ ಶಾರ್ದೂಲ್ ಠಾಕೂರ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಈ ಮೂಲಕ ಕೇವಲ ಏಳು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದರು. ಇಲ್ಲಿಗೆ ನಿಲ್ಲದ ಶಾರ್ದೂಲ್ ಮೂರನೇ ಓವರ್‌ನಲ್ಲಿ ಮತ್ತೊಬ್ಬ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡಿದರು. ಅಂತಿಮವಾಗಿ ಕೇವಲ 23 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು. ಶಾರ್ದೂಲ್ ದಾಳಿಗೆ ತತ್ತರಿಸಿದ ಅಸ್ಸಾಂ ಪವರ್‌ಪ್ಲೇ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು ಕೇವಲ 49 ರನ್ ಕಲೆಹಾಕಿತು.
ಮುಂಬೈಗೆ ಸುಲಭ ಗೆಲುವು
ಶಾರ್ದೂಲ್ ಠಾಕೂರ್ ಅವರ ಅತ್ಯುತ್ತಮ ಬೌಲಿಂಗ್ ಮುಂಬೈ ಪಂದ್ಯವನ್ನು 98 ರನ್‌ಗಳಿಂದ ಗೆಲ್ಲಲು ಸಹಾಯ ಮಾಡಿತು. 221 ರನ್‌ಗಳ ಗುರಿ ಬೆನ್ನಟ್ಟಿದ ಅಸ್ಸಾಂ 19.1 ಓವರ್‌ಗಳ ಕಾಲ ಬ್ಯಾಟಿಂಗ್ ಮಾಡಿ 122 ರನ್‌ಗಳಿಗೆ ಆಲೌಟ್ ಆಯಿತು. ಶಾರ್ದೂಲ್ ಹೊರತುಪಡಿಸಿ ಸಾಯಿರಾಜ್ ಪಾಟೀಲ್ ಮತ್ತು ಅಥರ್ವ ಅಂಕೋಲೇಕರ್ ತಲಾ ಎರಡು ವಿಕೆಟ್ ಪಡೆದರೆ, ಶಮ್ಸ್ ಮುಲಾನಿ ಕೂಡ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 pm, Tue, 2 December 25
