
ಐಪಿಎಲ್ 2025 (IPL 2025) ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ (RCB vs PBKS) ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ಚೊಚ್ಚಲ ಟ್ರೋಫಿ ಎತ್ತುವ ತಂಡದ ಕನಸು ಭಗ್ನವಾಯಿತು. ತಂಡದ ಈ ಸೋಲಿಗೆ ಬ್ಯಾಟರ್ಗಳ ವೈಫಲ್ಯವೇ ಪ್ರಮುಖ ಕಾರಣವಾಗಿದ್ದರೂ, ತಂಡದ ಅನ್ಕ್ಯಾಪ್ಡ್ ಆಟಗಾರ ಶಶಾಂಕ್ ಸಿಂಗ್ (Shashank Singh), ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿ, ಕೊನೆಯವರೆಗೂ ಪಂದ್ಯವನ್ನು ರೋಚಕಗೊಳಿಸಿದರು. ಆದಾಗ್ಯೂ ಐಪಿಎಲ್ ಫೈನಲ್ ಪಂದ್ಯದ ನಂತರ ಮಾತನಾಡಿರುವ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ವಾಸ್ತವವಾಗಿ ಐಪಿಎಲ್ 2025 ರ ಕ್ವಾಲಿಫೈಯರ್ 2 ರಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸುವಲ್ಲಿ ಪಂಜಾಬ್ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಪಂಜಾಬ್ ಗೆಲುವಿಗೆ ನಾಯಕ ಶ್ರೇಯಸ್ ಆಡಿದ ಇನ್ನಿಂಗ್ಸ್ ಪ್ರಮುಖ ಕಾರಣವಾಗಿತ್ತು. ಒಂದೆಡೆ ವಿಕೆಟ್ಗಳ ಪತನವಾಗುತ್ತಿದ್ದರೆ, ಮತ್ತೊಂದೆಡೆ ಶ್ರೇಯಸ್ ನಾಯಕನ ಇನ್ನಿಂಗ್ಸ್ ಆಡಿದರು. ಹೀಗಾಗಿಯೇ ಪಂಜಾಬ್ ಫೈನಲ್ಗೇರಲು ಸಾಧ್ಯವಾಯಿತು. ಆದಾಗ್ಯೂ ಈ ಪಂದ್ಯದಲ್ಲಿ ಗೇಮ್ ಫಿನಿಶರ್ ಖ್ಯಾತಿಯ ಶಶಾಂಕ್ ಸಿಂಗ್ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು.
ಏಕೆಂದರೆ ಅಯ್ಯರ್ ಹೊರತುಪಡಿಸಿ ತಂಡದ ಪ್ರಮುಖ ಆಟಗಾರರೆಲ್ಲ ಪೆವಿಲಿಯನ್ ಸೇರಿಕೊಂಡಿದ್ದರು. ಈ ಹಂತದಲ್ಲಿ ಅಯ್ಯರ್ ಜೊತೆಗೆ ಇನ್ನಿಂಗ್ಸ್ ಕಟ್ಟುವ ಆಟಗಾರ ಬೇಕಿತ್ತು. ಇದಕ್ಕೆ ಪೂರಕವಾಗಿ ಶಶಾಂಕ್ ಬ್ಯಾಟಿಂಗ್ಗೆ ಬಂದರು. ಆದರೆ ಶಶಾಂಕ್ ತಮ್ಮ ಬೇಜವಾಬ್ದಾರಿ ಆಟದಿಂದಾಗಿ ರನೌಟ್ಗೆ ಬಲಿಯಾಗಿದ್ದರು. ಪಂದ್ಯ ಮುಗಿದ ಬಳಿಕ ನಾಯಕ ಶ್ರೇಯಸ್, ಶಶಾಂಕ್ ಮೇಲೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಈ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿರುವ ಶಶಾಂಕ್ ಸಿಂಗ್, ಶ್ರೇಯಸ್ ಸರಿಯಾದ ಕೆಲಸ ಮಾಡಿದ್ದಾರೆ, ನಾನು ಇದಕ್ಕೆ ಅರ್ಹ. ಅಯ್ಯರ್ ನನಗೆ ಕಪಾಳಮೋಕ್ಷ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ನನ್ನ ತಂದೆ ಕೂಡ ಫೈನಲ್ ತನಕ ನನ್ನ ಜೊತೆ ಮಾತನಾಡಿರಲಿಲ್ಲ. ನಾಣು ರನೌಟ್ ಆದ ಸಮಯ ತಂಡಕ್ಕೆ ಬಹಳ ಮುಖ್ಯವಾಗಿತ್ತು. ಆದರೆ ನಾನು ಎಡವಿದೆ. ಪಂದ್ಯದ ಬಳಿಕ ಶ್ರೇಯಸ್ ಅವರು ನನ್ನಿಂದ ಇಂತಹ ತಪ್ಪನ್ನು ನಿರೀಕ್ಷಿಸಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ನಂತರ ಅವರು ನನ್ನನ್ನು ಊಟಕ್ಕೆ ಕರೆದೊಯ್ದರು ಎಂದಿದ್ದಾರೆ.
GT vs PBKS Highlights, IPL 2024: ಪಂಜಾಬ್ಗೆ ಗೆಲುವು ತಂದ ಶಶಾಂಕ್ ಸಿಂಗ್
ಮುಂಬೈ ಇಂಡಿಯನ್ಸ್ ವಿರುದ್ಧದ ಕ್ವಾಲಿಫೈಯರ್ 2 ರಲ್ಲಿ ಶಶಾಂಕ್ ಸಿಂಗ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಿದ್ದರೂ, ಐಪಿಎಲ್ 2025 ರ ಫೈನಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅಜೇಯ 61 ರನ್ ಗಳಿಸಿದರು. ಅವರ ಇನ್ನಿಂಗ್ಸ್ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರವಾಯಿತು. ಆದಾಗ್ಯೂ, ಶಶಾಂಕ್ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಶಶಾಂಕ್ ಸಿಂಗ್ ಐಪಿಎಲ್ 2025 ರಲ್ಲಿ ಆಡಿದ 17 ಪಂದ್ಯಗಳಲ್ಲಿ 50 ರ ಸರಾಸರಿಯಲ್ಲಿ 350 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ ಅಜೇಯ 61 ರನ್ಗಳಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ