ಜಿಂಬಾಬ್ವೆ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿರುವ ಟೀಮ್ ಇಂಡಿಯಾ (Zimbabwe vs India) ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಮೂರರಲ್ಲೂ ಗೆದ್ದು ಸರಣಿ ವಶಪಡಿಸಿಕೊಂಡ ಸಾಧನೆ ಮಾಡಿದೆ. ಮೊದಲ ಪಂದ್ಯದಲ್ಲಿ 10 ವಿಕೆಟ್ಗಳ ಅಮೋಘ ಗೆಲುವು ಕಂಡರೆ, ದ್ವಿತೀಯ ಪಂದ್ಯದಲ್ಲಿ 5 ವಿಕೆಟ್ಗಳಿಂದ ಜಯಿಸಿತ್ತು. ಸೋಮವಾರ ನಡೆದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲೂ ಕೆಎಲ್ ರಾಹುಲ್ (KL Rahul) ಪಡೆ 13 ರನ್‌ಗಳ ರೋಚಕ ಗೆಲುವು ಸಾಧಿಸಿ ಸರಣಿ ಕ್ಲೀನ್ಸ್ವೀಪ್ ಮಾಡಿದೆ. ಪಂದ್ಯ ಮುಗಿದ ಬಳಿಕ ಆಟಗಾರರ ಸಂಭ್ರಮಾಚರಣೆ ಕೂಡ ಭರ್ಜರಿ ಆಗಿತ್ತು. ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.
ಶಿಖರ್ ಧವನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಂದ್ಯ ಮುಗಿದ ಬಳಿಕ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೂಮ್ನಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಟಗಾರರ ನೃತ್ಯಕ್ಕೆ ಧವನ್ ಹಾಗೂ ನಾಯಕ ರಾಹುಲ್ ಚಾಲನೆ ನೀಡಿದರು. ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಬೊಂಬಾಟ್ ಸ್ಟೆಪ್ಸ್ ಹಾಕಿ ವಿಶೇಷವಾಗಿ ಕಾಲಾ ಚಶ್ಮಾ ಹಾಡಿಗೆ ಸಂಭ್ರಮಾಚರಣೆ ಮಾಡಿದ್ದಾರೆ. ಈ ವಿಡಿಯೋಕ್ಕೆ 1.1 ಮಿಲಿಯನ್ಗೂ ಅಧಿಕ ಲೈಕ್ಸ್ ಬಂದಿದೆ. ಯುವರಾಜ್ ಸಿಂಗ್ ಸೇರಿದಂತೆ ಕೆಲ ಮಾಜಿ ಕ್ರಿಕೆಟಿಗರು ಕಮೆಂಟ್ ಕೂಡ ಮಾಡಿದ್ದಾರೆ.
View this post on Instagram
ತೃತೀಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಧಾನಗತಿಯ ಆರಂಭ ಪಡೆದುಕೊಂಡಿತು. 15 ಓವರ್‌ಗಳಲ್ಲಿ 63 ರನ್ ಮಾತ್ರ ಗಳಿಸಿತು. ಶಿಖರ್ ಧವನ್ (40) ಮತ್ತು ಕೆ.ಎಲ್.ರಾಹುಲ್ (30) ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದರೆ, ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಜತೆಯಾದ ಬಳಿಕ ಸ್ಕೋರಿಂಗ್‌ನ ವೇಗ ಹೆಚ್ಚಿತು. ಮೂರನೇ ವಿಕೆಟ್‌ಗೆ ಇವರು 140ರನ್ ಸೇರಿಸಿದರು.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೂರು ವರ್ಷಗಳ ಬಳಿಕ ಗಿಲ್ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು. ಅಂಗಳದ ಮೂಲೆ ಮೂಲೆಗೆ ಚೆಂಡನ್ನಟ್ಟಿದ ಗಿಲ್ 97 ಎಸೆತಗಳಲ್ಲಿ ಜೀವನಶ್ರೇಷ್ಠ 130 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಇವರಿಗೆ ಸಾಥ್ ನೀಡಿದ ಇಶಾನ್ ಕಿಶನ್ 61 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 50 ರನ್ ಗಳಿಸಿ ಮಿಂಚಿದರು. ಭಾರತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 289 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಗೆಲುವಿಗೆ 290 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ತಂಡ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ತಂಡ 145 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡ ಜಿಂಬಾಬ್ವೆ ಮತ್ತೊಮ್ಮೆ 200ರ ಒಳಗೆ ಆಲ್‌ಔಟ್ ಆಗಲಿದೆ ಎಂದೇ ಎಣಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಸಿಖಂದರ್ ರಾಜಾ, 95 ಎಸೆತಗಳಲ್ಲಿ 9 ಫೋರ್ ಮತ್ತು 3 ಸಿಕ್ಸರ್ ಸಿಡಿಸಿ 115 ರನ್‌ಗಳನ್ನು ಬಾರಿಸುವ ಮೂಲಕ ತಂಡವನ್ನು ಏಕಾಂಗಿಯಾಗಿ ಜಯದ ದಡ ಮುಟ್ಟಿಸುವ ಪ್ರಯತ್ನ ಮಾಡಿದರು. ಆದರೆ, 49ನೇ ಓವರ್‌ನಲ್ಲಿ ಇವರು ಔಟಾಗುವ ಮೂಲಕ ಜಿಂಬಾಬ್ವೆ 49.3 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲ್‌ಔಟ್ ಆಗಿ ಸೋಲು ಕಂಡಿತು.