AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಘನ ಘೋರ ಪ್ರದರ್ಶನ”: ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

England vs India, 3rd T20I: ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 201 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 11.4 ಓವರ್​ಗಳಲ್ಲಿ ಕೇವಲ 76 ರನ್​ಗಳಿಸಿ ಆಲೌಟ್ ಆಗಿದೆ.

ಘನ ಘೋರ ಪ್ರದರ್ಶನ: ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
Shreyas IyerImage Credit source: Sonyliv.com
ಝಾಹಿರ್ ಯೂಸುಫ್
|

Updated on: Jul 08, 2026 | 8:32 AM

Share

ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲನುಭವಿಸಿದೆ. ನಾಟಿಂಗ್​ಹ್ಯಾಮ್​ ಟ್ರೆಂಟ್ ಬ್ರಿಡ್ಜ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 20 ಓವರ್​ಗಳಲ್ಲಿ 201 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 11.4 ಓವರ್​ಗಳಲ್ಲಿ ಕೇವಲ 76 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ನೂರಕ್ಕೂ ಹೆಚ್ಚು ರನ್​ಗಳ ಅಂತರದಿಂದ ಸೋಲನುಭವಿಸಿದೆ.

ಈ ಸೋಲಿನ ಬಳಿಕ ಕ್ರೀಡಾ ವಿಶ್ಲೇಷಕ ಇಯಾನ್ ಮಾರ್ಗನ್ ಹಾಗೂ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ನಡುವೆ ನಡೆದ ಪ್ರಶ್ನೋತ್ತರಗಳ ಸಾರಾಂಶ ಇಲ್ಲಿದೆ.

ಪ್ರಶ್ನೆ: ಪಂದ್ಯದ ಆರಂಭಕ್ಕೂ ಮುನ್ನವೇ ಯೋಜನೆಗಳನ್ನು ರೂಪಿಸಲಾಗಿರುತ್ತದೆ. ಹಾಗಾದರೆ ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ಎಲ್ಲಿ ತಪ್ಪು ನಡೆಯಿತು?

ಶ್ರೇಯಸ್ ಅಯ್ಯರ್: ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮದು “ಘನ ಘೋರ ಪ್ರದರ್ಶನ”. ಇಷ್ಟು ದೊಡ್ಡ ಅಂತರದ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಮೊದಲನೆಯದಾಗಿ, ನಾವು ಈ ಸೋಲನ್ನು ಒಪ್ಪಿಕೊಂಡು, ಸಂಪೂರ್ಣವಾಗಿ ಆರಂಭದಿಂದ ಯೋಜನೆಗಳನ್ನು ಮರುಪರಿಶೀಲಿಸಬೇಕಿದೆ. ಪಿಚ್ ನೋಡಿದರೆ ಇದು 200 ರನ್ ಗಳಿಸುವಂತಹ ವಿಕೆಟ್ ಆಗಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ಪವರ್‌ಪ್ಲೇನಲ್ಲೇ 4-5 ವಿಕೆಟ್‌ಗಳನ್ನು ಕಳೆದುಕೊಂಡೆವು. ಅಲ್ಲಿಯೇ ಪಂದ್ಯದ ಹಿಡಿತ ನಮ್ಮ ಕೈತಪ್ಪಿತು. ನಾವು ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ.

ಪ್ರಶ್ನೆ: ನೀವು ಆರಂಭದಿಂದಲೇ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದೀರಿ. ಪಂದ್ಯದ ಮೊದಲ ಎಸೆತಕ್ಕೂ ಮುನ್ನವೇ ಅನೇಕ ನಾಯಕರು ತಮ್ಮ ಯೋಜನೆಗಳ ಬಗ್ಗೆ ಮಾತನಾಡಿರುತ್ತಾರೆ. ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ಇಡೀ ಪಂದ್ಯದ ಉದ್ದಕ್ಕೂ ನಿಮ್ಮ ಯೋಜನೆಗಳು ಏನಾಗಿದ್ದವು ಮತ್ತು ಎಲ್ಲಿ ತಪ್ಪುಗಳು ಸಂಭವಿಸಿರಬಹುದು ಎಂಬುದನ್ನು ನಮಗೆ ವಿವರವಾಗಿ ತಿಳಿಸಿ.

ಶ್ರೇಯಸ್ ಅಯ್ಯರ್: ತಂಡದ ಸಭೆಯಲ್ಲಿ ನಾವು ಎಷ್ಟು ಬೇಕಾದರೂ ಯೋಜನೆಗಳನ್ನು ರೂಪಿಸಬಹುದು. ಆದರೆ ಮೈದಾನಕ್ಕೆ ಇಳಿದ ತಕ್ಷಣ ಅಲ್ಲಿನ ಪರಿಸ್ಥಿತಿಗೆ ಬೇಗ ಹೊಂದಿಕೊಳ್ಳುವುದು ಮುಖ್ಯ. ಪಿಚ್‌ಗೆ ತಕ್ಕಂತೆ ಯಾವ ಲೆಂತ್‌ನಲ್ಲಿ ಬೌಲಿಂಗ್ ಮಾಡಬೇಕೆಂದು ಬೇಗ ಅರಿಯಬೇಕು. ಇಂದಿನ ಪಂದ್ಯದಲ್ಲಿ ‘ಹಾರ್ಡ್ ಲೆಂತ್’ ಬೌಲರ್‌ಗಳಿಗೆ ನೆರವಾಗುತ್ತಿತ್ತು, ಆದರೆ ನಮ್ಮಿಂದ ಅದರ ಸರಿಯಾದ ಅನುಷ್ಠಾನ ಸಾಧ್ಯವಾಗಲಿಲ್ಲ. ಇನ್ನು ಬ್ಯಾಟಿಂಗ್‌ನಲ್ಲಿ 200 ರನ್‌ಗಳ ಗುರಿ ಬೆನ್ನಟ್ಟುವಾಗ ಇನಿಂಗ್ಸ್ ವೇಗವನ್ನು ಸರಿಯಾಗಿ ನಿಯಂತ್ರಿಸಬೇಕು. ಒಂದು ನಿರ್ದಿಷ್ಟ ಮಾದರಿಯ ಆಟ ನಮ್ಮದಾಗಿರಬೇಕಿತ್ತು. ಎಲ್ಲಾ ಕೂಡ ನಾವು ವಿಫಲರಾದೆವು. ಹೀಗಾಗಿ ಈ ಯೋಜನೆಗಳನ್ನೆಲ್ಲಾ ನಾವು ಮರುಪರಿಶೀಲಿಸಬೇಕಿದೆ.

ಪಶ್ನೆ: ಸರಣಿಯನ್ನು ಇನ್ನು ಕೇವಲ ಟೈ ಮಾಡಿಕೊಳ್ಳಲಷ್ಟೇ ಅವಕಾಶವಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ಪರಿಸ್ಥಿತಿಯನ್ನು ಎಷ್ಟು ಬೇಗ ಬದಲಾಯಿಸಬಲ್ಲಿರಿ?

ಶ್ರೇಯಸ್: ಖಂಡಿತವಾಗಿಯೂ. ನೀವು ಹೇಳಿದಂತೆ, ಬಲಿಷ್ಠವಾಗಿ ಮರಳಿ ಬರಲು ಇದೊಂದು ಉತ್ತಮ ಅವಕಾಶ. ಹಿಂದೆ ನಡೆದುಹೋದ ವಿಷಯಗಳ ಬಗ್ಗೆಯೇ ಅತಿಯಾಗಿ ಯೋಚಿಸುತ್ತಾ ಕೂರಬಾರದು. ನಾವು ಅತ್ಯಂತ ಕಳಪೆ ಕ್ರಿಕೆಟ್ ಆಡಿದ್ದೇವೆ ಎಂಬುದು ಖಂಡಿತವಾಗಿಯೂ ನಿಜ, ಆದರೆ ಇದರಿಂದ ಕಲಿಯುವಂತಹ ವಿಷಯಗಳು ಕೂಡ ಬಹಳಷ್ಟಿವೆ. ಆಟಗಾರರು ಮುಖ್ಯವಾಗಿ ತಂಡದ ಮೇಲೆ ಹೇಗೆ ಪ್ರಭಾವ ಬೀರಬೇಕು ಅಥವಾ ತಂಡಕ್ಕೆ ಹೇಗೆ ಆ ಲಯವನ್ನು ತಂದುಕೊಡಬೇಕು ಎಂಬುದರ ಬಗ್ಗೆ ಯೋಚಿಸಲು ಪ್ರಾರಂಭಿಸಬೇಕು. ಹಾಗಾಗಿ, ಪ್ರತಿಯೊಬ್ಬ ಆಟಗಾರನೂ ವೈಯಕ್ತಿಕವಾಗಿ ಯೋಚಿಸಿ, ಪಂದ್ಯಗಳನ್ನು ಹೇಗೆ ಗೆಲ್ಲಬಹುದು ಮತ್ತು ಆ ರೀತಿಯ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ಕಂಡುಕೊಳ್ಳಬೇಕಿರುವುದು ಖಂಡಿತಾ ಅಗತ್ಯವಾಗಿದೆ ಎಂದರು.

ಒಟ್ಟಾರೆಯಾಗಿ ಹೇಳುವುದಾದರೆ, ಈ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು ಮತ್ತು ಇಷ್ಟು ದೊಡ್ಡ ಅಂತರದ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಶ್ರೇಯಸ್ ಅಯ್ಯರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಹಳೆಯ ತಪ್ಪುಗಳನ್ನು ಮರೆತು, ಮೈದಾನದ ಪರಿಸ್ಥಿತಿಗೆ ತಕ್ಕಂತೆ ಬೇಗನೆ ಹೊಂದಿಕೊಳ್ಳುವುದು ಮತ್ತು ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಂಡು ಆಡುವುದು ಸದ್ಯದ ಅಗತ್ಯವಾಗಿದೆ.

ಇದನ್ನೂ ಓದಿ: ಕ್ರಿಸ್ಟಿಯಾನೊ ಕಡೆಯಿಂದ ಈಡೇರಲಿದೆಯಾ ರೊನಾಲ್ಡೊ ವಿಶ್ವಕಪ್ ಕನಸು!

ಸರಣಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಇನ್ನುಳಿದಿರುವ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಬ್ರಿಸ್ಟಲ್‌ನಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಬಲಿಷ್ಠವಾಗಿ ಕಂಬ್ಯಾಕ್ ಮಾಡಲಿದೆ ಎಂಬ ವಿಶ್ವಾಸವನ್ನು ಕೂಡ ಶ್ರೇಯಸ್ ಅಯ್ಯರ್ ವ್ಯಕ್ತಪಡಿಸಿದ್ದಾರೆ.

Follow Us