
ಭಾರತದ ಟಿ20 ತಂಡಕ್ಕೆ ಹೊಸ ನಾಯಕನ ನೇಮಕವಾಗಿದೆ. ಟೀಂ ಇಂಡಿಯಾವನ್ನು ಟಿ20 ಚಾಂಪಿಯನ್ ಆಗಿ ಮಾಡಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಚುಟುಕು ಮಾದರಿಯಿಂದ ಹೊರಗಿಟ್ಟಿರುವ ಬಿಸಿಸಿಐ, ಅವರ ಬದಲಿಗೆ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ನಾಯಕನಾಗಿ ನೇಮಿಸಿದೆ. ಈ ಮಾದರಿಯಲ್ಲಿ ಅಪಾರ ಅನುಭವವನ್ನು ಹೊಂದಿರುವ ಶ್ರೇಯಸ್ ಅಯ್ಯರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನು ನಾಯಕತ್ವ ಸಿಕ್ಕ ಬಳಿಕ ಇದೇ ಮೊದಲನೇ ಬಾರಿಗೆ ಮಾತನಾಡಿರುವ ಶ್ರೇಯಸ್ ಅಯ್ಯರ್, ತಮ್ಮ ಮುಂದಿನ ಗುರಿ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಪ್ರಸ್ತುತ ಮುಂಬೈ ಟಿ20 ಲೀಗ್ನಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್, ಟಿ20 ತಂಡದ ನಾಯಕನಾಗಿ ಆಯ್ಕೆಯಾಗಿರುವ ಬಗ್ಗೆ ಮನದಾಳ ತೆರೆದಿಟ್ಟಿದ್ದು, ‘ನಾಯಕನಾದ ಕೂಡಲೇ ನಾನು ನನ್ನ ವ್ಯಕ್ತಿತ್ವವನ್ನು ಬದಲಾಯಿಸುವ ಅಗತ್ಯವಿಲ್ಲ. ನಾನು ಮೊದಲಿನಂತೆಯೇ ಇರುತ್ತೇನೆ. ನಾನು ಯಾರಂತೆಯೂ ಇರಲು ಅಥವಾ ಯಾರ ನೆರಳಿನಲ್ಲಿ ಬದುಕಲು ಪ್ರಯತ್ನಿಸುವುದಿಲ್ಲ. ಸ್ಪಷ್ಟವಾಗಿ, ನಾನು ಬಾಲ್ಯದಿಂದಲೂ ಸವಾಲುಗಳನ್ನು ಎದುರಿಸುವುದನ್ನು ಆನಂದಿಸಿದ್ದೇನೆ. ವಿಶೇಷವಾಗಿ ಮುಂಬೈನಿಂದ ಬಂದಿರುವುದರಿಂದ, ಅಲ್ಲಿ ಕ್ರಿಕೆಟ್ಗೆ ವಿಶೇಷ ಮನ್ನಣೆಯಿದ್ದು, ಸ್ಪರ್ಧೆಯು ತುಂಬಾ ತೀವ್ರವಾಗಿರುತ್ತದೆ. ಪ್ರತಿಯೊಂದು ಮಗುವೂ ಮುಂಬೈ ಪರ ಆಡಲು ಬಯಸುತ್ತದೆ ಎಂದಿದ್ದಾರೆ.
ಮುಂದವರೆದು ಮಾತನಾಡಿದ ಅಯ್ಯರ್, ‘ನಾನು ಯಾರ ವಿರುದ್ಧ ಆಡಿದ್ದರೂ, ನನ್ನ ಮನಸ್ಥಿತಿ ಯಾವಾಗಲೂ ಗೆಲ್ಲುವುದೇ ಆಗಿದೆ, ಅದು ಕಲಿಯುವುದಾಗಲಿ ಅಥವಾ ಗೆಲ್ಲುವುದಾಗಲಿ. ಆದ್ದರಿಂದ ಕಲಿಯುವುದು ಅಥವಾ ಗೆಲ್ಲುವುದು ಗೌಣ, ಆದರೆ ನೀವು ಆಟವನ್ನು ಹೆಚ್ಚು ಆನಂದಿಸುತ್ತೀರಿ. ನೀವು ಹೆಚ್ಚು ಸ್ಪರ್ಧಾತ್ಮಕವಾಗಿ ಬೆಳೆದಷ್ಟೂ, ವಿಶೇಷವಾಗಿ ಕ್ರಿಕೆಟ್ ಅಥವಾ ಯಾವುದೇ ಇತರ ಕ್ರೀಡೆಯನ್ನು ಆಡುವಾಗ, ನೀವು ಸಾಕಷ್ಟು ಕಲಿಯುತ್ತೀರಿ. ಅದು ನಿಮ್ಮನ್ನು ಮುಂದಿನ ಹಂತಕ್ಕೆ ತಳ್ಳುತ್ತದೆ. ಇದರಿಂದ ನೀವು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತೀರಿ. ಈಗ ನನಗೆ ಆ ಜವಾಬ್ದಾರಿ ಸಿಕ್ಕಿರುವುದರಿಂದ, ಅದು ನನಗೊಂದು ಒಂದು ದೊಡ್ಡ ಸವಾಲು ಎಂದಿದ್ದಾರೆ.
ಶ್ರೇಯಸ್ ಅಯ್ಯರ್ಗೆ ಟಿ20 ತಂಡದ ನಾಯಕತ್ವ; ಯಾರಿಗೆ ಸಿಗಲಿದೆ ಉಪನಾಯಕತ್ವ?
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಜೂನ್ 26 ರಿಂದ ಐರ್ಲೆಂಡ್ ವಿರುದ್ಧದ ಟಿ20 ಸರಣಿ ನಡೆದರೆ, ಆ ಬಳಿಕ ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಈ ಎರಡು ಸರಣಿಗಳಲ್ಲಿ ಶ್ರೇಯಸ್ ಅಯ್ಯರ್ ತಂಡವನ್ನು ಯಾವ ರೀತಿಯಾಗಿ ಮುನ್ನಡೆಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಎರಡು ಸರಣಿಗಳ ಬಳಿಕ ಟೀಂ ಇಂಡಿಯಾ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲಿದೆ. ಅಲ್ಲೂ ಕೂಡ ಶ್ರೇಯಸ್ ತಂಡವನ್ನು ಮುನ್ನಡೆಸಲಿದ್ದಾರೆ.