
ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿದ್ದರೂ ಶ್ರೇಯಸ್ ಅಯ್ಯರ್ (Shreyas Iyer) ಅವರ ಯಶಸ್ವಿ ನಾಯಕತ್ವದ ಬಗ್ಗೆ ಕ್ರಿಕೆಟ್‌ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಳೆದ ವರ್ಷ ಅಯ್ಯರ್ ನಾಯಕತ್ವದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಐಪಿಎಲ್ ಟ್ರೋಫಿ ಗೆದ್ದಿತು. ಆ ನಂತರ ಅಯ್ಯರ್ ಅವರ ನಾಯಕತ್ವದಲ್ಲೇ ಮುಂಬೈ ಕ್ರಿಕೆಟ್ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದಿತು. ಈ ವರ್ಷದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕತ್ವ ವಹಿಸಿಕೊಂಡಿದ್ದ ಅಯ್ಯರ್ 11 ವರ್ಷಗಳ ನಂತರ ತಂಡವನ್ನು ಐಪಿಎಲ್ ಫೈನಲ್‌ಗೆ ಕರೆದೊಯ್ದಿದ್ದರು. ಈ ಬಾರಿ ಅವರು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ದೇಶಾದ್ಯಂತ ಅವರ ನಾಯಕತ್ವವನ್ನು ಶ್ಲಾಘಿಸಲಾಗುತ್ತಿದೆ. ಇದೀಗ ದೇಶೀ ಕ್ರಿಕೆಟ್ನಲ್ಲೂ ಅಯ್ಯರ್ ಅವರ ಮ್ಯಾಜಿಕ್ ಮುಂದುವರೆದಿದ್ದು, ಮುಂಬೈ ಟಿ20 ಲೀಗ್‌ನಲ್ಲಿ ತಮ್ಮ ತಂಡವನ್ನು ಪ್ಲೇಆಫ್‌ಗೆ ಕರೆದೊಯ್ದಿದ್ದಾರೆ.
ಐಪಿಎಲ್ 2025 ರ ಫೈನಲ್‌ನಲ್ಲಿ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆದರೆ ಈ ಸೋಲನ್ನು ತಕ್ಷಣವೇ ಮರೆತು, ಅಯ್ಯರ್ ಮುಂಬೈ ಟಿ20 ಲೀಗ್‌ನಲ್ಲಿ ಸೋಬೊ ಮುಂಬೈ ಫಾಲ್ಕನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ ತಮ್ಮ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ದಿದ್ದಾರೆ. ಈ ಲೀಗ್‌ನ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಅಯ್ಯರ್, ಎರಡನೇ ಪಂದ್ಯದಿಂದ ತಂಡದ ನಾಯಕತ್ವ ವಹಿಸಿಕೊಂಡು ತಂಡದ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಸೀಸನ್ನ ನಾಲ್ಕನೇ ಪಂದ್ಯದಲ್ಲಿ, ಅಯ್ಯರ್ ಅವರ ತಂಡವು ಈಗಲ್ ಥಾಣೆ ಸ್ಟ್ರೈಕರ್ಸ್ ವಿರುದ್ಧ ಸೋಲನ್ನು ಎದುರಿಸಿತ್ತಾದರೂ ಮೂರನೇ ಸ್ಥಾನ ಪಡೆಯುವ ಮೂಲಕ ಪ್ಲೇಆಫ್‌ಗೆ ತಲುಪಿದೆ.
ಐಪಿಎಲ್‌ನ ದೀರ್ಘ ಆಯಾಸದ ಹೊರತಾಗಿಯೂ ಈ ಪಂದ್ಯಾವಳಿಯಲ್ಲಿ ಆಡಲು ಬಂದ ಅಯ್ಯರ್, ಇನ್ನೂ ತಮ್ಮ ಬ್ಯಾಟಿಂಗ್‌ನಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ 17 ಪಂದ್ಯಗಳಲ್ಲಿ ಅತಿ ಹೆಚ್ಚು 604 ರನ್ ಗಳಿಸಿದ್ದ ಅಯ್ಯರ್, ಈ ಲೀಗ್‌ನಲ್ಲಿ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರಾದರೂ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಆದರೆ ಪ್ಲೇಆಫ್‌ನಂತಹ ಪಂದ್ಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಅವರು ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಡಬಹುದು.
IPL 2025: ಶ್ರೇಯಸ್ ನನ್ನ ಕೆನ್ನೆಗೆ ಬಾರಿಸಿದ್ದರೆ ಚೆನ್ನಾಗಿರುತ್ತಿತ್ತು; ನಾಯಕ ಮಾಡಿದ್ದು ಸರಿ ಎಂದ ಶಶಾಂಕ್ ಸಿಂಗ್
ಐಪಿಎಲ್ ಫೈನಲ್‌ನ ವೈಫಲ್ಯವನ್ನು ಮರೆತು ಮುಂಬೈ ಟಿ20ಯಲ್ಲಿ ಅಯ್ಯರ್ ಪ್ರಶಸ್ತಿ ಯಶಸ್ಸನ್ನು ಸಾಧಿಸುತ್ತಾರೋ ಇಲ್ಲವೋ ಎಂಬುದರ ಮೇಲೆ ಈಗ ಎಲ್ಲರ ಕಣ್ಣುಗಳಿವೆ. ಇದರ ನಡುವೆ ಬಿಸಿಸಿಐ ಅಧಿಕಾರಿಗಳು ಈಗ ಅಯ್ಯರ್ ಅವರನ್ನು ಟೀಂ ಇಂಡಿಯಾದ ನಿಯಮಿತ ಓವರ್ಗಳ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲು ಚಿಂತಿಸುತ್ತಿದ್ದಾರೆ. ಐಪಿಎಲ್ ಮತ್ತು ಅದಕ್ಕೂ ಹಿಂದಿನ ಉಳಿದ ಪಂದ್ಯಾವಳಿಗಳಲ್ಲಿ ಅಯ್ಯರ್ ಅವರ ನಾಯಕತ್ವದ ಸಾಮರ್ಥ್ಯದಿಂದ ಬಿಸಿಸಿಐ ಅಧಿಕಾರಿಗಳು ಪ್ರಭಾವಿತರಾಗಿದ್ದು, ಭವಿಷ್ಯದಲ್ಲಿ ಟೀಂ ಇಂಡಿಯಾದ ಏಕದಿನ ಮತ್ತು ಟಿ20 ತಂಡದ ನಾಯಕತ್ವದ ಸ್ಪರ್ಧಿಗಳಲ್ಲಿ ಅವರನ್ನು ಪರಿಗಣಿಸುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ