
ಬೆಂಗಳೂರು (ಮೇ. 17): ಒಂದೆಡೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಐಪಿಎಲ್ 2025 ರಲ್ಲಿ (IPL 2025) ಪ್ರಾಬಲ್ಯ ಸಾಧಿಸುತ್ತಿದ್ದರೆ, ಮತ್ತೊಂದೆಡೆ ಅವರ ಬಗ್ಗೆ ಬೇಸರದ ಸುದ್ದಿ ಹೊರಬಿದ್ದಿದೆ. ಶ್ರೇಯಸ್ ಅಯ್ಯರ್ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದಿಲ್ಲ ಎಂಬ ವರದಿಗಳಿವೆ. ಬಿಸಿಸಿಐ ಮೂಲಗಳ ಪ್ರಕಾರ, ಶ್ರೇಯಸ್ ಅಯ್ಯರ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗುವುದಿಲ್ಲ. ಅಲ್ಲದೆ ಅವರಿಗೆ ಭಾರತ-ಎ ತಂಡದಲ್ಲೂ ಸ್ಥಾನ ಸಿಗುವುದಿಲ್ಲ. ಭಾರತಕ್ಕಾಗಿ ಮೂರು ಸ್ವರೂಪಗಳನ್ನು ಆಡಿರುವ ಇಂತಹ ಮಹಾನ್ ಬ್ಯಾಟ್ಸ್‌ಮನ್‌ನನ್ನು ಟೀಮ್ ಇಂಡಿಯಾ ಮತ್ತು ಬಿಸಿಸಿಐ ಈ ಬಾರಿ ಕೈಬಿಡಲು ಮುಂದಾಗಿದೆ ಎನ್ನಲಾಗಿದೆ.
ದಿ ಟೆಲಿಗ್ರಾಫ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಶ್ರೇಯಸ್ ಅಯ್ಯರ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದಕ್ಕೆ ಕಾರಣವನ್ನೂ ನೀಡಲಾಗಿದ್ದು, ಅವರು ಇನ್ನೂ ತಮ್ಮ ಕೆಂಪು ಚೆಂಡಿನ ಆಟದಲ್ಲಿ ಕೆಲಸ ಮಾಡಬೇಕಾಗಿದೆ. ಅಯ್ಯರ್ ಏಕದಿನ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಆದರೆ ಟೆಸ್ಟ್ ಕ್ರಿಕೆಟ್ ಬೇರೆಯದೇ ಆಟ. ಇಂಗ್ಲೆಂಡ್‌ನಲ್ಲಿ ಶಾರ್ಟ್ ಬಾಲ್ ಅಷ್ಟು ದೊಡ್ಡ ಸಮಸ್ಯೆಯಲ್ಲ ಆದರೆ ಚೆಂಡು ಅಲ್ಲಿ ಸ್ವಿಂಗ್ ಆಗುತ್ತದೆ, ಆದ್ದರಿಂದ ಚೆಂಡನ್ನು ಬಿಡುವುದು ಬಹಳ ಮುಖ್ಯ. ಅಯ್ಯರ್ ಆಕ್ರಮಣಕಾರಿ ಆಟಗಾರ ಮತ್ತು ಅವರು ವೇಗವಾಗಿ ರನ್ ಗಳಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಇಂಗ್ಲೆಂಡ್‌ನಲ್ಲಿ ಅವರಿಗೆ ಸಮಸ್ಯೆ ಆಗಬಹುದು ಎಂದು ಹೇಳಲಾಗಿದೆ.
ಶ್ರೇಯಸ್ ಅಯ್ಯರ್ ಇದುವರೆಗೆ ಟೀಮ್ ಇಂಡಿಯಾ ಪರ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಆಟಗಾರ 36.86 ಸರಾಸರಿಯಲ್ಲಿ 811 ರನ್ ಗಳಿಸಿದ್ದಾರೆ. ಅಯ್ಯರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಫಾರ್ಮ್ ಬಗ್ಗೆ ಹೇಳುವುದಾದರೆ, ಈ ಆಟಗಾರ ಕಳೆದ ರಣಜಿ ಋತುವಿನಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. 2024-25ರ ರಣಜಿ ಟ್ರೋಫಿ ಋತುವಿನಲ್ಲಿ ಮುಂಬೈ ಪರ ಶ್ರೇಯಸ್ ಅಯ್ಯರ್ 5 ಪಂದ್ಯಗಳಲ್ಲಿ 480 ರನ್ ಗಳಿಸಿದ್ದರು. ಅವರ ಸರಾಸರಿ 68 ಕ್ಕಿಂತ ಹೆಚ್ಚು. ಈ ಅವಧಿಯಲ್ಲಿ, ಅಯ್ಯರ್ 2 ಅತ್ಯುತ್ತಮ ಶತಕಗಳನ್ನು ಗಳಿಸಿದರು. ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರವೂ, ಬಿಸಿಸಿಐ ಅಥವಾ ಆಯ್ಕೆದಾರರು ಅಯ್ಯರ್ ಅವರಿಗೆ ಕೆಂಪು ಚೆಂಡಿನ ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ ಎಂದು ಭಾವಿಸುತ್ತ ಎಂಬುದು ಕೆಲವೇ ದಿನಗಳಲ್ಲಿ ತಿಳಿದುಬರಲಿದೆ.
ಈಗಾಗಲೇ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ-ಎ ತಂಡ ಪ್ರಕಟವಾಗಿದೆ. ನಾಯಕತ್ವವನ್ನು ಅನುಭವಿ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್ ಅವರಿಗೆ ವಹಿಸಲಾಗಿದ್ದು, ನಿರೀಕ್ಷೆಯಂತೆ ಕನ್ನಡಿಗ ಕರುಣ್ ನಾಯರ್ಗೆ ಈ ತಂಡದಲ್ಲಿ ಅವಕಾಶ ನೀಡಲಾಗಿದೆ. ಇವರಲ್ಲದೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೂಡ ತಂಡಕ್ಕೆ ಮರಳಿದ್ದಾರೆ.
ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮಾನವ್ ಸುತಾರ್, ಶಮ್ಸ್ ಮುಲಾನಿ, ಮುಕೇಶ್ ಕುಮಾರ್, ಆಕಾಶ್ ದೀಪ್, ರುತುರಾಜ್ ಗಾಯಕ್ವಾಡ್, ಸರ್ಫರಾಜ್ ಖಾನ್, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಹರ್ಷ್ ದುಬೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ