AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ವಿವಾದ ಹುಟ್ಟಿಸಿದ ಗಿಲ್ ಬ್ಯಾಟ್; ಸಚಿನ್- ಕೊಹ್ಲಿಯನ್ನು ನೋಡಿ ಕಲಿ ಎಂದ ಫ್ಯಾನ್ಸ್

Shubman Gill's "Prince" Bat Sparks Controversy: ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಅವರ ಬ್ಯಾಟ್‌ನಲ್ಲಿ "ಪ್ರಿನ್ಸ್" ಎಂಬ ಹೆಸರು ಮುದ್ರಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಚಿನ್ ಮತ್ತು ಕೊಹ್ಲಿ ಅವರಂತೆ ತಮ್ಮ ಬಿರುದನ್ನು ಬ್ಯಾಟ್‌ನಲ್ಲಿ ಪ್ರದರ್ಶಿಸದಿರುವಂತೆ ಅಭಿಮಾನಿಗಳು ಗಿಲ್ ಅವರನ್ನು ಟೀಕಿಸಿದ್ದಾರೆ.

IND vs ENG: ವಿವಾದ ಹುಟ್ಟಿಸಿದ ಗಿಲ್ ಬ್ಯಾಟ್; ಸಚಿನ್- ಕೊಹ್ಲಿಯನ್ನು ನೋಡಿ ಕಲಿ ಎಂದ ಫ್ಯಾನ್ಸ್
Shubman Gill
ಪೃಥ್ವಿಶಂಕರ
|

Updated on:Jun 12, 2025 | 6:05 PM

Share

ರೋಹಿತ್ ಶರ್ಮಾ (Rohit Sharma) ಅವರ ನಿವೃತ್ತಿಯ ಬಳಿಕ ಭಾರತ ಟೆಸ್ಟ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಯುವ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್‌ಗೆ (Shubman Gill) ಇಂಗ್ಲೆಂಡ್ ಪ್ರವಾಸ ಬಹಳ ಮುಖ್ಯವಾಗಿದೆ. ಏಕೆಂದರೆ ಈ ಪ್ರವಾಸದಲ್ಲಿ ಗಿಲ್, ಯುವ ತಂಡವನ್ನು ಕಟ್ಟಿಕೊಂಡು ಬಲಿಷ್ಠ ಆಂಗ್ಲರನ್ನು ಅವರದ್ದೇ ನೆಲದಲ್ಲಿ ಎದುರಿಸಬೇಕಿದೆ. ರೋಹಿತ್, ಕೊಹ್ಲಿ, ಅಶ್ವಿನ್ ಅನುಪಸ್ಥಿತಿಯಲ್ಲಿ ಗಿಲ್ ಯಾವ ರೀತಿಯಾಗಿ ತಂಡವನ್ನು ಮುನ್ನಡೆಸುತ್ತಾರೆ ಎಂಬುದರ ಮೇಲೆ ಕ್ರಿಕೆಟ್ ಪಂಡಿತರ ಕಣ್ಣಿದೆ. ಆದರೆ ಈ ಸರಣಿಯ ಆರಂಭಕ್ಕೂ ಮುನ್ನ, ಶುಭ್​ಮನ್ ಗಿಲ್ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಶುಭ್​ಮನ್ ಗಿಲ್ ಅವರ ಬ್ಯಾಟ್ ಮೇಲಿರುವ ಅದೊಂದು ಹೆಸರು.

ಗಿಲ್ ನಡೆಗೆ ಫ್ಯಾನ್ಸ್ ಬೇಸರ

ವಾಸ್ತವವಾಗಿ ಶುಭ್​ಮನ್ ಗಿಲ್ ಮಾರ್ಚ್ 2025 ರಲ್ಲಿಯೇ ದೇಶದ ಪ್ರಸಿದ್ಧ ಕಂಪನಿ ಎಂಆರ್‌ಎಫ್‌ ಜೊತೆಗೆ ಬ್ಯಾಟ್ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದರು. ಈ ಕಂಪನಿಯು ಕಳೆದ ಹಲವಾರು ವರ್ಷಗಳಿಂದ ಭಾರತದ ಸ್ಟಾರ್ ಆಟಗಾರರೊಂದಿಗೆ ಪ್ರಾಯೋಜಕತ್ವದ ಒಪ್ಪಂದಗಳನ್ನು ಮಾಡಿಕೊಂಡು ಬರುತ್ತಿದೆ. ಇದರಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯಂತಹ ಆಟಗಾರರು ಸೇರಿದ್ದಾರೆ. ಇದೀಗ ಇವರುಗಳ ಪಟ್ಟಿಗೆ ಭಾರತ ಟೆಸ್ಟ್ ತಂಡದ ನೂತನ ನಾಯಕ ಶುಭ್​ಮನ್ ಗಿಲ್ ಕೂಡ ಸೇರಿದ್ದು, ಇತ್ತೀಚೆಗಷ್ಟೇ ತಮ್ಮ ಬ್ಯಾಟ್ ಹಿಡಿದು ಫೋಟೋಗೆ ಪೋಸ್ ನೀಡಿದ್ದರು. ಇದೀಗ ಗಿಲ್​ ತಮ್ಮ ಬ್ಯಾಟ್‌ ಮೇಲೆ ‘ಪ್ರಿನ್ಸ್’ ಎಂದು ಬರೆಯಿಸಿಕೊಂಡಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ದಿಗ್ಗಜರನ್ನು ನೋಡಿ ಕಲಿ

ಅಷ್ಟಕ್ಕೂ ಗಿಲ್ ತಮ್ಮ ಬ್ಯಾಟ್ ಮೇಲೆ ಪ್ರಿನ್ಸ್ ಎಂದು ಬೇರೆ ಯಾರದ್ದೋ ಹೆಸರನ್ನು ಬರೆಸಿಕೊಂಡಿಲ್ಲ. ಬದಲಿಗೆ ಅವರನ್ನು ಭಾರತ ಕ್ರಿಕೆಟ್​ನ ಪ್ರಿನ್ಸ್ ಎಂದು ಕರೆಯಲಾಗುತ್ತದೆ. ಅಭಿಮಾನಿಗಳೇ ಗಿಲ್ ಅವರಿಗೆ ಈ ಬಿರುದು ನೀಡಿದ್ದಾರೆ. ಆದರೆ ಈ ಬಿರುದನ್ನು ನೀಡಿದ ಅಭಿಮಾನಿಗಳಿಗೆ ಗಿಲ್ ಅವರ ಈ ನಡೆ ಇಷ್ಟವಾಗಿಲ್ಲ. ಅಭಿಮಾನಿಗಳು ಅವರನ್ನು ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಸುವ ಮೂಲಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಏಕೆಂದರೆ ಸಚಿನ್ ತೆಂಡೂಲ್ಕರ್ ಅವರಿಗೆ ಕ್ರಿಕೆಟ್ ದೇವರು ಎಂದು ಹಾಗೂ ವಿರಾಟ್ ಕೊಹ್ಲಿಗೆ ಕಿಂಗ್ ಎಂದು ಬಿರುದು ನೀಡಿದ್ದರಾದರೂ ಈ ಇಬ್ಬರು ಆಟಗಾರರು ಎಂದಿಗೂ ತಮ್ಮ ಬ್ಯಾಟ್‌ಗಳ ಮೇಲೆ ಅಂತಹ ಬಿರುದುಗಳನ್ನು ಬರೆಸಿಕೊಂಡಿರಲಿಲ್ಲ.

IND vs ENG: ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಗಿಲ್, ಗಂಭೀರ್ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಇಲ್ಲಿದೆ

ಇದನ್ನು ಗಿಲ್​ಗೆ ನೆನಪಿಸಿರುವ ಫ್ಯಾನ್ಸ್, ಸಚಿನ್ ಎಂದಿಗೂ ತಮ್ಮ ಬ್ಯಾಟ್ ಮೇಲೆ ಗಾಡ್ ಆಫ್ ಕ್ರಿಕೆಟ್ ಎಂದು ಬರೆಸಿಕೊಳ್ಳಲಿಲ್ಲ. ಇತ್ತ ವಿರಾಟ್ ಕೊಹ್ಲಿ ಕೂಡ ತಮ್ಮ ಬ್ಯಾಟ್‌ ಮೇಲೆ ಕಿಂಗ್ ಎಂದು ಬರೆಸಿಕೊಂಡಿರಲಿಲ್ಲ. ಇದು ಆಟದ ಬಗೆಗಿನ ಅವರ ನಮ್ರತೆ ಮತ್ತು ಸಮರ್ಪಣೆಯನ್ನು ತೋರಿಸುತ್ತದೆ ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಗಿಲ್​ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಾಸ್ತವವಾಗಿ ಐಪಿಎಲ್ ಮಧ್ಯದಲ್ಲಿ ಪ್ರಿನ್ಸ್ ಎಂಬ ಹೆಸರು ಗಿಲ್ ಅವರ ಬ್ಯಾಟ್‌ನಲ್ಲಿ ಮೊದಲು ಕಾಣಿಸಿಕೊಂಡಿತ್ತು, ಆದರೆ ಆಗ ಯಾರೂ ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ. ಇದೀಗ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಗಿಲ್ ಈ ರೀತಿಯ ಶೋಕಿಯನ್ನು ಬಿಟ್ಟು ಆಟದ ಮೇಲೆ ಗಮನ ಕೊಡಲಿ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಆದಾಗ್ಯೂ, ಪ್ರಿನ್ಸ್ ಎಂಬ ಹೆಸರನ್ನು ಬ್ಯಾಟ್ ಮೇಲೆ ಮುದ್ರಿಸಲು ಗಿಲ್ ಅವರೇ ಸೂಚಿಸಿದ್ದಾರೋ ಅಥವಾ ಅದು MRF ನ ತಂತ್ರವೋ ಎಂಬುದು ಸ್ಪಷ್ಟವಾಗಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Thu, 12 June 25