
ನಾಯಕನಾಗಿ ಕ್ರಿಕೆಟ್ ಜೀವನವನ್ನು ಸ್ಮರಣೀಯ ರೀತಿಯಲ್ಲಿ ಆರಂಭಿಸಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗ ಕನಸಾಗಿರುತ್ತದೆ. ಅಂತಹದರಲ್ಲಿ ನಾಯಕತ್ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಶತಕದ ಇನ್ನಿಂಗ್ಸ್ ಆಡಿದರೆ ಹೇಗಿರಬೇಡ ಹೇಳಿ. ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ (Shubman Gill) ಕೂಡ ಇಂತಹದೊಂದು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತ ಟೆಸ್ಟ್ ತಂಡದ ಖಾಯಂ ನಾಯಕತ್ವವಹಿಸಿಕೊಂಡಿರುವ ಶುಭ್ಮನ್ ಗಿಲ್ ಶತಕ ಸಿಡಿಸಿ ಮಿಂಚಿದ್ದಾರೆ. ನಾಯಕತ್ವವಹಿಸಿಕೊಂಡ ಮೊದಲ ಪಂದ್ಯದಲ್ಲೇ ಶತಕ ಬಾರಿಸಿರುವ ಗಿಲ್ ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ 140 ಎಸೆತಗಳನ್ನು ತೆಗೆದುಕೊಂಡ ಗಿಲ್, 14 ಬೌಂಡರಿ ಬಾರಿಸಿದರು. ಅಲ್ಲದೆ ಬೌಂಡರಿ ಬಾರಿಸುವ ಮೂಲಕವೇ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ಟೆಸ್ಟ್ ಪಂದ್ಯದ ಮೊದಲ ದಿನದಂದು ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ವೃತ್ತಿಜೀವನದ ಆರನೇ ಶತಕ ಬಾರಿಸಿದ ಗಿಲ್, ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಕೆಲವೇ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದರು.
ವಾಸ್ತವವಾಗಿ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಈ ಮೊದಲ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಗಿಲ್ ಮೇಲೆ ಇದ್ದವು. ಏಕೆಂದರೆ ಇದಕ್ಕೂ ಮೊದಲು, ಇಂಗ್ಲೆಂಡ್ ಸೇರಿದಂತೆ ಏಷ್ಯಾದ ಹೊರಗಿನ ದೇಶಗಳಲ್ಲಿ ಅವರ ಟೆಸ್ಟ್ ದಾಖಲೆ ತುಂಬಾ ಕಳಪೆಯಾಗಿತ್ತು. ಇದರಿಂದಾಗಿ, ನಾಯಕತ್ವದ ಒತ್ತಡದಲ್ಲಿ ಗಿಲ್ ತನ್ನ ದಾಖಲೆಯನ್ನು ಸುಧಾರಿಸಬಹುದೇ ಅಥವಾ ಇಲ್ಲವೇ ಎಂದು ಎಲ್ಲರೂ ನೋಡಲು ಬಯಸಿದ್ದರು. ಆದರೆ ಕೇವಲ 25 ನೇ ವಯಸ್ಸಿನಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಗಿಲ್, ಮೊದಲ ದಿನವೇ ಇದಕ್ಕೆ ಸೂಕ್ತ ಉತ್ತರ ನೀಡಿದ್ದಾರೆ.
IND vs ENG: ಆಂಗ್ಲರ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ಮೇಲೆ ಹೇಳಿದಂತೆ ಗಿಲ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಆದಾಗ್ಯೂ ಈ ಪಂದ್ಯದಲ್ಲಿ ಮೊದಲ ಬಾರಿಗೆ 4 ನೇ ಕ್ರಮಾಂಕದಲ್ಲಿ ಅಂದರೆ ಈ ಹಿಂದೆ ವಿರಾಟ್ ಕೊಹ್ಲಿ ಆಡುತ್ತಿದ್ದ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬಂದ ಗಿಲ್, ಇದುವರೆಗೆ ಕೊಹ್ಲಿಯ ಸ್ಥಾನವನ್ನು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಗಿಲ್ ಬ್ಯಾಟಿಂಗ್ನ ವೈಶಿಷ್ಟ್ಯವೆಂದರೆ ನಾಯಕನಾಗಿ ಮೊದಲ ಪಂದ್ಯವನ್ನು ಆಡುತ್ತಿರುವ ಹೊರತಾಗಿಯೂ ಗಿಲ್ ತಮ್ಮ ಬ್ಯಾಟಿಂಗ್ ಸಮಯದಲ್ಲಿ ಒಮ್ಮೆಯೂ ಒತ್ತಡದಲ್ಲಿ ಕಾಣಿಸಿಕೊಂಡಿಲ್ಲ. ಇದು ಮಾತ್ರವಲ್ಲದೆ ನಾಯಕನಾಗಿ ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ಗಿಲ್, ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಭಾರತದ ನಾಲ್ಕನೇ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಗಿಲ್‌ಗಿಂತ ಮೊದಲು ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 pm, Fri, 20 June 25