Smriti Mandhana: ಜೋಸ್ ಬಟ್ಲರ್ ದಾಖಲೆ ಮುರಿದ ಸ್ಮೃತಿ ಮಂಧನಾ
Smriti Mandhana: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್ಮ್ಯಾನ್ 136 ಪಂದ್ಯಗಳಲ್ಲಿ 3620 ರನ್ ಗಳಿಸಿದ್ದಾರೆ.
ಟೀಮ್ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ (Smriti Mandhana) ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಅವರ ವಿಶೇಷ ದಾಖಲೆಯೊಂದು ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಸ್ಮೃತಿ ಮಂಧನಾ 53 ಎಸೆತಗಳಲ್ಲಿ ಅಜೇಯ 79 ರನ್ ಗಳಿಸಿದ್ದರು. ಅಲ್ಲದೆ ಈ ಮೂಲಕ ಟೀಮ್ ಇಂಡಿಯಾಗೆ 8 ವಿಕೆಟ್ಗಳ ಜಯ ತಂದುಕೊಟ್ಟಿದ್ದರು. ಈ ಭರ್ಜರಿ ಇನಿಂಗ್ಸ್ ಫಲವಾಗಿ ಮಂಧನಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.
26 ರ ಹರೆಯದ ಎಡಗೈ ಬ್ಯಾಟರ್ ಸ್ಮೃತಿ ಮಂಧನಾ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸುವ ಮೂಲಕ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅವರನ್ನು ಕೂಡ ಹಿಂದಿಕ್ಕಿದರು. ಅಂದರೆ ಬಟ್ಲರ್ ಟಿ20 ಕ್ರಿಕೆಟ್‌ನಲ್ಲಿ 94 ಪಂದ್ಯಗಳಿಂದ 2227 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 16 ಅರ್ಧ ಶತಕಗಳನ್ನು ಬಾರಿಸಿದ್ದರು. ಇದೀಗ 94 ಪಂದ್ಯಗಳಲ್ಲಿ 17 ಅರ್ಧಶತಕಗಳೊಂದಿಗೆ 2294 ರನ್ಗಳಿಸುವ ಮೂಲಕ ಸ್ಮೃತಿ ಮಂಧನಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಪ್ಲೇಯರ್ಸ್ ಪಟ್ಟಿಯಲ್ಲಿ ಜೋಸ್ ಬಟ್ಲರ್ ಅವರನ್ನು ಹಿಂದಿಕ್ಕಿದ್ದಾರೆ.
ಇನ್ನು ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಟಿ20 ರನ್ ಗಳಿಸಿದ್ದಾರೆ. ಕೌರ್ 131 ಪಂದ್ಯಗಳಲ್ಲಿ 28ರ ಸರಾಸರಿಯಲ್ಲಿ 2597 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 8 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ ನಂತರ, ಮಾಜಿ ಟೀಮ್ ಇಂಡಿಯಾ ಆಟಗಾರ್ತಿ ಮಿಥಾಲಿ ರಾಜ್ ಅವರಿದ್ದು, ಮಿಥಾಲಿ 89 ಪಂದ್ಯಗಳಲ್ಲಿ 17 ಅರ್ಧಶತಕಗಳ ನೆರವಿನಿಂದ ಒಟ್ಟು 2364 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇದುವರೆಗೆ ಕೇವಲ 14 ಆಟಗಾರ್ತಿಯರು ಮಾತ್ರ 2000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಹಿಟ್ಮ್ಯಾನ್ 136 ಪಂದ್ಯಗಳಲ್ಲಿ 3620 ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ಕಿಂಗ್ ಕೊಹ್ಲಿ 104 ಪಂದ್ಯಗಳಲ್ಲಿ 3584 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹರ್ಮನ್‌ಪ್ರೀತ್ ಕೌರ್, ಮಿಥಾಲಿ ರಾಜ್ ಮತ್ತು ಸ್ಮೃತಿ ಮಂಧನಾ ಹೊರತುಪಡಿಸಿ, ಯಾವುದೇ ಭಾರತೀಯ ಬ್ಯಾಟ್ಸ್‌ಮನ್‌ಗಳು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2000 ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ ಎಂಬುದು ವಿಶೇಷ.