IND vs SL: 2 ಪಂದ್ಯಗಳಲ್ಲಿ 3ನೇ ಶತಕ; ಭಾರತವನ್ನು ಕಾಡಿದ ಸೋನಲ್ ಸುನಾಮಿ

Sonal Dinusha centuries: ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಯುವ ಬ್ಯಾಟರ್ ಸೋನಲ್ ದಿನುಷಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಶತಕ ಹಾಗೂ 80 ರನ್ ಗಳಿಸಿದ ದಿನುಷಾ, ಎರಡನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ ಲಂಕಾ ತಂಡಕ್ಕೆ ನಿಜವಾದ ಹೋರಾಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಸರಣಿಯಲ್ಲಿ ಶತಕಗಳ ಮಳೆ ಸುರಿಸಿರುವ ಅವರು, ಶ್ರೀಲಂಕಾ ಕ್ರಿಕೆಟ್‌ನ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಭಾರತ ಸರಣಿ ಗೆಲ್ಲುವ ಸನಿಹದಲ್ಲಿದ್ದರೂ, ದಿನುಷಾ ಲಂಕಾಗೆ ಹೊಸ ಭರವಸೆ ಮೂಡಿಸಿದ್ದಾರೆ.

IND vs SL: 2 ಪಂದ್ಯಗಳಲ್ಲಿ 3ನೇ ಶತಕ; ಭಾರತವನ್ನು ಕಾಡಿದ ಸೋನಲ್ ಸುನಾಮಿ
Sonal Dinusha

Updated on: Aug 27, 2026 | 4:42 PM

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ರೋಚಕತೆ ಸೃಷ್ಟಿಸಿದೆ. ಸೋಲಿನಿಂದ ಪಾರಾಗಲು ಶ್ರೀಲಂಕಾ ಸಕಲ ಹೋರಾಟ ನಡೆಸುತ್ತಿದೆ. ಇತ್ತ ಈ ಪಂದ್ಯ ಡ್ರಾದಲ್ಲಿ ಅಂತ್ಯವಾದರೂ ಟೀಂ ಇಂಡಿಯಾ 1-0 ಅಂತರದಿಂದ ಸರಣಿಯನ್ನು ಗೆದ್ದುಕೊಳ್ಳಲಿದೆ. ಇತ್ತ ತವರು ಸರಣಿಯನ್ನು ಶ್ರೀಲಂಕಾ ಸೋತಿರಬಹುದು. ಆದರೆ ಲಂಕಾ ತಂಡಕ್ಕೆ ಒಬ್ಬ ನಿಜವಾದ ಹೋರಾಟಗಾರ ಸಿಕ್ಕಿದ್ದಾನೆ. ಇಡೀ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕಾಡಿದ ಲಂಕಾದ ಏಕೈಕ ಆಟಗಾರನೆಂದರೆ ಅದು ಯುವ ಬ್ಯಾಟರ್ ಸೋನಲ್ ದಿನುಷಾ (Sonal Dinusha). ಈ ಸರಣಿಯಲ್ಲಿ ಶತಕಗಳ ಮಳೆ ಸುರಿಸಿರುವ ದಿನುಷಾ ಲಂಕಾ ಕ್ರಿಕೆಟ್​ನ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ.

2 ಪಂದ್ಯಗಳಲ್ಲಿ 3ನೇ ಶತಕ

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಮೊದಲ ಶತಕ ಬಾರಿಸಿದ್ದ ದಿನುಷಾ ಎರಡನೇ ಇನ್ನಿಂಗ್ಸ್​ನಲ್ಲಿ 80 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿಯೂ ಶತಕ ಬಾರಿಸುವ ಮೂಲಕ ಲಂಕಾ ಪರ ಸ್ಮರಣೀಯ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಶ್ರೀಲಂಕಾ ಪರ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಮಾಡಿದ್ದಾರೆ.

ಬಾಲಂಗೋಚಿಗಳ ನೆರವು

4ನೇ ದಿನದಾಟದಂತ್ಯಕ್ಕೆ 6 ವಿಕೆಟ್​ಗಳನ್ನು ಕಳೆದುಕೊಂಡು 229 ರನ್ ಕಲೆಹಾಕಿದ್ದ ಶ್ರೀಲಂಕಾ ತಂಡ 16 ರನ್​ಗಳ ಮುನ್ನಡೆಯೊಂದಿಗೆ ಐದನೇ ದಿನದಾಟವನ್ನು ಆರಂಭಿಸಿತು. ಕೇವಲ ನಾಲ್ಕು ವಿಕೆಟ್​ಗಳು ಬಾಕಿ ಇದ್ದ ಕಾರಣ ಟೀಂ ಇಂಡಿಯಾ ಉಳಿದ ವಿಕೆಟ್‌ಗಳನ್ನು ಬೇಗನೆ ಪಡೆದುಕೊಂಡು ಪಂದ್ಯವನ್ನು ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ ಸೋನಲ್ ದಿನುಷಾ ಭಾರತದ ಭರವಸೆಯನ್ನು ಹುಸಿಗೊಳಿಸಿದರು. ಕೇವಲ ಏಳು ರನ್‌ಗಳೊಂದಿಗೆ ದಿನವನ್ನು ಪ್ರಾರಂಭಿಸಿದ್ದ ಸೋನಲ್ ದಿನುಷಾ ಇಡೀ ದಿನ ಬ್ಯಾಟಿಂಗ್ ಮಾಡಿದರು. ಮೊದಲಿಗೆ ಕೇಸರ ನುವಂತಾ ಬೆಂಬಲ ಪಡೆದ ದಿನುಷಾ ತಮ್ಮ ಅರ್ಧಶತಕವನ್ನು ಪೂರೈಸಿದರೆ, ಆ ಬಳಿಕ ಪ್ರಭಾತ್ ಜಯಸೂರ್ಯ ಮತ್ತು ಲಹಿರು ಕುಮಾರ ಅವರ ಬೆಂಬಲದಿಂದ ಶತಕ ಬಾರಿಸಿದರು.

ಶ್ರೀಲಂಕಾದ ಮೂರನೇ ಬ್ಯಾಟರ್

ಈ ಶತಕದೊಂದಿಗೆ, ಸೋನಲ್ ದಿನುಷಾ ಎರಡು ಟೆಸ್ಟ್ ಸರಣಿಯಲ್ಲಿ ಮೂರು ಶತಕಗಳನ್ನು ಬಾರಿಸಿದ ಮೂರನೇ ಶ್ರೀಲಂಕಾದ ಬ್ಯಾಟ್ಸ್‌ಮನ್ ಎನಿಸಿಕೊಂಡರು. 2013 ರಲ್ಲಿ, ಕುಮಾರ್ ಸಂಗಕ್ಕಾರ ಬಾಂಗ್ಲಾದೇಶ ವಿರುದ್ಧ ಮೂರು ಶತಕಗಳನ್ನು ಬಾರಿಸಿ ಈ ಸಾಧನೆ ಮಾಡಿದ ಎರಡನೇ ಲಂಕಾ ಬ್ಯಾಟರ್ ಎನಿಸಿಕೊಂಡಿದ್ದರು. ಅವರಿಗಿಂತ ಮೊದಲು, ಅರವಿಂದ ಡಿ ಸಿಲ್ವಾ 1997 ರಲ್ಲಿ ಪಾಕಿಸ್ತಾನ ಮತ್ತು ಭಾರತದ ವಿರುದ್ಧ ಎರಡು ಬಾರಿ ಈ ಸಾಧನೆ ಮಾಡಿದ್ದರು. ಇದಲ್ಲದೆ, ದಿನುಷಾ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಸಿಡಿಸಿದ ಎಂಟನೇ ಶ್ರೀಲಂಕಾದ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Thu, 27 August 26

Loading...
Unable to load recommendations.
Follow Us