
ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ಸಾಗಿದೆ. ಡರ್ಬನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ 390 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ತನ್ನ ಮೊದಲ ಇನಿಂಗ್ಸ್ ಆಡಿದ ಸೌತ್ ಆಫ್ರಿಕಾ ತಂಡವು ಆಸೀಸ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 284 ರನ್‌ಗಳಿಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್‌ನಲ್ಲಿ 109 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದ ಆಸ್ಟ್ರೇಲಿಯಾ ತಂಡದ ಪರ ದ್ವಿತೀಯ ಇನಿಂಗ್ಸ್‌ನಲ್ಲೂ ಮ್ಯಾಟ್ ರೆನ್‌ಶಾ (82) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 314 ರನ್ ಪೇರಿಸಿ ಡಿಕ್ಲೇರ್ ಘೋಷಿಸಿದೆ.
ಮೊದಲ ಇನಿಂಗ್ಸ್ಲ್ಲಿ 109 ರನ್‌ಗಳ ಹಿನ್ನಡೆಯೊಂದಿಗೆ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್‌ನಲ್ಲಿ ಬರೋಬ್ಬರಿ 421 ರನ್‌ಗಳ ಗುರಿ ಪಡೆದುಕೊಂಡಿದೆ. ಈ ಬೃಹತ್ ಟಾರ್ಗೆಟ್ ಅನ್ನು ಬೆನ್ನತ್ತಿರುವ ಆಫ್ರಿಕನ್ ಪಡೆ ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 102 ರನ್ಗಳನ್ನು ಕಲೆಹಾಕಿದೆ.
ಇದೀಗ ಪಂದ್ಯವು ಕುತೂಹಲಕಾರಿ ಐದನೇ ದಿನದಾಟಕ್ಕೆ ಕಾಲಿಟ್ಟಿದ್ದು, ಅಂತಿಮ ದಿನ ಸೌತ್ ಆಫ್ರಿಕಾ ತಂಡ ಗೆಲ್ಲಲು ಇನ್ನು 319 ರನ್ ಕಲೆಹಾಕಬೇಕಿದೆ. ಅತ್ತ ಆಸ್ಟ್ರೇಲಿಯಾ ತಂಡ ಜಯಭೇರಿ ಬಾರಿಸಲು ಇನ್ನು ಕೇವಲ 6 ವಿಕೆಟ್‌ಗಳನ್ನು ಕಬಳಿಸಬೇಕಾಗಿದೆ. ಸದ್ಯ ಕ್ರೀಸ್‌ನಲ್ಲಿ ಐಡೆನ್ ಮಾರ್ಕ್ರಾಮ್ (45) ಹಾಗೂ ವಿಯಾನ್ ಮುಲ್ಡರ್ (5) ಬ್ಯಾಟಿಂಗ್ ಮಾಡುತ್ತಿದ್ದು, ಅಂತಿಮ ದಿನದಾಟದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕಲ್ಟನ್ , ಡೇವಿಡ್ ಬೆಡಿಂಗ್ಹ್ಯಾಮ್ ,
ಟೆಂಬಾ ಬವುಮಾ (ನಾಯಕ) , ಟ್ರಿಸ್ಟನ್ ಸ್ಟಬ್ಸ್ , ವಿಯಾನ್ ಮುಲ್ಡರ್ , ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್ ,
ಸೈಮನ್ ಹಾರ್ಮರ್ , ಕೇಶವ ಮಹಾರಾಜ್ , ಅನ್ರಿಕ್ ನೋಕಿಯ.
ಇದನ್ನೂ ಓದಿ: ಅಬ್ಬರಿಸಿದ ಯುವ ಪಡೆ: ಪಾಕಿಸ್ತಾನ್ ತಂಡಕ್ಕೆ ದಾಖಲೆಯ ಗೆಲುವು!
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ನಿಕ್ ಮ್ಯಾಡಿನ್ಸನ್ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ ,
ಮ್ಯಾಟ್ ರೆನ್‌ಶಾ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ ,
ನಾಥನ್ ಲಿಯಾನ್ , ಜೋಶ್ ಹೇಝಲ್‌ವುಡ್.