
2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಶ್ರೀಲಂಕಾ ಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದೋಹಾದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡವನ್ನು ಒಂದು ವಿಕೆಟ್ನಿಂದ ಮಣಿಸಿದ ಶ್ರೀಲಂಕಾ, ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಮೂಲಕ ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಪಾಕಿಸ್ತಾನದ ಗೆಲುವಿನ ಓಟಕ್ಕೂ ಬ್ರೇಕ್ ಹಾಕಿದೆ. ಇದಕ್ಕೂ ಮೊದಲು ಶ್ರೀಲಂಕಾ ಎ ತಂಡ 2017 ಮತ್ತು 2018ರಲ್ಲಿ ಪ್ರಶಸ್ತಿ ಗೆದ್ದಿತ್ತು. ಇದೀಗ 2026ರಲ್ಲೂ ಚಾಂಪಿಯನ್ ಆಗುವ ಮೂಲಕ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆದಿದೆ. ಇನ್ನು ಪಾಕಿಸ್ತಾನ ಎ ತಂಡ ಈವರೆಗೆ ಮೂರು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಹೊಂದಿದೆ.
ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಪರ ನಿಶಾನ್ ಮದುಷ್ಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 87 ರನ್ ಸಿಡಿಸಿದ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ಗಳನ್ನು ಬಾರಿಸಿದರು. ನಾಯಕ ಪವನ್ ರತ್ನಾಯಕೆ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ ಶ್ರೀಲಂಕಾ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ನಿಶಾನ್ ಮದುಷ್ಕ ಔಟಾದ ಬಳಿಕ ಪಂದ್ಯದ ಚಿತ್ರಣವೇ ಬದಲಾಯಿತು. ಸತತವಾಗಿ ವಿಕೆಟ್ ಕಳೆದುಕೊಂಡ ಶ್ರೀಲಂಕಾ 198 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು.
ಈ ಹಂತದಲ್ಲಿ ಪಾಕಿಸ್ತಾನದ ಗೆಲುವು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಕೊನೆಯ ವಿಕೆಟ್ಗೆ ಜೊತೆಯಾದ ಲಹಿರು ಸಮರಕೂನ್ ಮತ್ತು ಗರುಕ ಸಂಕೇತ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇಬ್ಬರೂ 22 ರನ್ಗಳ ನಿರ್ಣಾಯಕ ಜೊತೆಯಾಟವಾಡುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಲಹಿರು 15 ರನ್ ಗಳಿಸಿ ಅಜೇಯರಾಗುಳಿದರೆ, ಗರುಕ ಸಂಕೇತ್ 4 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ನವೆಂಬರ್ 29ರಂದು ಕತಾರ್ನ ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಎ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಶ್ರೀಲಂಕಾ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಪಾಕಿಸ್ತಾನ, ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 216 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನ ಪರ ಶಹಜೈಬ್ ಖಾನ್ 91 ಎಸೆತಗಳಲ್ಲಿ 60 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶಮಿಲ್ ಹುಸೇನ್ 40, ನಾಯಕ ಅಬ್ದುಲ್ ಸಮದ್ 33 ಹಾಗೂ ರೋಹೆಲ್ ನಜೀರ್ 37 ರನ್ ಗಳಿಸಿದರು. ಸುಫ್ಯಾನ್ ಮುಖೀಮ್ 16 ರನ್ ಗಳಿಸಿ ಅಜೇಯರಾಗುಳಿದರು.
ಪಾಕಿಸ್ತಾನ ಆರಂಭದಲ್ಲೇ ಮಜ್ ಸದಾಕತ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಶಮಿಲ್ ಹುಸೇನ್ ಹಾಗೂ ಶಹಜೈಬ್ ಖಾನ್ ಎರಡನೇ ವಿಕೆಟ್ಗೆ 48 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಶಮಿಲ್ ಔಟಾದ ಬಳಿಕ ಹಸನ್ ನವಾಜ್ ಕೂಡ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಂತರ ಶಹಜೈಬ್ ಖಾನ್ ಹಾಗೂ ನಾಯಕ ಅಬ್ದುಲ್ ಸಮದ್ 52 ರನ್ಗಳ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಪಾಕಿಸ್ತಾನದ ರನ್ ವೇಗಕ್ಕೆ ಕಡಿವಾಣ ಬಿತ್ತು. ಕೊನೆಯಲ್ಲಿ ರೋಹೆಲ್ ನಜೀರ್ 43 ಎಸೆತಗಳಲ್ಲಿ 37 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಶ್ರೀಲಂಕಾ ಪರ ರವಿಂದು ಫರ್ನಾಂಡೊ ಹಾಗೂ ಗರುಕ ಸಂಕೇತ್ ತಲಾ ಮೂರು ವಿಕೆಟ್ ಕಬಳಿಸಿದರು. ವನುಜಾ ಸಹನಾ ಎರಡು ವಿಕೆಟ್ ಪಡೆದು ಮಿಂಚಿದರು.