349 ರನ್ ಬಾರಿಸಿಯೂ ಅಫ್ಘನ್ ವಿರುದ್ಧ ಸೋತ ಟೀಂ ಇಂಡಿಯಾ
India A Loses to Afghanistan A: ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಎ ತಂಡ ಅಫ್ಘಾನಿಸ್ತಾನ ಎ ವಿರುದ್ಧ ಸೋತಿದೆ. ಭಾರತ 349 ರನ್ ಗಳಿಸಿದರೂ, ಮಳೆ ಅಡ್ಡಿಪಡಿಸಿದ ಕಾರಣ ಡಕ್ವರ್ತ್ ಲೂಯಿಸ್ ನಿಯಮದನ್ವಯ ಅಫ್ಘಾನಿಸ್ತಾನ ಎ ತಂಡವನ್ನು ವಿಜೇತರೆಂದು ಘೋಷಿಸಲಾಯಿತು. ಪ್ರಭ್ಸಿಮ್ರಾನ್ ಸಿಂಗ್, ರುತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಳೆಪೀಡಿತ ಪಂದ್ಯದಲ್ಲಿ ವ್ಯರ್ಥವಾಯಿತು.

ತ್ರಿಕೋನ ಏಕದಿನ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ (Sri Lanka Triangular Series) ಭಾರತ ಎ ತಂಡ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ತಂಡವನ್ನು ಎದುರಿಸಿದ್ದ ಭಾರತ ಎ ಪಡೆ ( Afghanistan A vs India A) 349 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿದ ಹೊರತಾಗಿಯೂ ಸೋಲಿಗೆ ಕೊರಳೊಡ್ಡಬೇಕಾಯಿತು. ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಮಳೆ ಪೀಡಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 49 ಓವರ್‌ಗಳಲ್ಲಿ 349 ರನ್ ಕಲೆಹಾಕಿತು. ಆದರೆ ಅಫ್ಘನ್ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಮಳೆ ಬಂದ ಕಾರಣ ಪಂದ್ಯವನ್ನು 38 ಓವರ್ಗಳಿಗೆ ಸೀಮಿತಗೊಳಿಸಲಾಯಿತು.
38 ಓವರ್‌ಗಳಲ್ಲಿ 294 ರನ್ ಗುರಿ
ಹೀಗಾಗಿ ಅಫ್ಘನ್ ತಂಡಕ್ಕೆ 38 ಓವರ್‌ಗಳಲ್ಲಿ 294 ರನ್ ಗುರಿ ನೀಡಲಾಯಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ ತಂಡ 25.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿದ್ದಾಗ ಮತ್ತೆ ಮಳೆ ಆಟಕ್ಕೆ ಅಡ್ಡಿಪಡಿಸಿತು. ಎಷ್ಟೇ ಕಾದರೂ ಮಳೆ ನಿಲ್ಲದ ಕಾರಣ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಅಂಪೈರ್ಗಳು ಅಫ್ಘಾನಿಸ್ತಾನ ತಂಡವನ್ನು ವಿಜಯಿ ಎಂದು ಘೋಷಿಸಿದರು.
ಭಾರತದ ಭರ್ಜರಿ ಬ್ಯಾಟಿಂಗ್
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ವೈಭವ್ 44 ರನ್ ಗಳಿಸಿದರೆ, ಪ್ರಿಯಾಂಶ್ ಆರ್ಯ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪ್ರಭ್ಸಿಮ್ರಾನ್ ಸಿಂಗ್ 39 ಎಸೆತಗಳಲ್ಲಿ ಅರ್ಧಶತಕ ಗಳಿಸಿ 84 ರನ್ಗಳ ಇನ್ನಿಂಗ್ಸ್ ಆಡಿದರು. ಅದ್ಭುತ ಫಾರ್ಮ್ನಲ್ಲಿರುವ ರುತುರಾಜ್ ಗೈಕ್ವಾಡ್ 65 ಎಸೆತಗಳಲ್ಲಿ ಅರ್ಧಶತಕ ಗಳಿಸಿ 66 ರನ್ ಗಳಿಸಿ ಔಟಾದರು. ಆದರೆ ಆಯುಷ್ ಬದೋನಿ ತಮ್ಮ ಖಾತೆ ತೆರೆಯಲೂ ವಿಫಲರಾದರು. ನಾಯಕ ತಿಲಕ್ ವರ್ಮಾ 60 ಎಸೆತಗಳಲ್ಲಿ ಅರ್ಧಶತಕ ಪೂರೈಸಿ 66 ರನ್ ಗಳಿಸಿ ಔಟಾದರೆ, ವಿಪ್ರಜ್ ನಿಗಮ್ 8 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಇತ್ತ ಅಫ್ಘಾನಿಸ್ತಾನ ಪರ ಅಬ್ದುಲ್ಲಾ ಅಹ್ಮದ್‌ಜೈ 5 ವಿಕೆಟ್‌ಗಳ ಗೊಂಚಲು ಪಡೆದರು.
ಅಫ್ಘನ್ ತಂಡದಿಂದಲೂ ತಕ್ಕ ಹೋರಾಟ
ಮೇಲೆ ಹೇಳಿದಂತೆ ಮಳೆಯಿಂದಾಗಿ ಅಫ್ಘನ್ ತಂಡಕ್ಕೆ 38 ಓವರ್‌ಗಳಲ್ಲಿ 294 ರನ್ಗಳ ಗುರಿ ನಿಗಧಿಪಡಿಸಲಾಯಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ‘ಎ’ ಪರ ನಾಯಕ ಇಮ್ರಾನ್ ಮಿರ್ ಅಜೇಯ 75 ರನ್ ಗಳಿಸಿದರೆ, ಬಹೀರ್ ಶಾ ಅಜೇಯ 51 ರನ್ ಬಾರಿಸಿದರು. ಹಸನ್ ಇಸಾಖಿಲ್ 29 ಎಸೆತಗಳಲ್ಲಿ 34 ರನ್ ಗಳಿಸುವ ಮೂಲಕ ಅಫ್ಘಾನ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಂತಿಮವಾಗಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರಿಂದ ಡಿಎಲ್ಎಸ್ ವಿಧಾನದ ಮೂಲಕ ಅಫ್ಘನ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇತ್ತ ಭಾರತ ಎ ಪರ ಅರ್ಷದ್ ಖಾನ್ ಮತ್ತು ಅನುಕುಲ್ ರಾಯ್ ಮೊದಲ ಎರಡು ವಿಕೆಟ್ ಪಡೆದರು.




