2010 ರಲ್ಲಿ ಸಚಿನ್ ತೆಂಡೂಲ್ಕರ್ ಸೌತ್ ಆಫ್ರಿಕಾ ವಿರುದ್ದ ದ್ವಿಶತಕ ಬಾರಿಸುವ ತನಕ, ಏಕದಿನ ಕ್ರಿಕೆಟ್‌ನಲ್ಲಿ ಡಬಲ್ ಸೆಂಚುರಿ ಸಾಧ್ಯನಾ ಎಂಬ ಪ್ರಶ್ನೆಯೊಂದಿತ್ತು. ಆದರೆ ಸಚಿನ್ ಡಬಲ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಸೆಹ್ವಾಗ್, ರೋಹಿತ್ ಶರ್ಮಾ, ಮಾರ್ಟಿನ್ ಗಪ್ಟಿಲ್, ಫಖರ್ ಝಮಾನ್, ಕ್ರಿಸ್ ಗೇಲ್ ದ್ವಿಶತಕ ಬಾರಿಸಿ ಅಬ್ಬರಿಸಿದ್ದರು. ಇದಾಗ್ಯೂ ಏಕದಿನ ಕ್ರಿಕೆಟ್‌ನಲ್ಲಿ ಯಾರು ಕೂಡ ತ್ರಿಶತಕವನ್ನು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ. ಆದರೀಗ ಏಕದಿನ ಕ್ರಿಕೆಟ್‌ನಲ್ಲಿ ತ್ರಿಪಲ್ ಸೆಂಚುರಿ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ ಆಸ್ಟ್ರೇಲಿಯಾ ಆಟಗಾರ ಸ್ಟೀಫನ್ ನೀರೋ (Steffan Nero). ಅದು ಕೂಡ ಅಂಧರ ಕ್ರಿಕೆಟ್‌ನಲ್ಲಿ ಎಂಬುದು ವಿಶೇಷ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸ್ಟೀಫನ್ ನೀರೋ ತ್ರಿಶತಕ ಬಾರಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.
140 ಎಸೆತಗಳನ್ನು ಎದುರಿಸಿದ್ದ ನೀರೋ 49 ಫೋರ್ ಹಾಗೂ 1 ಸಿಕ್ಸರ್ ನೆರವಿನಿಂದ 309 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಶೇಷ ಎಂದರೆ ನೀರೋ ಅಬ್ಬರದ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿತ 40 ಓವರ್ಗಳಲ್ಲಿ 541 ರನ್ ಕಲೆಹಾಕಿತು. ಇದು ಅಂಧರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆಯಾಗಿದೆ. ಇನ್ನು ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಕೇವಲ 272 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡ 269 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಸ್ಟೀಫನ್ ನೀರೋ ಆಡಿದ ಈ ಇನ್ನಿಂಗ್ಸ್ ಅಂಧರ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವ ದಾಖಲೆಯಾಗಿದೆ. 1998 ರಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಮಸೂದ್ ಜಾನ್ 262 ರನ್ ಗಳಿಸಿದ್ದು, ಇದುವರೆಗಿನ ವಿಶ್ವ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು 309 ರನ್ ಬಾರಿಸುವ ಮೂಲಕ ಸ್ಟೀಫನ್ ನೀರೋ ಹೊಸ ಇತಿಹಾಸ ನಿರ್ಮಿಸಿದ್ದಾರೆ.
A TRIPLE century! Steffan Nero finishes 309* (140) in the Australian Blind Cricket Team’s first ODI against New Zealand ??
That’s his third consecutive century at the #ICIS22 after scores of 113 (46) and 101* (47) earlier this week ? https://t.co/MDTiUnAC1S | #ASportForAll pic.twitter.com/cqv9vBEPW3
— Cricket Australia (@CricketAus) June 14, 2022
ಎಡಗೈ ದಾಂಡಿಗನಾಗಿರುವ ಸ್ಟೀಫನ್ ನಿರೋ ಪ್ರಸ್ತುತ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಅವರು ಸತತವಾಗಿ 3 ಶತಕ ಬಾರಿಸಿದ್ದಾರೆ. ಇದಕ್ಕೂ ಮುನ್ನ 113 ಮತ್ತು 101 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇದೀಗ ತ್ರಿಶತಕ ಸಿಡಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.